ಗೌರಿ-ಗಣೇಶ ಹಬ್ಬದಂದೇ ಕಾಡಾನೆ ದಾಳಿಗೆ ರೈತ ಬಲಿಯಾದ ಘಟನೆ ಬೇಗೂರು-ಹೆಡಿಯಾಲ ರಸ್ತೆ ಬಳಿ ಸೋಮವಾರ ಮುಂಜಾನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಗೌರಿ-ಗಣೇಶ ಹಬ್ಬದಂದೇ ಕಾಡಾನೆ ದಾಳಿಗೆ ರೈತ ಬಲಿಯಾದ ಘಟನೆ ಬೇಗೂರು-ಹೆಡಿಯಾಲ ರಸ್ತೆ ಬಳಿ ಸೋಮವಾರ ಮುಂಜಾನೆ ನಡೆದಿದೆ.

ತಾಲೂಕಿನ ಕೋಟೆಕೆರೆ ಗ್ರಾಮದ ಜನ್ನೂರು ನಾಯಕ (೬೫) ಮೃತ ರೈತ. ಅರಿಶಿಣ ಬೆಳೆ ಜಮೀನಿಗೆ ತೆರಳಿದ್ದಾಗ ದಾಳಿ ನಡೆಸಿದ ಕಾಡಾನೆ ಒದ್ದು ಎಸೆದು ಹೋಗಿದೆ. ನೆರೆ ಜಮೀನಿನ ರೈತ ಬಂದು ಜನ್ನೂರು ನಾಯಕನ ನೋಡಿದಾಗ ಜೀವವಿತ್ತು. ತಕ್ಷಣವೇ ಖಾಸಗಿ ಆ್ಯಂಬುಲೆನ್ಸ್‌ನಲ್ಲಿ ಮೈಸೂರು ಜೆಎಸ್‌ಎಸ್‌ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗ ಮಧ್ಯವೇ ಮೃತಪಟ್ಟರೆಂದು ತಿಳಿದು ಬಂದಿದೆ.

ಕಾಡಾನೆ ದಾಳಿ ಸುದ್ದಿ ತಿಳಿಯುತ್ತಿದ್ದಂತೆಯೇ ಕೋಟೆಕೆರೆ ಸುತ್ತ ಮುತ್ತಲಿನ ರೈತರು ಹಾಗೂ ರೈತಸಂಘಟನೆಗಳ ಕಾರ್ಯಕರ್ತರು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ವಲಯ ಕಚೇರಿಗೆ ಧಾವಿಸಿದರು. ಈ ಸಮಯದಲ್ಲಿ ಬೇಗೂರು ಪೊಲೀಸರು ಓಂಕಾರ ವಲಯ ಅರಣ್ಯ ಕಚೇರಿ ಹೆಬ್ಬಾಗಿಲ ಮುಂದೆ ಸರ್ಪಗಾವಲು ಹಾಕಿ ತಡೆಯೊಡ್ಡಿದರು. ನಂತರ ರೈತಸಂಘಟನೆಗಳ ಮುಖಂಡರು, ಕುರುಬರಹುಂಡಿ, ಹಂಚೀಪುರ, ಕೊತ್ತನಹಳ್ಳಿ ಗ್ರಾಮದ ರೈತರು ಹಾಗೂ ಮೃತನ ಕುಟುಂಬಸ್ಥರು ಜಮಾಯಿಸಿದಾಗ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಯಿತು.

ರೈತಸಂಘದ ಮುಖಂಡರು ಕೆಲ ಕಾಲ ಓಂಕಾರ ವಲಯ ಕಚೇರಿ ಆವರಣದೊಳಗೆ ಧರಣಿ ನಡೆಸಿ ಅರಣ್ಯ ಇಲಾಖೆ ಹಾಗೂ ಸ್ಥಳೀಯ ಶಾಸಕ ಮತ್ತು ಅರಣ್ಯ ಸಚಿವರ ವಿರುದ್ಧ ದಿಕ್ಕಾರ ಕೂಗಿದರು. ಇದೇ ವೇಳೆ ಸ್ಥಳಕ್ಕಾಗಮಿಸಿದ ಬಂಡೀಪುರ ಪ್ರಭಾರ ಡಿಸಿಎಫ್‌ ಶುಭಂಗ ಸಿಂಗ್‌ ತನ್ವರ್‌ ಕಂಡು ರೈತರು ಆಕ್ರೋಶ ಹೊರ ಹಾಕಿ ಧಿಕ್ಕಾರ ಮೊಳಗಿಸಿದರು.

