ಹಾತೂರು , ಹಿಳುವಳ್ಳಿ ಗ್ರಾಮದ ತೋಟಗಳಿಗೆ ಕಾಡಾನೆ ದಾಳಿ

| Published : Mar 02 2025, 01:17 AM IST

ಸಾರಾಂಶ

ನರಸಿಂಹರಾಜಪುರ, ತಾಲೂಕಿನ ಸೀತೂರು ಗ್ರಾಪಂನ ಹಾತೂರು ಗ್ರಾಮ ಹಾಗೂ ನಾಗಲಾಪುರ ಗ್ರಾಪಂನ ಹಿಳುವಳ್ಳಿಯಲ್ಲಿ ರಾತ್ರಿ ಹಾಗೂ ಬೆಳಗಿನ ಜಾವದಲ್ಲಿ ಕಾಡಾನೆಗಳು ತೋಟಗಳಿಗೆ ದಾಳಿ ಮಾಡಿ ಅಡಕೆ, ಬಾಳೆ, ತೆಂಗು ಧ್ವಂಸ ಮಾಡಿರುವ ಹಿನ್ನೆಲೆಯಲ್ಲಿ ಡ್ರೋಣ್ ಬಳಕೆಮಾಡಿ ಆನೆಗಳ ಜಾಗ ಪತ್ತೆ ಮಾಡಿ ಕಾರ್ಯಾಚರಣೆ ನಡೆಸುವುದಾಗಿ ಕೊಪ್ಪ ಡಿಎಫ್.ಓ. ನಂದೀಶ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ತಾಲೂಕಿನ ಸೀತೂರು ಗ್ರಾಪಂನ ಹಾತೂರು ಗ್ರಾಮ ಹಾಗೂ ನಾಗಲಾಪುರ ಗ್ರಾಪಂನ ಹಿಳುವಳ್ಳಿಯಲ್ಲಿ ರಾತ್ರಿ ಹಾಗೂ ಬೆಳಗಿನ ಜಾವದಲ್ಲಿ ಕಾಡಾನೆಗಳು ತೋಟಗಳಿಗೆ ದಾಳಿ ಮಾಡಿ ಅಡಕೆ, ಬಾಳೆ, ತೆಂಗು ಧ್ವಂಸ ಮಾಡಿರುವ ಹಿನ್ನೆಲೆಯಲ್ಲಿ ಡ್ರೋಣ್ ಬಳಕೆಮಾಡಿ ಆನೆಗಳ ಜಾಗ ಪತ್ತೆ ಮಾಡಿ ಕಾರ್ಯಾಚರಣೆ ನಡೆಸುವುದಾಗಿ ಕೊಪ್ಪ ಡಿಎಫ್.ಓ. ನಂದೀಶ್ ತಿಳಿಸಿದ್ದಾರೆ.

ಸೀತೂರು ಗ್ರಾಮ ಪಂಚಾಯಿತಿಯ ಹಾತೂರು ಗ್ರಾಮದ ಎಚ್‌.ಎಚ್. ನಾರಾಯಣ ಮೂರ್ತಿ ಅವರ ತೋಟಕ್ಕೆ ನುಗ್ಗಿದ 3 ಕಾಡಾನೆಗಳ ಹಿಂಡು ಶುಕ್ರವಾರ ರಾತ್ರಿ 12 ಗಂಟೆಯಿಂದ ಶನಿವಾರ ಬೆಳಗಿನ ಜಾವ 5 ಗಂಟೆವರೆಗೆ 30 ಅಡಕೆ ಮರಗಳನ್ನುನಾಶ ಮಾಡಿವೆ. ತೋಟದಲ್ಲಿ ಪಂಪ್‌ ಸೆಟ್‌ ಆನ್ ಮಾಡಲು ಬಂದ ಎಚ್‌.ಎಚ್. ನಾರಾಯಣಮೂರ್ತಿ ಅವರಿಗೆ ತೋಟದಲ್ಲಿ ಆನೆ ಕಂಡು ಬಂದಿದೆ. ತಕ್ಷಣ ಮನೆಗೆ ಬಂದು ಪಟಾಕಿ ಸಿಡಿಸಿದ್ದಾರೆ. ನಂತರ ಹೆಗಡೆ ಜಡ್ಡು ಎಂಬ ಕಾಡಿಗೆ ಕಾಡಾನೆಗಳು ಸೇರಿದೆ. ಇದೇ ಗ್ರಾಮದ ಹುಲಿಮನೆ ಕೃಷ್ಣಮೂರ್ತಿ ಎಂಬುವರ ತೋಟಕ್ಕೆ ಒಂಟಿ ಸಲಗ ದಾಳಿ ಮಾಡಿದ್ದು ಕೆಲವು ಅಡಕೆ ಮರ ಮುರಿದಿದೆ.

ತಾಲೂಕಿನ ನಾಗಲಾಪುರ ಗ್ರಾಮ ಪಂಚಾಯ್ತಿಗೆ ಸೇರಿದ ಹಿಳುವಳ್ಳಿಯ ಥೋಮಸ್ ಎಂಬುವರ ಅಡಕೆ ತೋಟಕ್ಕೆ ಶುಕ್ರ ವಾರ ರಾತ್ರಿ ನುಗ್ಗಿದ ಆನೆಗಳ ಹಿಂಡು 186 ಅಡಕೆ ಮರ, ನೂರಾರು ಬಾಳೆ ನಾಶ ಮಾಡಿದೆ. ಸಮೀಪದ ರತ್ನಾಕರ ಎಂಬುವರ ತೋಟಕ್ಕೂ ನುಗ್ಗಿ ಹತ್ತಾರು ತೆಂಗಿನ ಮರ ನಾಶ ಮಾಡಿವೆ. ಬೆಳಿಗ್ಗೆ ಕಾಡಾನೆಗಳ ಹಿಂಡು ಸಮೀಪದ ಕಲ್ಲು ಉಬ್ಬು ಎಂಬ ಕಾಡಿಗೆ ಸೇರಿಕೊಂಡಿದೆ.

ಆನೆದಾಳಿ ವಿಷಯ ತಿಳಿದು ಶನಿವಾರ ಹಿಳುವಳ್ಳಿಯ ಥೋಮಸ್ ಅವರ ಅಡಕೆ ತೋಟಕ್ಕೆ ಕೊಪ್ಪ ಡಿಎಫ್.ಓ. ನಂದೀಶ್ ಭೇಟಿ ನೀಡಿ ತೋಟಪರಿಶಿಳಿಸಿದರು. 1-2 ದಿನಗಳಲ್ಲಿ ಚಿಕ್ಕಮಗಳೂರು ಜಿಲ್ಲಾ ಕೇಂದ್ರದಲ್ಲಿರುವ ಡ್ರೋಣ್ ತಂಡ ತರಿಸಿ ಕಾಡಾನೆಗಳು ಇರುವ ಜಾಗ ಪತ್ತೆ ಹಚ್ಚಿ ಕಾರ್ಯಾಚರಣೆ ಮಾಡಲಾಗುವುದು ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು. ಈ ಸಂದರ್ಭದಲ್ಲಿ ನರಸಿಂಹರಾಜಪುರ ವಲಯ ಅರಣ್ಯಾಧಿಕಾರಿ ಪ್ರವೀಣ್ ಮತ್ತು ಅರಣ್ಯ ಸಿಬ್ಬಂದಿ ಇದ್ದರು.