ಭೀಮನಕಿಂಡಿ ಅರಣ್ಯ ಪ್ರದೇಶದಿಂದ ನಿಟ್ಟೂರು, ಸರಗೂರು, ಎನ್.ಹಲಸಹಳ್ಳಿ, ಲಿಂಗಪಟ್ಟಣ ಹೊರವಲಯದ ಕೃಷಿ ಪ್ರದೇಶದ ಕಡೆಗೆ ಬಂದ ಆನೆಗಳು ರೈತರ ಫಸಲನ್ನು ತಿಂದು, ತುಳಿದು ಹಾಕಿವೆ. ಆನೆಗಳು ಆಗಮಿಸಿದ ಮಾಹಿತಿ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಬೆಳಗ್ಗೆಯಿಂದಲೇ ಆನೆಗಳನ್ನು ಕಾಡಿಗಟ್ಟುವ ಕೆಲಸವನ್ನು ತ್ವರಿತಗತಿಯಲ್ಲಿ ಮಾಡಿದರು.

ಕನ್ನಡಪ್ರಭ ವಾರ್ತೆ ಹಲಗೂರು

ಕನಕಪುರ ತಾಲೂಕಿನ ಭೀಮನಕಿಂಡಿ ಅರಣ್ಯ ಪ್ರದೇಶದಿಂದ ಬಂದಿದ್ದ ಎಂಟಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಟೊಮೆಟೊ, ರಾಗಿ ಮತ್ತು ಭತ್ತದ ಫಸಲನ್ನು ತಿಂದು, ತುಳಿದು ನಾಶ ಮಾಡಿರುವ ಘಟನೆ ಸಮೀಪದ ನಿಟ್ಟೂರು ಗ್ರಾಮ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆದಿದೆ.

ಭೀಮನಕಿಂಡಿ ಅರಣ್ಯ ಪ್ರದೇಶದಿಂದ ನಿಟ್ಟೂರು, ಸರಗೂರು, ಎನ್.ಹಲಸಹಳ್ಳಿ, ಲಿಂಗಪಟ್ಟಣ ಹೊರವಲಯದ ಕೃಷಿ ಪ್ರದೇಶದ ಕಡೆಗೆ ಬಂದ ಆನೆಗಳು ರೈತರ ಫಸಲನ್ನು ತಿಂದು, ತುಳಿದು ಹಾಕಿವೆ. ಆನೆಗಳು ಆಗಮಿಸಿದ ಮಾಹಿತಿ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಬೆಳಗ್ಗೆಯಿಂದಲೇ ಆನೆಗಳನ್ನು ಕಾಡಿಗಟ್ಟುವ ಕೆಲಸವನ್ನು ತ್ವರಿತಗತಿಯಲ್ಲಿ ಮಾಡಿದರು.

ಆದರೆ, ಅಷ್ಟರಲ್ಲಾಗಲೇ ನಿಟ್ಟೂರು ಗ್ರಾಮದ ಗಂಗರಾಜುರಿಗೆ ಸೇರಿದ ಟೊಮೆಟೊ ತೋಟ, ಲಕ್ಷ್ಮಯ್ಯರಿಗೆ ಸೇರಿದ ಬಾಳೆ ಗಿಡಗಳು, ಈರಪ್ಪ ಅವರ ಕುಯ್ಲಿಗೆ ಬಂದಿದ್ದ ಭತ್ತದ ಫಸಲು, ಕಾಳಯ್ಯ ಅವರಿಗೆ ಸೇರಿದ ಕನಕಾಂಬರ ಬೆಳೆ ಫಸಲು ಹಾನೀಗೀಡಾಗಿದ್ದವು.

ರೈತ ಗಂಗಯ್ಯ ಮಾತನಾಡಿ, ಕಷ್ಟ ಪಟ್ಟು ಟೊಮೆಟೊ ಬೆಳೆದಿದ್ದು, ಉತ್ತಮ ಇಳುವರಿ ಬಂದಿತ್ತು. ಪ್ರಸ್ತುತ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಸಹ ಇದ್ದು, ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದೆವು. ಆನೆ ದಾಳಿಯಿಂದ ಕಟಾವಿಗೆ ಬಂದಿದ್ದ ಟೊಮೆಟೊ ಗಿಡಗಳು ನೆಲಕಚ್ಚಿವೆ. ಪರಿಣಾಮ ಅಪಾರ ನಷ್ಟ ಉಂಟಾಗಿದೆ.

