ಸಾರಾಂಶ
ಆನೆ ಹಾವಳಿಗೆ ಶಾಶ್ವತ ಪರಿಹಾರಕ್ಕೆ ಒತ್ತಾಯ । ಅರಣ್ಯ ಇಲಾಖೆಗೆ ನುಗ್ಗಲು ಯತ್ನ । 3 ಗಂಟೆ ರಸ್ತೆ ಬಂದ್ । ಸೋಮವಾರದಿಂದಲೇ ಆನೆ ಸೆರೆ ಕಾರ್ಯಾಚರಣೆಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಐದು ದಿನಗಳ ಅಂತರದಲ್ಲಿ ಕಾಡಾನೆ ಇಬ್ಬರನ್ನು ತುಳಿದು ಸಾಯಿಸಿದ ಘಟನೆ ನಡೆದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಸಾರ್ವಜನಿಕರು, ರೈತರು ಸೋಮವಾರ ಘಟನೆ ಖಂಡಿಸಿ ಬಾಳೆಹೊನ್ನೂರು ಹಾಗೂ ಖಾಂಡ್ಯ ಹೋಬಳಿಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸಿದರು.ಕಳೆದ ಬುಧವಾರ ಬನ್ನೂರು ಗ್ರಾಮದಲ್ಲಿ ಕೂಲಿ ಕಾರ್ಮಿಕ ಮಹಿಳೆ ಅನಿತಾರನ್ನು ತುಳಿದು ಸಾಯಿಸಿತ್ತು. ಗುರುವಾರವೇ ಸಾರ್ವಜನಿಕರು ಅರಣ್ಯ ಇಲಾಖೆ ಮುಂಭಾಗ ಪ್ರತಿಭಟಿಸಿ ಆನೆ ಸ್ಥಳಾಂತರಕ್ಕೆ ಕೂಡಲೇ ಕ್ರಮಕ್ಕೆ ಒತ್ತಾಯಿಸಿದಾಗ ಅಧಿಕಾರಿಗಳು ಸಹ ಆನೆ ಸ್ಥಳಾಂತರದ ಭರವಸೆ ನೀಡಿದ್ದರು.ಈ ನಡುವೆ ಭಾನುವಾರ ಅಂಡವಾನೆ ಗ್ರಾಮದಲ್ಲಿ ಸುಬ್ಬೇಗೌಡ ಅವರನ್ನು ಇದೇ ಆನೆ ತುಳಿದು ಸಾಯಿಸಿದೆ. ಈ ಘಟನೆ ನಡೆಯುತ್ತಿದ್ದಂತೆ ರೈತರು, ಸಾರ್ವಜನಿಕರ ಆಕ್ರೋಶ ಭುಗಿಲೆದ್ದಿದ್ದು, ಭಾನುವಾರ ರಾತ್ರಿಯೇ ಅರಣ್ಯ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ರಸ್ತೆ ತಡೆ ನಡೆಸಿದ್ದರು. ಸೋಮವಾರ ಬಾಳೆಹೊನ್ನೂರು ಹಾಗೂ ಖಾಂಡ್ಯದಲ್ಲಿ ಸಂಪೂರ್ಣ ಬಂದ್‌ಗೆ ಕರೆ ನೀಡಿ, ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಮುಚ್ಚಿ ಬೆಂಬಲ ವ್ಯಕ್ತಪಡಿಸಿದರು. ಬೆಳಿಗ್ಗೆ ಆಸ್ಪತ್ರೆ ಆವರಣದಿಂದ ಪ್ರತಿಭಟನಾಕಾರರು ಜೇಸಿ ವೃತ್ತದವರೆಗೆ ಮೆರವಣಿಗೆ ನಡೆಸಿ ಅರಣ್ಯ ಇಲಾಖೆ, ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಬಳಿಕ ಜೇಸಿ ವೃತ್ತದಿಂದ ಅರಣ್ಯ ಇಲಾಖೆ ಕಚೇರಿಗೆ ತೆರಳಿ ಸಭೆ ನಡೆಸಿದರು.
ಮಲೆನಾಡು ನಾಗರಿಕ ರೈತ ಹಿತರಕ್ಷಣಾ ವೇದಿಕೆ ಸದಸ್ಯರು ಸ್ಥಳಕ್ಕೆ ಅರಣ್ಯ ಸಚಿವರು, ಸಂಸದರು, ಜಿಲ್ಲಾಧಿಕಾರಿ ಬಂದು ಶಾಶ್ವತ ಪರಿಹಾರ ಒದಗಿಸಬೇಕು. ಪುಂಡ ಕಾಡಾನೆ ಸೆರೆ ಬಗ್ಗೆ ಕೂಡಲೇ ಕ್ರಮಕೈಗೊಳ್ಳಬೇಕು. ಇದಲ್ಲದೇ ನಮ್ಮ ವಿವಿಧ ಬೇಡಿಕೆಗೆ ತಕ್ಷಣದಲ್ಲಿ ಪರಿಹಾರ ಒದಗಿಸುವಂತೆ ಸಭೆಯಲ್ಲಿ ಒತ್ತಾಯಿಸಿದರು.ಇಲಾಖೆ ಮುಂದೆಯೇ ಧರಣಿ ಕುಳಿತು ವಿರಾಜಪೇಟೆ-ಬೈಂದೂರು ರಾಜ್ಯ ಹೆದ್ದಾರಿ ಬಂದ್ ಮಾಡಿದರು. ಆರಂಭದಲ್ಲಿ ಇದು ರಾಜಕೀಯ ರಹಿತ ಪ್ರತಿಭಟನೆ ಎಲ್ಲರೂ ಕೇಂದ್ರ, ರಾಜ್ಯ ಸರ್ಕಾರದ ಅರಣ್ಯ ನೀತಿಗಳ ವಿರುದ್ಧ ಹೋರಾಡಬೇಕಿದೆ. ಇಲ್ಲಿ ಯಾವುದೇ ರಾಜಕೀಯ ಭಾಷಣ, ಘೋಷಣೆಗೆ ಅವಕಾಶವಿಲ್ಲ ಎಂದು ಹೇಳಲಾಗಿತ್ತು.
ಆದರೆ ಪ್ರತಿಭಟನೆ ಮುಂದುವರಿಯುತ್ತಿದ್ದಂತೆ ಕೆಲ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗುವ ಭರದಲ್ಲಿ ಡೌನ್ ಡೌನ್ ಎಂಎಲ್‌ಎ ಎಂದು ಕೂಗಿದರು. ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್ ಕಾರ್ಯಕರ್ತರು ಅರಣ್ಯ ಕಾಯ್ದೆ, ಹುಲಿ ಯೋಜನೆ, ಬಫರ್ ಜೋನ್ ಮುಂತಾದವನ್ನು ಜಾರಿಗೆ ತಂದಿದ್ದು ಕೇಂದ್ರ ಸರ್ಕಾರ ಎನ್ನುತ್ತಾ ಕೇಂದ್ರದ ವಿರುದ್ಧ ಘೋಷಣೆ ಕೂಗಲಾರಂಭಿಸಿದರು. ಎರಡೂ ಪಕ್ಷದ ಕಾರ್ಯಕರ್ತರ ಘೋಷಣೆಗಗಳ ನಡುವೆ ಮಾತಿನ ಚಕಮಕಿಯೂ ನಡೆದು ಕೈ ಕೈ ಮಿಲಾಯಿಸುವ ಹಂತ ತಲುಪಿತು. ಬಳಿಕ ಶಾಸಕ ರಾಜೇಗೌಡ ಮಧ್ಯ ಪ್ರವೇಶಿಸಿ ಕಾರ್ಯಕರ್ತರನ್ನು ತಡೆದರು. ಆ ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತ್ತು. ನಂತರ ಪ್ರತಿಭಟನೆ ಮುಂದುವರಿದಾಗ ಸಮೀಪದ ಖಾಂಡ್ಯ ಹೋಬಳಿಯಿಂದ ನೂರಾರು ರೈತರು ಆಗಮಿಸಿದಾಗ ಎಲ್ಲರೂ ಸೇರಿ ದಿಢೀರ್ ಅರಣ್ಯ ಇಲಾಖೆ ಕಚೇರಿ ಒಳ ನುಗ್ಗಲು ಪೊಲೀಸರು ಹಾಕಿದ್ದ ಬ್ಯಾರಿಕೇಡ್ ತಳ್ಳಿ ಮುಂದಾದಾಗ ಎಚ್ಚೆತ್ತ ಪೊಲೀಸರು ಕಚೇರಿಗೆ ಬೀಗ ಹಾಕಿದರು. ಅವರನ್ನು ತಡೆಯಲು ಹರಸಾಹಸಪಟ್ಟ ಈ ಸಂದರ್ಭದಲ್ಲಿ ಪೊಲೀಸರು, ಪ್ರತಿಭಟ ನಾಕಾರರ ಮಧ್ಯೆಯೂ ಮಾತಿನ ಚಕಮಕಿ ನಡೆಯಿತು. ನಂತರ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆಗಮಿಸಿದಾಗ ಕಾಡಾನೆ ಸೆರೆಗೆ ಕಾರ್ಯಾಚರಣೆ ಆರಂಭವಾಗದ ಹೊರತು ಸ್ಥಳದಿಂದ ತೆರಳುವುದಿಲ್ಲ. ಕಾಡಾನೆ ದಾಳಿಗೆ ಶಾಶ್ವತ ಪರಿಹಾರದ ಬಗ್ಗೆ ಘೋಷಣೆ ಮಾಡಬೇಕು ಎಂದು ಪಟ್ಟು ಹಿಡಿದರು. ಅಧಿಕಾರಿಗಳು ಮನವೊಲಿಸಿದ ಬಳಿಕ ಪ್ರತಿಭಟನೆ ಸ್ಥಗಿತಗೊಳಿಸಲಾಯಿತು. ಪೊಲೀಸ್ ಐಜಿ ಅಮಿತ್ ಸಿಂಗ್, ಶಿವಮೊಗ್ಗ ಎಸ್ಪಿ ಮಿಥುನ್‌ಕುಮಾರ್, ಚಿಕ್ಕಮಗಳೂರು ಎಸ್ಪಿ ಡಾ.ವಿಕ್ರಮ್ ಅಮಟೆ, ಕೊಪ್ಪ ಡಿವೈಎಸ್ಪಿ ಬಾಲಾಜಿ ಸಿಂಗ್, ಎನ್.ಆರ್.ಪುರ ಸಿಪಿಐ ಗುರು ಕಾಮತ್ ನೇತೃತ್ವದಲ್ಲಿ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಿದ್ದು, ಮುಂಜಾಗರೂಕ ಕ್ರಮವಾಗಿ ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗಿತ್ತು.ಪ್ರತಿಭಟನೆಯಲ್ಲಿ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ವೇದಿಕೆ ಪ್ರಮುಖರಾದ ರತ್ನಾಕರ ಗಡಿಗೇಶ್ವರ, ಅಭಿಷೇಕ್ ಹೊಸಳ್ಳಿ, ರಂಜಿತ್, ಕೆ.