ಕನ್ನಡಪ್ರಭವಾರ್ತೆ ಚನ್ನಪಟ್ಟಣ
ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಇದರ ಕುರಿತು ಕ್ರಮ ಕೈಗೊಳ್ಳುವಂತೆ ಅರಣ್ಯ ಸಚಿವರಿಗೆ ಮೂರ್ನಾಲ್ಕು ಬಾರಿ ಮನವಿ ಸಲ್ಲಿಸಿದ್ದೇನೆ. ಅವರು ನನಗೆ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಬೇಸರ ವ್ಯಕ್ತಪಡಿಸಿದ್ದಾರೆ.ನಗರದಲ್ಲಿ ಪತ್ರಕರ್ತರ ಸಂಘದ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಅರಣ್ಯ ಸಚಿವರಿಗೆ ಮೂರ್ನಾಲ್ಕು ಬಾರಿ ಕಾಡಾನೆ ಉಪಟಳದ ಬಗ್ಗೆ ದೂರು ನೀಡಿದ್ದೇನೆ. ಇಲಾಖೆಯಿಂದ ಕ್ರಮವಹಿಸುವಂತೆ ಮನವಿ ಮಾಡಿದರೂ ಪ್ರಯೋಜನ ಅಗಿಲ್ಲ. ಕ್ರಮವಹಿಸದೇ ಇರುವುದು ನೋವಾಗಿದೆ ಎಂದು ಹೇಳಿದರು.
ರೈಲ್ವೆ ಬ್ಯಾರೀಕೇಡ್‌ಗೆ ಸಂಪನ್ಮೂಲ ಬೇಕು. ಅರಣ್ಯದ ಅಂಚಿನಲ್ಲಿ ಟ್ರಂಚ್ ಹಾಗೂ ರೈಲ್ವೆ ಬ್ಯಾರಿಕೇಡ್ ಆಗದಿದ್ದರೆ ನಿತ್ಯ ಆನೆಗಳ ಹಾವಳಿ ಇದ್ದದ್ದೇ. ಈ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಗಮನಕ್ಕೆ ತರುತ್ತೇನೆ. ಶೀಘ್ರ ಕಾಡಾನೆ ಸಮಸ್ಯೆ ಬಗ್ಗೆ ಅರಣ್ಯ ಸಚಿವರ ಜೊತೆ ಸಭೆ ಮಾಡಿ ವಿಸ್ತೃತ ಚರ್ಚೆ ಮಾಡುತ್ತೇನೆ. ಕ್ಯಾಬಿನೆಟ್ ಮಟ್ಟದಲ್ಲಿ ತೀರ್ಮಾನ ಮಾಡಲು ಮನವಿ ಮಾಡುತ್ತೇನೆ. ಕೇವಲ ಒಂದೆರಡು ಕಾಡಾನೆ ಸೆರೆಯಿಂದ ತಾಲೂಕಿನ ಸಮಸ್ಯೆ ಬಗೆಹರಿಯಲ್ಲ. ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕು ಎಂದು ಹೇಳಿದರು.ಮಾವು ಸಂಸ್ಕರಣಾ ಘಟಕ ಉದ್ಘಾಟನೆಗೆ ಶೀಘ್ರ ನಡೆಸಲಾಗುವುದು. ಸಚಿವರು ಉಪಚುನಾವಣೆಯಲ್ಲಿ ಮಗ್ನರಾಗಿದ್ದರು. ಸಚಿವರು ದಿನಾಂಕ ನೀಡಿದ ನಂತರ ಉದ್ಘಾಟನೆ ಮಾಡಲಾಗುವುದು ಎಂದರು.
ತಾಲೂಕಿನ ಕೆರೆಗಳು ಖಾಲಿಯಾಗುತ್ತಿರುವ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕೆಆರ್‌ಎಸ್‌ನಲ್ಲಿ ನೀರು ಕಡಿಮೆಯಾಗಿದೆ. ತಾಲೂಕಿನ ಕೆರೆಗಳಿಗೆ ಆದಷ್ಟು ನೀರನ್ನು ಪಂಪ್ ಮಾಡಿ ತುಂಬಿಸಲಾಗಿದೆ. ತಾಲೂಕಿನ ನೀರಾವರಿ ಯೋಜನೆಯಲ್ಲಿ ಕೆಲವು ಮಾರ್ಪಾಡು ಸಹ ಮಾಡಲಾಗಿದೆ. ಏಳೆಂಟು ಕಡೆ ಪೈಪ್ ಲೈನ್ ಕಾಮಗಾರಿ ಮಾಡಲಾಗಿದೆ. ಆದರೆ, ನೀರಿನ ಲಭ್ಯತೆ ಇಲ್ಲ ಎಂದು ಹೇಳಿದರು.
