ಪೆರಾಜೆ ಗ್ರಾಮ ವ್ಯಾಪ್ತಿಯಲ್ಲಿ ಮಿತಿ ಮೀರಿದ ಕಾಡಾನೆಗಳ ಹಾವಳಿ

| Published : Jul 26 2025, 01:30 AM IST

ಸಾರಾಂಶ

ಕಳೆದ ಕೆಲವು ತಿಂಗಳಿನಿಂದ ಚೆಂಬು ಗ್ರಾಮದ ಸುತ್ತಮುತ್ತ ನಿರಂತರವಾಗಿ ಕಾಡಾನೆಗಳ ಹಿಂಡು ಕೃಷಿ ಜಮೀನುಗಳಿಗೆ ಲಗ್ಗೆ ಇಡುತ್ತಿದ್ದು, ಅಡಕೆ, ಬಾಳೆ, ತೆಂಗು, ಗೇರು ಹೀಗೆ ಫಸಲು ಕೊಡುವ ಗಿಡ ಮರಗಳನ್ನು ನಾಶ ಮಾಡಿ ರೈತರನ್ನು ಸಂಕಷ್ಟಕ್ಕೆ ದೂಡಿದೆ.

ತೋಟಗಳಿಗೆ ನುಗ್ಗಿ ಬೆಳೆಗಳಿಗೆ ಹಾನಿ । ರೈತರು ಹೈರಾಣದುಗ್ಗಳ ಸದಾನಂದ

ಕನ್ನಡಪ್ರಭ ವಾರ್ತೆ ನಾಪೋಕ್ಲು

ಕೊಡಗು-ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರದೇಶವಾದ ಪೆರಾಜೆ- ಚೆಂಬು ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಇದರಿಂದ ಕೃಷಿಕರು ಲಕ್ಷಗಟ್ಟಲೆ ರು. ನಷ್ಟ ಅನುಭವಿಸಿ ಹೈರಾಣಾಗಿದ್ದಾರೆ.

ಕಳೆದ ಕೆಲವು ತಿಂಗಳಿನಿಂದ ಚೆಂಬು ಗ್ರಾಮದ ಸುತ್ತಮುತ್ತ ನಿರಂತರವಾಗಿ ಕಾಡಾನೆಗಳ ಹಿಂಡು ಕೃಷಿ ಜಮೀನುಗಳಿಗೆ ಲಗ್ಗೆ ಇಡುತ್ತಿದ್ದು, ಅಡಕೆ, ಬಾಳೆ, ತೆಂಗು, ಗೇರು ಹೀಗೆ ಫಸಲು ಕೊಡುವ ಗಿಡ ಮರಗಳನ್ನು ನಾಶ ಮಾಡಿ ರೈತರನ್ನು ಸಂಕಷ್ಟಕ್ಕೆ ದೂಡಿದೆ.

ಅರಂಬೂರು ಭಾಗದಲ್ಲಿ ಕಾಣಿಸಿಕೊಂಡಿದ್ದ ಕಾಡಾನೆಗಳ ಹಿಂಡು, ಈಗ ಪೆರಾಜೆ ವ್ಯಾಪ್ತಿಯಲ್ಲಿ ದಾಂಧಲೆ ನಡೆಸುತ್ತಿವೆ. ಮೈಸೂರು - ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿಯೇ ಇರುವ ಪಿ.ಬಿ. ದಿವಾಕರ ರೈ ಮತ್ತು ಸಹೋದರರ ಫಾರ್ಮ್‌, ಕೃಷಿ ತೋಟಗಳಿಗೆ ಗುರುವಾರ ರಾತ್ರಿ ನುಗ್ಗಿದ್ದ 7-8 ಕಾಡಾನೆ ಹಾಗೂ 2-3 ಸಣ್ಣ ಮರಿ ಆನೆಗಳು ಲಕ್ಷಾಂತರ ರುಪಾಯಿ ಮೌಲ್ಯದ ಕೃಷಿ ಬೆಳೆಗಳನ್ನು ನಾಶಪಡಿಸಿವೆ.

ಚೆಂಬು ಗ್ರಾಮದ ಮಲೆ ಚಾಮುಂಡಿ ದೈವದ ಕಟ್ಟೆ ಹಾನಿ ಮಾಡಿದ್ದಲ್ಲದೆ ತೋಟದಲ್ಲಿನ ಫಲ ಭರಿತ 25ಕ್ಕೂ ಅಧಿಕ ತೆಂಗಿನ ಮರ, ಬಾಳೆ, ಅಡಕೆ ಮರಗಳನ್ನು ಧ್ವಂಸ ಮಾಡಿ, ನಾಟಿಮಾಡಿದ್ದ ಗದ್ದೆಗಳನ್ನು ಹಾಳುಗೆಡವಿವೆ.

ಮತ್ತೊಂದೆಡೆ ಸಾರ್ವಜನಿಕರು ಓಡಾಡುವ ರಸ್ತೆಯಲ್ಲೂ ಆನೆಗಳು ಕಂಡು ಬರುತ್ತಿದ್ದು, ಶಾಲಾ ಮಕ್ಕಳು, ಕಾರ್ಮಿಕರು ಜೀವ ಭಯದಲ್ಲಿಯೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಪ್ರಯೋಜನವಾಗುತ್ತಿಲ್ಲ. ಆನೆಗಳಿಂದ ಯಾವುದೇ ಅನಾಹುತ ಸಂಭವಿಸುವ ಮೊದಲು ಆನೆಗಳನ್ನು ಕಾಡಿಗೆ ಅಟ್ಟಬೇಕು ಮತ್ತು ಕೃಷಿಯಿಂದ ನಷ್ಟ ಹೊಂದಿದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಶಾಸಕ ಎ.ಎಸ್.ಪೊನ್ನಣ್ಣ ಅವರಲ್ಲಿ ಗ್ರಾಮಸ್ಥರು ಮನವಿ ಮಾಡಿದ್ದಾರೆ.