ಎಸ್.ರವೀಂದ್ರ, ಬಿ.ಕೆ.ಮಧುಸೂದನ್, ಸುಧೀರ್‌ಕುಮಾರ್ ಮುರೊಳ್ಳಿ, ಟಿ.ಎಂ.ಉಮೇಶ್, ಎಂ.ಎಸ್. ಚನ್ನಕೇಶವ್, ಬಿ.ಸಿ.ಸಂತೋಷ್‌ಕುಮಾರ್, ನವೀನ್ ಕರುವಾನೆ, ಕೌಶಿಕ್ ಪಟೇಲ್, ಮಾಲತೇಶ್ ಸಿಗಸೆ, ಕವಿತಾ ಲಿಂಗ ರಾಜು, ಹೇಮಲತಾ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಹಾಜರಿದ್ದರು.-- (ಬಾಕ್ಸ್)--ಸಂಗಮೇಶ್ವರ: ಅರಣ್ಯ ಇಲಾಖೆ ಸಿಬ್ಬಂದಿಗೆ ದಿಗ್ಬಂಧನಖಾಂಡ್ಯ ಹೋಬಳಿ ಸಂಗಮೇಶ್ವರಪೇಟೆಯ ಅರಣ್ಯ ಇಲಾಖೆ ಕಚೇರಿಯ ಎದುರು ಪ್ರತಿಭಟನೆ ನಡೆಸಿದರು. ಕಚೇರಿ ಒಳಗೆ ಪ್ರತಿಭಟನಾಕಾರರು ನುಗ್ಗುತ್ತಾರೆ ಎಂದು ಅರಿತಿದ್ದ ಪೊಲೀಸರು ಮೊದಲೇ ಗೇಟಿಗೆ ಬೀಗ ಹಾಕಿ ತಡೆದಿದ್ದರು. ಇದರಿಂದ ಆಕ್ರೋಶ ಗೊಂಡ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ವೇದಿಕೆ ಸದಸ್ಯರು ಕಚೇರಿ ಕಂಪೌಂಡ್ ಏರಿ ಆವರಣಕ್ಕೆ ಪ್ರವೇಶಿಸಿದರು. ಬಳಿಕ ಕೆಲವು ಕಿಟಕಿಗಳಿಗೆ ಕಲ್ಲು ಹೊಡೆದರಲ್ಲದೇ, ಅರಣ್ಯ ಇಲಾಖೆ ಕಚೇರಿ ಒಳಗಿದ್ದ ಸಿಬ್ಬಂದಿಗೆ ದಿಗ್ಬಂಧನ ಹಾಕಿದರು.-- (ಬಾಕ್ಸ್)--
ಆನೆ ಸೆರೆಗೆ ಸಕ್ರೆಬೈಲಿನಿಂದ 4 ಕುಮ್ಕಿ ಆನೆಗಳು ಕಾಡಾನೆಯಿಂದ ಇಬ್ಬರ ಸಾವಿನ ಬೆನ್ನಲೇ ಎಚ್ಚೆತ್ತ ಅಧಿಕಾರಿಗಳು, ಜನಪ್ರತಿನಿಧಿಗಳು ಸಕ್ರೇಬೈಲಿನಿಂದ ನಾಲ್ಕು ಕುಮ್ಕಿ ಆನೆ ಗಳನ್ನು ಸೋಮವಾರ ಮಧ್ಯಾಹ್ನವೇ ಬಾಳೆಹೊನ್ನೂರಿಗೆ ಕರೆಸಿದ್ದು. ಅವು ಆಗಮಿಸುತ್ತಿದ್ದಂತೆ ಶಾಸಕ ಟಿ.ಡಿ.ರಾಜೇಗೌಡ ಅರಣ್ಯ ಇಲಾಖೆ ಬಳಿ ಬಂದು ಬರಮಾಡಿಕೊಂಡರು.