ಶಾಸಕ ಭೇಟಿ:

ಶಾಸಕ ಎಚ್.ಎಂ. ಗಣೇಶ್‌ ಪ್ರಸಾದ್‌ ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರು ಹಾಗೂ ಮೃತ ಕುಟುಂಬಸ್ಥರೊಂದಿಗೆ ಮಾತನಾಡಿದರು. ಈ ಸಮಯದಲ್ಲಿ ಶಾಸಕರು ಹಾಗೂ ಪ್ರತಿಭಟನಕಾರರ ನಡುವೆಯೂ ಮಾತಿನ ಚಕಮಕಿ ನಡೆಯಿತು. ಮೃತನ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ ೨೦ ಲಕ್ಷ ಪರಿಹಾರ ಸಿಗಲಿದೆ. ಮೃತರ ಕುಟುಂಬಕ್ಕೆ ಅರಣ್ಯ ಇಲಾಖೆಯಲ್ಲಿ ಓದಿಗೆ ತಕ್ಕ ಕೆಲಸ ಕೊಡಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು. ರೈತರಿಗೆ ಹಾಗೂ ಬೆಳೆ ನಾಶಕ್ಕೆ ಕಾರಣವಾದ ಕಾಡಾನೆ ಸೆರೆ ಹಿಡಿಯಿರಿ ಹಾಗೂ ಆನೆ ಕಂದಕ ಮುಚ್ಚಿರುವ ಕಡೆ ಕಂದಕ ಮಣ್ಣು ತೆಗೆಸಿ ಎಂದು ಡಿಸಿಎಫ್‌ಗೆ ಸೂಚನೆ ನೀಡಿದರು. ಮೃತನ ಕುಟುಂಬಕ್ಕೆ ₹೨೦ ಲಕ್ಷ ಪರಿಹಾರ ನೀಡಿದ ಅರಣ್ಯ ಇಲಾಖೆ

ಕಾಡಾನೆ ದಾಳಿಗೆ ಬಲಿಯಾದ ಕೋಟೆಕೆರೆ ಗ್ರಾಮದ ಜನ್ನೂರು ನಾಯಕನ ಕುಟುಂಬಕ್ಕೆ ಬಂಡೀಪುರ ಅರಣ್ಯ ಇಲಾಖೆ ವತಿಯಿಂದ ೨೦ ಲಕ್ಷ ಪರಿಹಾರದ ಚೆಕ್‌ ಅನ್ನು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ವಿತರಿಸಿದರು. ಪ್ರತಿಭಟನಾ ಸ್ಥಳದಲ್ಲೇ ೨೦ ಲಕ್ಷ ಚೆಕ್‌ಗೆ ಬಂಡೀಪುರ ಡಿಸಿಎಫ್‌ ಶುಭಂ ಸಿಂಗ್‌ ತನ್ವರ್‌ ಸಹಿ ಹಾಕಿದ ಬಳಿಕ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಚೆಕ್‌ ಅನ್ನು ಮೃತನ ಪತ್ನಿಗೆ ಹಸ್ತಾಂತರಿಸಿದರು. ಅಲ್ಲದೆ ಮೃತನ ಕುಟುಂಬಕ್ಕೆ ನಾನೂ ಕೂಡ ವಯಕ್ತಿಕವಾಗಿ ನೆರವು ನೀಡುತ್ತೇನೆ ಎಂದು ಶಾಸಕರು ಭರವಸೆ ನೀಡಿದರು. ಡಿಸಿಎಫ್‌ ಶುಭಂ ಸಿಂಗ್‌ ತನ್ವರ್‌, ಡಿವೈಎಸ್ಪಿ ಸ್ನೇಹರಾಜ್‌, ಬೇಗೂರು ಸರ್ಕಲ್‌ ಇನ್ಸ್‌ಪೆಕ್ಟರ್‌ ಮೋಹಿತ್‌ ಸಹದೇವ್‌, ಓಂಕಾರ ವಲಯ ಅರಣ್ಯಾಧಿಕಾರಿ ಹನುಮಂತಪ್ಪ ಇದ್ದರು.