ರೈತರು ನೀರನ್ನು ವ್ಯರ್ಥ ಮಾಡಬಾರದು, ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳದೇ ಹೋದರೆ, ಎಷ್ಟು ಕೆರೆ ತುಂಬಿಸಿದರು ಪ್ರಯೋಜನವಿಲ್ಲ ಎಂದರು.
ಪೊಟೋ೨೦ಸಿಪಿಟಿ೧: ನಗರದಲ್ಲಿ ಪತ್ರಕರ್ತರ ಭವನ ನಿರ್ಮಾಣಕ್ಕೆ ಶಾಸಕ ಸಿ.ಪಿ.ಯೋಗೇಶ್ವರ್ ಭೂಮಿಪೂಜೆ ನೆರವೇರಿಸಿದರು.ರೈತನ ಮೇಲೆ ಕಾಡಾನೆ ದಾಳಿ
ಚನ್ನಪಟ್ಟಣ: ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ವೇಳೆ ಜಮೀನಿನಲ್ಲಿದ್ದ ರೈತನ ಮೇಲೆ ಕಾಡಾನೆ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ತಾಲೂಕಿನ ಮಂಗಾಡಹಳ್ಳಿ ಗ್ರಾಮದ ಬಳಿ ಭಾನುವಾರ ರಾತ್ರಿ ನಡೆದಿದೆ.ಕಾಂತರಾಜು (೫೫) ಗಂಭೀರ ಗಾಯಗೊಂಡಿದ್ದು, ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ.
ಭಾನುವಾರ ಬೆಳಗ್ಗೆ ತಾಲೂಕಿನ ಸುಣ್ಣಘಟ್ಟ ಗ್ರಾಮದ ಬಳಿ ಮೂರು ಕಾಡಾನೆಗಳು ಕಾಣಿಸಿಕೊಂಡಿದ್ದವು. ಭಾನುವಾರ ರಾತ್ರಿ ಪಕ್ಕದ ನರೀಕಲ್ಲು ಗುಡ್ಡಕ್ಕೆ ಓಡಿಸುವ ಕಾರ್ಯಾಚರಣೆಯನ್ನು ಆರ್‌ಎಫ್‌ಒ ಮಲ್ಲೇಶ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕೈಗೊಂಡಿದ್ದರು. ಈ ವೇಳೆ ಜಮೀನಿಗೆ ನೀರು ಹರಿಸಲು ಹೋಗಿದ್ದ ಕಾಂತರಾಜು ಮೇಲೆ ಕಾಡಾನೆ ದಾಳಿ ನಡೆಸಿದೆ.ಸಿಬ್ಬಂದಿ ಅಟ್ಟಾಡಿಸಿದ್ದ ಕಾಡಾನೆ:
ಕಾಡಾನೆಗಳನ್ನು ಕಾಡಿಗೆ ಅಟ್ಟವ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆಯೇ ಕಾಡಾನೆ ದಾಳಿಗೆ ಮುಂದಾಗಿ ಅಟ್ಟಾಡಿಸಿತ್ತು. ಆನೆ ತನ್ನತ್ತ ಬರುವುದನ್ನು ಗಮನಿಸಿದ ಸಿಬ್ಬಂದಿ ಓಡಿ ತಪ್ಪಿಸಿಕೊಂಡಿದ್ದನು. ಹಗಲು ವೇಳೆ ಆನೆ ಕಾಡಿಗೆ ಅಟ್ಟುವ ಕಾರ್ಯಾಚರಣೆ ನಡೆಸಿದರೆ, ಅವು ಅತ್ತಿತ್ತ ನುಗ್ಗಿ ಅಪಾಯ ಸಂಭವಿಸುವ ಆತಂಕ ಇದ್ದ ಹಿನ್ನೆಲೆ ಅರಣ್ಯ ಇಲಾಖೆ ಸಿಬ್ಬಂದಿ ರಾತ್ರಿ ಕಾರ್ಯಾಚರಣೆ ಕೈಗೊಂಡಿದ್ದರು ಎನ್ನಲಾಗಿದೆ. ರೈತ ಗಾಯಗೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಆನೆ ದಾಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.