ಸಾರಾಂಶ
ಕನ್ನಡಪ್ರಭವಾರ್ತೆ ವಿರಾಜಪೇಟೆ
ಅರಣ್ಯದಲ್ಲಿ ಹಸಿವು ನೀಗಿಸಲು ಆಹಾರ ಲಭ್ಯತೆ ಕಡಿಮೆ ಹಿನ್ನೆಲೆಯಲ್ಲಿ ಒಂಟಿ ಸಲಗವೊಂದು ನಗರ ವ್ಯಾಪ್ತಿಯಲ್ಲಿ ಸಂಚರಿಸಿ ಕೆಲವು ಮನೆಗಳ ಆವರಣ ಗೋಡೆ, ಫಸಲು ನೀಡುವ ಗಿಡಗಳನ್ನು ಹಾನಿಗೊಳಿಸಿದ ಘಟನೆ ವಿರಾಜಪೇಟೆ ನಗರದ ತೆಲುಗರ ಬೀದಿಯಲ್ಲಿ ನಡೆದಿದೆ.ವಿರಾಜಪೇಟೆ ನಗರದ ಮುಖ್ಯ ರಸ್ತೆ ತೆಲುಗರ ಬೀದಿಯಲ್ಲಿ ಮಧ್ಯ ರಾತ್ರಿಯಲ್ಲಿ ಕಾಣಿಸಿಕೊಂಡ ಕಾಡಾನೆಯೊಂದು ದಾಂದಲೆ ನಡೆಸಿ ಮರಳಿ ಅರಣ್ಯಕ್ಕೆ ಸಾಗಿದೆ. 17ರಂದು ರಾತ್ರಿ 12.30 ರ ವೇಳಗೆ ಕಾಡಾನೆಯೊಂದು ನೆಹರು ನಗರದ ಅರಣ್ಯ ಅಂಚಿನಿಂದ ನಗರದ ತೆಲುಗರ ಬೀದಿಯತ್ತಾ ಬಂದಿದೆ. ವಾಹನ ಚಾಲಕರು ಕಾಡಾನೆಯನ್ನು ಗಮನಿಸಿ ವಾಹನ ನಿಲುಗಡೆಗೊಳಿಸಿ ಹಿಂಬಾಲಿಸಿದಾರೆ. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕಾಡಾನೆಯು ತೆಲುಗರ ಬೀದಿ ನಿವಾಸಿ ನಿವೃತ್ತ ಬ್ಯಾಂಕ್ ಉದ್ಯೋಗಿ ಶ್ಯಾಮ್ ಭಟ್ ಅವರ ಆವರಣ ಗೋಡೆಯನ್ನು ಘಾಸಿಗೊಳಿಸಿ ಪತ್ರಕರ್ತ ಕಿಶೋರ್ ಕುಮಾರ್ ಶೆಟ್ಟಿ ಅವರ ಮನೆಯ ಹಿಂಬದಿಯಲ್ಲಿದ್ದ ಸ್ಥಳದಲ್ಲಿದ್ದ ಕಬ್ಬು ಮತ್ತು ಇತರ ಗಿಡಗಳನ್ನು ಧ್ವಂಸ ಮಾಡಿದ್ದು ಸಂಪತ್ ಜೈನ್ ಎಂಬುವರ ತಂತಿ ಬೇಲಿಯನ್ನು ಮುರಿದಿದೆ. ಕೂತಂಡ ಸಚಿನ್ ಅವರ ತೋಟದಲ್ಲಿ ಸಾಗಿದ ಕಾಡಾನೆಯು ಕಾಫಿ ಗಿಡಗಳನ್ನು ಹಾನಿ ಮಾಡಿದೆ. ಕಾಡಾನೆಯಿಂದ ಹೆಚ್ಚಿನ ಅಪಾಯ ತಪ್ಪಿಸಲು ಅರಣ್ಯ ಇಲಾಖೆಯ ಸಿಬ್ಬಂದಿ ಸಿಡಿಮದ್ದು ಸಿಡಿಸಿದರು. ಸಿಡಿಮದ್ದಿನ ಶಬ್ದದಿಂದ ಕಾಡಾನೆಯು ಅರಣ್ಯದತ್ತಾ ಸಾಗಿತು. ಈ ಸಂದರ್ಭ ನಗರ ಠಾಣೆ ಸಿಬ್ಬಂದಿ, ಅರಣ್ಯ ಇಲಾಖೆ ಸಂರಕ್ಷಣಾಧಿಕಾರಿ ಶಿವರಾಂ ಮತ್ತು ಸಿಬ್ಬಂದಿ ಕಾಡಾನೆಯಿಂದ ಹೆಚ್ಚಿನ ಅನಾಹುತ ಸಂಭವಿಸದಂತೆ ಎಚ್ಚರಿಕೆ ವಹಿಸಿದ್ದರು.