ಸುದ್ದಿಗಾರರೊಂದಿಗೆ ಮಾತನಾಡಿದ ರಾಜೇಗೌಡ, ಆನೆ ಸೆರೆ ಕಾರ್ಯಾಚರಣೆಗೆ ಸಕ್ರೇಬೈಲಿನಿಂದ ನಾಲ್ಕು ಆನೆಗಳನ್ನು ಕರೆಸ ಲಾಗಿದ್ದು, ಇನ್ನೂ 5 ಆನೆಗಳನ್ನು ಮಂಗಳವಾರದೊಳಗೆ ಕರೆಸಲಾಗುವುದು. ಹತ್ಯೆ ಮಾಡಿದ ಆನೆಯೊಂದಿಗೆ, ದಾಳಿ ಮಾಡುತ್ತಿ ರುವ ಇನ್ನೆರಡು ಆನೆಗಳನ್ನು ಸೆರೆ ಹಿಡಿಯಲು ಕ್ರಮವಹಿಸಲಾಗುವುದು.ಕಾರ್ಯಾಚರಣೆ ಸಂದರ್ಭದಲ್ಲಿ ಸಾರ್ವಜನಿಕರು ಸಿಬ್ಬಂದಿಗೆ ಯಾವುದೇ ತೊಂದರೆ ನೀಡದೆ, ಫೋಟೋ, ವಿಡೀಯೋ ತೆಗೆಯಬಾರದು. ಕಾರ್ಯಾಚರಣೆ ವ್ಯಾಪ್ತಿಯಲ್ಲಿ ಸಾರ್ವಜನಿಕರು ಸಂಚರಿಸಬಾರದು. ಕಾರ್ಯಾಚರಣೆಗೆ ಶಿವಮೊಗ್ಗದಿಂದ ಅರವಳಿಕೆ ತಜ್ಞ ಡಾ.ಮುರುಳಿ ಆಗಮಿಸಿದ್ದಾರೆ. ಇವರು ಈ ಹಿಂದೆ ಎಲೆ ಮಡಲುವಿನಲ್ಲಿ ನಡೆದ ಆನೆ ಕಾರ್ಯಾಚರಣೆಯಲ್ಲೂ ಆನೆಗೆ ಚುಚ್ಚುಮದ್ದು ನೀಡಿದ್ದರು. ಈ ವೇಳೆ ಯಾವುದೇ ಅನಾಹುತ ಸಂಭವಿಸಬಾರದು ಎಂಬ ಆಶಯ ನಮ್ಮದು ಎಂದರು. -- ಕೋಟ್ ೧ -- ಆನೆ ಹಿಡಿವ ಕಾರ್ಯಾಚರಣೆ ಸೋಮವಾರವೇ ಆರಂಭಿಸಿದ್ದು, ಇದಕ್ಕಾಗಿ ಸಕ್ರೇಬೈಲಿನಿಂದ ಕುಮ್ಕಿ ಆನೆಗಳು ಈಗಾಗಲೇ ಹೊರಟಿವೆ. ಇದಕ್ಕೆ ಡಿಎಫ್‌ಒ ಸಕಲ ಸಿದ್ಧತೆ ಮಾಡಿದ್ದಾರೆ. ಇಲ್ಲಿನ ಘಟನೆಗಳ ಬಗ್ಗೆ ಅರಣ್ಯ ಸಚಿವರ ಗಮನಕ್ಕೂ ತರಲಾಗಿದೆ. ಆನೆ ತುಳಿತದಿಂದ ಮೃತ ಸುಬ್ಬೇಗೌಡ ಕುಟುಂಬದಲ್ಲಿ ಒಬ್ಬರಿಗೆ ಅರಣ್ಯ ಇಲಾಖೆಯಲ್ಲಿ ಅವರ ವಿದ್ಯಾರ್ಹತೆಗೆ ಅನುಗುಣವಾಗಿ ದಿನಗೂಲಿ ನೀಡುವ ಬಗ್ಗೆ ಕ್ರಮಕೈಗೊಳ್ಳಲಾಗುವುದು. ಖಾಯಂ ಕೆಲಸದ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಕಾಡಾನೆ ಹಾವಳಿ ಕುರಿತು ಸರ್ಕಾರದೊಂದಿಗೆ ಚರ್ಚಿಸಿ ಶಾಶ್ವತ ಕ್ರಮಕ್ಕೆ ಯತ್ನಿಸಲಾಗುವುದು. ರೈತರ ರಕ್ಷಣೆಗೆ ಎಲ್ಲಾ ವ್ಯವಸ್ಥೆ, ಅವಶ್ಯಕತೆಯಿರುವವರಿಗೆ ಗನ್ ಲೈಸೆನ್ಸ್ ಕೊಟ್ಟಿದ್ದು, ಜೀವ ರಕ್ಷಣೆಗಾಗಿ ಏರ್ ಫೈರ್ ಮಾಡಲು ಅವಕಾಶವಿದೆ. - ಮೀನಾ ನಾಗರಾಜ್, ಜಿಲ್ಲಾಧಿಕಾರಿ. -- ಕೋಟ್ ೨-ಎಲ್ಲಾ ಸರ್ಕಾರದಲ್ಲು ಕಾಡುಪ್ರಾಣಿ-ಮಾನವರ ಸಂಘರ್ಷ ಉಂಟಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಅರಣ್ಯ ಸಚಿವರು, ಸರ್ಕಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸುತ್ತೇನೆ. ಪಕ್ಷಾತೀತ ಹೋರಾಟಕ್ಕೆ ನಾನು ಸಂಪೂರ್ಣ ಬೆಂಬಲ ನೀಡಲಿದ್ದೇನೆ. 5 ದಿನಗಳ ಅಂತರದಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ಅತ್ಯಂತ ನೋವಿನ ಸಂಗತಿ. ಪುಂಡ ಕಾಡಾನೆ ಹಿಡಿಯಲು ಸೋಮವಾರದಿಂದಲೇ ಕಾರ್ಯಾಚರಣೆ ಆರಂಭವಾಗಿದೆ. ಹದಿನೈದು ದಿನಗಳ ಒಳಗೆ ಅರಣ್ಯ ಸಚಿವರನ್ನು ಬಾಳೆಹೊನ್ನೂರಿಗೆ ಕರೆಯಿಸಿ ರೈತ ಹಿತರಕ್ಷಣಾ ಸಮಿತಿ ಸದಸ್ಯರು, ಜನ ಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಪ್ರಮುಖರೊಂದಿಗೆ ಚರ್ಚಿಸಿ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುವುದು. ಪ್ರಾಣಿ, ಮಾನವ ಸಂಘರ್ಷದ ಬಗ್ಗೆ ಮುಖ್ಯಮಂತ್ರಿಗಳ ಬಳಿಯೂ ಚರ್ಚೆ ಮಾಡಿದ್ದು, ಮನುಷ್ಯರ ಮೇಲೆ ದಾಳಿ ಮಾಡುವ ಕಾಡುಕೋಣ, ಆನೆಗಳನ್ನು ಹಿಡಿದು ಸ್ಥಳಾಂತರಿಸಬೇಕು ಎಂದು ಮನವಿ ಮಾಡಲಾಗಿದೆ. ಅರಣ್ಯದ ಗಡಿಭಾಗದಲ್ಲಿ ರೇಲ್ವೇ ಬ್ಯಾರಿಕೇಡ್ ಹಾಕಿ ಆನೆಗಳು ಅರಣ್ಯದಲ್ಲಿ ಮಾತ್ರ ಇರುವಂತೆ ಮಾಡಲಾಗುವುದು. - ಟಿ.ಡಿ.ರಾಜೇಗೌಡ, ಶಾಸಕ.