ನಷ್ಟಕ್ಕೀಡಾದ ಫಸಲಿಗೆ ಸೂಕ್ತ ಪರಿಹಾರ ನೀಡಬೇಕು. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಕಾಡು ಪ್ರಾಣಿಗಳು ಕಾಡಿನಿಂದ ಜನವಸತಿ ಪ್ರದೇಶದತ್ತ ಬರದಂತೆ ತಡೆಗಟ್ಟಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ರೈತ ಮನು ಮಾತನಾಡಿ, ಕಾಡು ಪ್ರಾಣಿಗಳ ದಾಳಿಯಿಂದ ಫಸಲು ರಕ್ಷಿಸಿಕೊಳ್ಳುವ ಜೊತೆಗೆ ನಮ್ಮ ಜೀವ ರಕ್ಷಣೆ ಮಾಡಿಕೊಳ್ಳಬೇಕಾದ ಆತಂಕ ಎದುರಿಸುವಂತಾಗಿದೆ. ದಿನನಿತ್ಯ ಕಾಡು ಪ್ರಾಣಿಗಳಾದ ಜಿಂಕೆ, ಹಂದಿ ಮತ್ತು ಆನೆ ದಾಳಿಯಿಂದ ಫಸಲನ್ನು ಉಳಿಸಿಕೊಳ್ಳಲು ರಾತ್ರಿಯಿಡೀ ಜಮೀನಿನಲ್ಲಿ ಉಳಿಯಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ನೋವು ತೋಡಿಕೊಂಡರು.

ರೈತರಿಗೆ ಆತಂಕ ಉಂಟು ಮಾಡಿದ್ದ ಚಿರತೆ ಬೋನಿನಲ್ಲಿ ಸೆರೆ

ಕೆ.ಆ‌ರ್.ಪೇಟೆ:

ತಾಲೂಕಿನ ಮುದುಗೆರೆ ಗ್ರಾಮದ ಬಳಿ ಸಾಕು ಪ್ರಾಣಿಗಳನ್ನು ತಿಂದು ರೈತರಿಗೆ ನಿತ್ಯ ಆತಂಕ ಉಂಟು ಮಾಡುತ್ತಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬೋನಿಟ್ಟು ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಗ್ರಾಮದ ರೈತ ರವೀಶ್ ಅವರಿಗೆ ಸೇರಿದ 3 ಮೇಕೆಗಳನ್ನು ಒಂದೇ ದಿನ ಹೊತ್ತೊಯ್ದು ತಿಂದು ಹಾಕುವ ಮೂಲಕ ಆತಂಕ ಸೃಷ್ಟಿಸಿದ್ದ ಚಿರತೆಯು ಕಳೆದ ಒಂದು ವಾರದಿಂದ ನಿತ್ಯ ಮದುಗೆರೆ ಗ್ರಾಮದ ಕಾಳಶೆಟ್ಟಿ, ತಿಮ್ಮಮ್ಮ, ದೊಡ್ಡಶೆಟ್ಟಿ, ಸಂಪಿಗೆಶೆಟ್ಟಿ, ಕೃಷ್ಣಗೌಡ ಅವರ ಜಮೀನಿನ ಬಳಿ ಕಾಣಿಸಿಕೊಂಡು ಸಾಕು ಪ್ರಾಣಿಗಳನ್ನು ತಿನ್ನಲು ಹೊಂಚು ಹಾಕುತ್ತಿತ್ತು.

ಇದನ್ನು ಕಣ್ಣಾರೆ ಕಂಡ ರೈತರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಚಲನ-ವಲದದ ಬಗ್ಗೆ ಮಾಹಿತಿ ನೀಡಿ ದೂರು ನೀಡಿದ್ದರು.

ಈ ದೂರಿನ ಮೇರೆಗೆ ಕಾರ್ಯ ಪ್ರವೃತ್ತರಾದ ತಾಲೂಕು ಅರಣ್ಯ ಸಂರಕ್ಷಣಾಧಿಕಾರಿ (ಆರ್‌ಎಫ್‌ಒ) ಅನಿತಾ ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿ ನಂದಕುಮಾ‌ರ್ ನೇತೃತ್ವದಲ್ಲಿ ಬೋನಿಟ್ಟು ಕಾರ್ಯಾಚರಣೆ ನಡೆಸಿದ್ದರು. ಚಿರತೆಯು ಬೋನಿನಲ್ಲಿ ಸೆರೆಯಾಗಿದೆ.

ಇದರಿಂದ ಮದುಗೆರೆ, ಮತ್ತೀಕೆರೆ ಗ್ರಾಮಗಳ ರೈತರಲ್ಲಿ ಆವರಿಸಿದ್ದ ಆತಂಕ ದೂರವಾಗಿದೆ. ಗ್ರಾಮಸ್ಥರ ದೂರನ್ನು ಆಲಿಸಿ ಸಕಾಲಕ್ಕೆ ಬೋನಿಟ್ಟು ಚಿರತೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿರುವ ಆರ್‌ಎಫ್‌ಒ ಅನಿತಾ ಹಾಗೂ ಎಆ‌ರ್‌ಎಫ್‌ಒ ನಂದಕುಮಾರ್ ಮತ್ತು ಸಿಬ್ಬಂದಿಗೆ ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.