ಸಿದ್ದಾಪುರ: ಕಾಫಿ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ ಮಾಡಿದ ಪರಿಣಾಮ ಕಾರ್ಮಿಕ ಮಹಿಳೆ ಗಾಯಗೊಂಡು ಇತರ ಕಾರ್ಮಿಕರು ಪ್ರಾಣಾಪಾಯದಿಂದ ಪಾರದ ಘಟನೆ ವಿರಾಜಪೇಟೆ ತಾಲೂಕಿನ ಮಾಲ್ದಾರೆ ಸಮೀಪದ ತಟ್ಟಳ್ಳಿಯಲ್ಲಿ ನಡೆದಿದೆ.ಮಧ್ಯಾಹ್ನದ ವೇಳೆ ಸಮೀಪದ ಕಾಫಿ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರ ಮೇಲೆ ದಾಳಿಗೆ ಯತ್ನಿಸಿದ ಸಂದರ್ಭ ಕಾರ್ಮಿಕ ಮಹಿಳೆ ಸುನಿತಾ ಕಾಡಾನೆ ದಾಳಿಯಿಂದ ಬಿದ್ದು ಗಂಭೀರ ಗಾಯಗೊಂಡು ಮಾಲ್ದಾರೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಬಳಿಕ ಸಿದ್ದಾಪುರ ಆಸ್ಪತ್ರೆಗೆ ದಾಖಲಾಗಿದ್ದಾರೆ.ಕಾಫಿ ತೋಟದಲ್ಲಿದ್ದ ಇತರ ಕಾರ್ಮಿಕರು ಪ್ರಾಣ ಪಾಯದಿಂದ ಓಡಿ ಪಾರಾಗಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಆರ್ ಆರ್ ಟಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಕಾಫಿ ತೋಟದಲ್ಲಿದ್ದ ಕಾಡಾನೆಯನ್ನು ಕಾಡಿಗಟ್ಟಲು ಮುಂದಾಗಿದ್ದಾರೆ.ಕಲ್ಲಳ ತಟ್ಟಳ್ಳಿ ಮಾರ್ಗದ ರಸ್ತೆಯಲ್ಲಿ ಕಾರ್ಮಿಕರನ್ನು ಕರತಂದಿದ್ದ ಜೀಪು ನಿಲ್ಲಿಸಲಾಗಿತ್ತು. ಕಾಫಿ ತೋಟದಿಂದ ರಸ್ತೆಗೆ ಬಂದ ಕಾಡಾನೆ ಪ್ರವೀಣ ಎಂಬವರಿಗೆ ಸೇರಿದ ಜೀಪಿನ ಮೇಲೆ ದಾಳಿ ಮಾಡಿ ಜಖಂಗೊಳಿಸಿದೆ.
ಆನೆ ಅಟ್ಟಲು ತೆರಳಿದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೂ ದಾಳಿಗೆತ್ನಿಸಿದ ಸಂದರ್ಭ ಇಬ್ಬರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.ನಂತರ ಆನೆಯನ್ನು ಕಾಡಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಕೆಲ ದಿನಗಳಿಂದ ನಿರಂತರ ದಾಳಿ ಮಾಡುತ್ತಿರುವ ಕಾಡಾನೆ ದಿನನಿತ್ಯ ಕಾರ್ಮಿಕರ ಮೇಲೆ ದಾಳಿಗೆ ಮುಂದಾಗುತ್ತಿದ್ದು ಆತಂಕ ಸೃಷ್ಟಿಸುತ್ತಿರುವ ಕಾಡಾನೆಯನ್ನು ಸೆರೆಹಿಡಿದು ಸ್ಥಳಾಂತರಿಸಬೇಕೆಂದು ಕಾರ್ಮಿಕ ಸಂಘಟನೆಯ ಮುಖಂಡ ಮಣಿ ಒತ್ತಾಯಿಸಿದ್ದಾರೆ