-- ಕೋಟ್ --ಕಾಡಾನೆಗಳನ್ನು ಕೂಡಲೇ ಸ್ಥಳಾಂತರ ಮಾಡಲು ಒತ್ತಾಯಿಸಿದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ನಾವು ಅರಣ್ಯಕ್ಕೆ ಪ್ರವೇಶಿಸಿ ಆನೆಗೆ ಹೊಡೆದರೆ ನಮ್ಮ ಮೇಲೆ ಅಧಿಕಾರಿಗಳು ಕೇಸು ದಾಖಲಿಸುತ್ತಾರೆ. ಆನೆ ದಾಳಿಗೆ ಬೆಳೆ ನಷ್ಟವಾದರೆ ಕೇಸು ಹಾಕಲು ಅವಕಾಶವಿಲ್ಲ. ಅರಣ್ಯ ಇಲಾಖೆಯಲ್ಲಿ ಒತ್ತುವರಿ ತೆರವಿಗೆ 50-60 ಸಿಬ್ಬಂದಿ ಇದ್ದಾರೆ. ಆನೆ ಓಡಿಸಲು ಐದಾರು ಸಿಬ್ಬಂದಿಯೂ ಇರಲ್ಲ ಎಂಬುದು ನಾಚಿಕೆಗೇಡಿನ ವಿಷಯ. ಆನೆ ನಮ್ಮ ಜಮೀನಿಗೆ ಬಂದು ಹಾನಿ ಮಾಡಿದರೆ ಅದನ್ನು ಹೊಡೆಯಲು ಅನುಮತಿ ಇದೆಯೇ ಎಂದು ಅಧಿಕಾರಿ, ಶಾಸಕರು ತಿಳಿಸಬೇಕು. ನಮ್ಮ ಜೀವ ರಕ್ಷಣೆ ಮಾಡಲಾದರೂ ಸಹ ದಾಳಿ ಸಂದರ್ಭದಲ್ಲಿ ಆನೆಗೆ ಗುಂಡು ಹೊಡೆಯಲು ಅವಕಾಶ ನೀಡಬೇಕು. ಈ ಬಗ್ಗೆ ಸರ್ಕಾರದ ನಿಲುವೇನು ಎಂದು ಸ್ಪಷ್ಟಪಡಿಸ ಬೇಕು. ಕೇವಲ ಆನೆ ಜೀವಕ್ಕೆ ಮಾತ್ರ ಬೆಲೆ, ಮನುಷ್ಯನ ಜೀವಕ್ಕೆ ಬೆಲೆ ಇಲ್ಲ. ಮಲೆನಾಡಲ್ಲಿ 8 ತಿಂಗಳಲ್ಲಿ ಐವರು ಸಾವನ್ನಪ್ಪಿದ್ದಾರೆ. ಆದರೂ ಅರಣ್ಯ ಸಚಿವರ ಹೇಳಿಕೆ, ಆದೇಶಗಳು ಮಲೆನಾಡಿಗರಿಗೆ ಆತಂಕ ಮೂಡಿಸಿ ಇಲ್ಲಿ ಹೇಗೆ ಬದುಕುವುದು ಎಂಬ ಪ್ರಶ್ನೆ ಉಂಟುಮಾಡಿದೆ.
ಮಲೆನಾಡಿನಲ್ಲಿ ಆನೆಗಳು ಹೆಚ್ಚಾಗಿದ್ದು, ಇದರಿಂದ ಕಾಡು ನಾಶವಾಗುತ್ತಿದೆ. ಅಧಿಕಾರಿಗಳು, ಸಚಿವರು ಅರ್ಥ ಮಾಡಿ ಕೊಳ್ಳಬೇಕು. ನಮ್ಮ ಜಮೀನಿಗೆ ಆನೆ ಬಂದಾಗ ನಾವು ಕ್ರಮ ತೆಗೆದುಕೊಳ್ಳಲು ಅವಕಾಶವಿದೆ ಎಂದು ತಿಳಿಸಬೇಕು. ಆನೆ ದಾಳಿಯಿಂದ ಮೃತಪಟ್ಟರೆ ₹೧೫ ಲಕ್ಷ ನೀಡಿದರೆ ಸಮಸ್ಯೆ ಬಗೆಹರಿಯಲಿದೆಯೇ?- ಡಿ.ಎನ್.