ಸಾರಾಂಶ
ಕಾಫಿ ಬೆಳೆಗಾರರೊಬ್ಬರ ಮೇಲೆ ಕಾಡಾನೆ ದಾಳಿ ನಡೆಸಿದ್ದು ಅವರು ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಹಸುವಿನ ಮೇಲೂ ಆನೆ ದಾಳಿ ನಡೆಸಿದ್ದು ಹಸು ಸಾವನ್ನಪ್ಪಿದೆ.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಕಾಫಿ ಬೆಳೆಗಾರರೊಬ್ಬರ ಮೇಲೆ ಕಾಡಾನೆ ದಾಳಿ ನಡೆಸಿದ್ದು, ಅವರು ಗಂಭೀರ ಗಾಯಗೊಂಡ ಘಟನೆ ಪೇರೂರು ಗ್ರಾಮದಲ್ಲಿ ಶನಿವಾರ ನಡೆದಿದೆ. ಈ ಸಂದರ್ಭ ಹಸುವಿನ ಮೇಲೂ ಆನೆ ದಾಳಿ ನಡೆಸಿದ್ದು, ಹಸು ಸಾವನ್ನಪ್ಪಿದೆ.ಬಲ್ಲಮಾವಟ್ಟಿ ಗ್ರಾಮ ಪಂಚಾಯಿತಿಯ ಪೇರೂರು ಗ್ರಾಮದ ನಿವಾಸಿ, ಕಾಫಿ ಬೆಳೆಗಾರ ಅಪ್ಪಚ್ಚಿರ ಹ್ಯಾರಿ ಪೊನ್ನಪ್ಪ ಗಾಯಗೊಂಡವರು.
ಹ್ಯಾರಿ ಪೊನ್ನಪ್ಪ, ತಮ್ಮ ತೋಟದಿಂದ ಕೆಲಸ ಮುಗಿಸಿ ಶನಿವಾರ ಸಂಜೆ ಮನೆಗೆ ಹಿಂತಿರುಗುವ ಸಂದರ್ಭ ಪೇರೂರಿನಲ್ಲಿರುವ ಮಚ್ಚೂರ ಮಂದ್ ಸಮೀಪ ಕಾಡಾನೆ ಅಟ್ಟಾಡಿಸಿದ್ದು, ಈ ವೇಳೆ ಅವರು ತಂತಿ ಬೇಲಿ ತಾಗಿ ಬಿದ್ದಿದ್ದಾರೆ. ಅಲ್ಲಿಗೆ ಕಾಡಾನೆ ತನ್ನ ದಂತ (ಕೋರೆ)ದೊಇಂದ ಹ್ಯಾರಿ ಪೊನ್ನಪ್ಪ ಅವರ ಎದೆಯ ಭಾಗಕ್ಕೆ ತಿವಿದಿದೆ. ಸಮೀಪದಲ್ಲಿದ್ದವರು ಭಯದಿಂದ ಚೀರಾಡಿದ ಕಾರಣ ಆನೆ ಓಡಿದೆ. ಇದೇ ಸಂದರ್ಭದಲ್ಲಿ ಮಚ್ಚೂರ ಹರೀಶ್ ಬಿದ್ದಪ್ಪ ಎಂಬವರು ಗದ್ದೆಯಲ್ಲಿ ಮೇಯಲು ಬಿಟ್ಟಿದ್ದ ಹಸುವನ್ನು ಕಾಡಾನೆ ತಿವಿದು, ತೀವ್ರ ಗಾಯಗೊಳಿಸಿದ್ದು, ಭಾನುವಾರ ಹಸು ಮೃತಪಟ್ಟಿದೆ.ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹ್ಯಾರಿ ಪೊನ್ನಪ್ಪ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ, ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ತುರ್ತು ಚಿಕಿತ್ಸೆಗಾಗಿ ಮೈಸೂರು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಶು ವೈದ್ಯಾಧಿಕಾರಿ ಡಾ.ಚೇತನ್, ಸಿಬ್ಬಂದಿ ಭಾನುವಾರ ಹಸುವಿನ ಪೋಸ್ಟ್ ಮಾರ್ಟಂ ಮಾಡಿದರು.ಉಪವಲಯ ಅರಣ್ಯಾಧಿಕಾರಿ ಕಾಳೇಗೌಡ, ಸಿಬ್ಬಂದಿ ಉಪಸ್ಥಿತರಿದ್ದರು. ನಾಪೋಕ್ಲು ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಕೇಸು ದಾಖಲಿಸಿದ್ದಾರೆ.
;Resize=(128,128))
;Resize=(128,128))
;Resize=(128,128))