ಜೀವರಾಜ್, ಮಾಜಿ ಸಚಿವ. - ಕೋಟ್ 4ಕಾಡಾನೆ ಹಾವಳಿ ಬಗ್ಗೆ ಜಿಲ್ಲಾಧಿಕಾರಿ, ಶಾಸಕರು, ಅಧಿಕಾರಿಗಳಿಗೆ ನಿರಂತರ ಮನವಿ ನೀಡಿದರೂ ಸ್ಪಂದಿಸಿಲ್ಲ. ಪುಂಡಾನೆ ಸೇರಿ ಈ ಭಾಗದಲ್ಲಿ ಇರುವ ಎಲ್ಲಾ ಕಾಡಾನೆಗಳನ್ನು ಶಾಶ್ವತವಾಗಿ ಸ್ಥಳಾಂತರಿಸಬೇಕು. ನಮ್ಮ ಪ್ರಮುಖ ಬೇಡಿಕೆ ಕುರಿತಂತೆ ಇನ್ನು 15 ದಿನಗಳಲ್ಲಿ ಅರಣ್ಯ ಸಚಿವರು ಬಾಳೆಹೊನ್ನೂರಿನಲ್ಲಿ ರೈತರ ಸಮ್ಮುಖದಲ್ಲಿ ಅರಣ್ಯ ಸಮಸ್ಯೆಗಳ ಬಗ್ಗೆ ಚರ್ಚಿಸಲು ವ್ಯವಸ್ಥೆ ಮಾಡಲಾಗುವುದು ಎಂಬ ಭರವಸೆ ಶಾಸಕರು ನೀಡಿದ್ದಾರೆ. ನಮ್ಮ ಬೇಡಿಕೆ ಈಡೇರದ ಹೊರತು ಅಧಿಕಾರಿಗಳು, ರಾಜಕಾರಣಿಗಳ ಸುಳ್ಳು ಆಶ್ವಾಸನೆ ಯಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಈಗಾಗಲೇ ಭದ್ರಾ ಅಭಯಾರಣ್ಯದಲ್ಲಿ ಆನೆಗಳಿಗೆ ಬಫರ್ ಜೋನ್ ವ್ಯವಸ್ಥೆ ಆಗಿದೆ. ಪುನಃ ಆನೆ ವಿಹಾರಧಾಮ ಆರಂಭಿಸಲು ವ್ಯವಸ್ಥೆ ಆಗುತ್ತಿದೆ. ಇದು ಅಗತ್ಯವಿದೆಯೇ? ಈ ಬಗ್ಗೆ ಶಾಸಕರು ಸಹ ವಿರೋಧಿಸಬೇಕು.ಎಂ.ಎನ್.ನಾಗೇಶ್,ಕ್ಷೇತ್ರಾಧ್ಯಕ್ಷ , ಮಲೆನಾಡು ನಾಗರಿ ಕ ರೈತ ಹಿತರಕ್ಷಣಾ ವೇದಿಕೆ --೨೮ಬಿಹೆಚ್‌ಆರ್ ೧: ಬಾಳೆಹೊನ್ನೂರಿನಲ್ಲಿ ಅರಣ್ಯ ಇಲಾಖೆ ಕಚೇರಿಗೆ ನುಗ್ಗಲು ಯತ್ನಿಸಿದ್ದ ಪ್ರತಿಭಟನಾಕಾರನ್ನು ಪೊಲೀಸರು ತಡೆದರು.೨೮ಬಿಹೆಚ್‌ಆರ್ ೨: ಆನೆ ದಾಳಿ ಖಂಡಿಸಿ ಬಾಳೆಹೊನ್ನೂರಲ್ಲಿ ಮಲೆನಾಡು ನಾಗರೀಕ ರೈತ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ವಿವಿಧ ಪಕ್ಷಗಳ ಮುಖಂಡರು, ಸಾರ್ವಜನಿಕರು ಪಾಲ್ಗೊಂಡಿದ್ದರು.
೨೮ಬಿಹೆಚ್‌ಆರ್ ೩: ಆನೆ ದಾಳಿಗೆ ಇಬ್ಬರು ಮೃತಪಟ್ಟ ಘಟನೆ ಖಂಡಿಸಿ ವಿವಿಧ ಪಕ್ಷಗಳ ಮುಖಂಡರು ಬಾಳೆಹೊನ್ನೂರಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.೨೮ಬಿಹೆಚ್‌ಆರ್ ೪: ಬಾಳೆಹೊನ್ನೂರಿಗೆ ಪುಂಡ ಕಾಡಾನೆ ಸೆರೆ ಹಿಡಿಯಲು ಬಂದಿರುವ ಕುಮ್ಕಿ ಆನೆ.