ಕನ್ನಡಪ್ರಭ ವಾರ್ತೆ ಬೇಲೂರು

ತಾಲೂಕಿನ ಅರೇಹಳ್ಳಿ ಹೋಬಳಿಯ ಹೊಸಮನೆ ಗ್ರಾಮದ ತೋಟದಲ್ಲಿ ಕಾಡಾನೆಗಳು ತಮ್ಮ ರಕ್ಷಣೆಗಾಗಿ ಕಾಫಿ ಗಿಡಗಳನ್ನು ಕಿತ್ತು ಸೋಲಾರ್‌ ಬೇಲಿ ಮೇಲೆ ಹಾಕಿ ವಿದ್ಯುತ್ ಪ್ರವಹಿಸಿದಂತೆ ಸುರಕ್ಷಿತವಾಗಿ ಬೇಲಿ ದಾಟಿದ ಘಟನೆ ನಡೆದಿದ್ದು ಕಾಡಾನೆಗಳ ಅಸಾಧಾರಣ ಬುದ್ಧಿವಂತಿಕೆಗೆ ಸಾಕ್ಷಿಯಾಗಿದೆ.

ಅರೇಹಳ್ಳಿ ಹೋಬಳಿಯ ಹೊಸಮನೆ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ರೈತರಲ್ಲಿ ಆತಂಕ ಮೂಡಿಸಿದೆ. ಭಾನುವಾರ ಬೆಳ್ಳಂಬೆಳಿಗ್ಗೆ ಸುಮಾರು ಐದು ಕಾಡಾನೆಗಳಿದ್ದ ಗುಂಪೊಂದು ಜಮೀನಿನಲ್ಲಿದ್ದ ಸೋಲಾರ್‌ ವಿದ್ಯುತ್ ತಂತಿ ಬೇಲಿಯನ್ನು ದಾಟಲು ಕಾಫಿ ಗಿಡಗಳನ್ನು ಕಿತ್ತೆಸೆದು ಬೇಲಿಯ ಮೇಲೆ ಹಾಕಿ ದಾಟಿರುವ ಘಟನೆ ನಡೆದಿದೆ.

ಹೊಸಮನೆ ಗ್ರಾಮದ ಶ್ರೀನಿವಾಸ ಅವರಿಗೆ ಸೇರಿದ ಜಮೀನಿನಲ್ಲಿ ಮೂರು ದೊಡ್ಡ ಕಾಡಾನೆಗಳು ಹಾಗೂ ಎರಡು ಮರಿಗಳಿದ್ದ ಗುಂಪು ಕಾಣಿಸಿಕೊಂಡಿತ್ತು. ಪಕ್ಕದ ಜಮೀನಿಗೆ ತೆರಳಲು ಅಡ್ಡಿಯಾಗಿದ್ದ ಸೋಲಾರ್ ವಿದ್ಯುತ್ ತಂತಿ ಬೇಲಿಯನ್ನು ದಾಟಲು ಕಾಡಾನೆಗಳು ತಮ್ಮ ಚಾಣಾಕ್ಷತನ ಪ್ರದರ್ಶಿಸಿದ್ದು, ಜಮೀನಿನಲ್ಲಿದ್ದ ಸುಮಾರು ಐವತ್ತಕ್ಕೂ ಹೆಚ್ಚು ಕಾಫಿ ಗಿಡಗಳು ಹಾಗೂ ಇತರೆ ಸಣ್ಣ ಮರಗಿಡಗಳನ್ನು ಕಿತ್ತು ತಂತಿ ಬೇಲಿಯ ಮೇಲೆ ಹಾಕಿ ನಂತರ ಅದನ್ನು ದಾಟಿ ಮುಂದಕ್ಕೆ ಸಾಗಿವೆ.ಆನೆಗಳು ಸೋಲಾರ್‌ ಬೇಲಿಯನ್ನು ದಾಟಲು ಕಾಫಿ ಗಿಡಗಳನ್ನು ಬಳಸಿದ ಈ ತಂತ್ರದ ಹಿಂದೆ ಅವುಗಳ ಅದ್ಭುತ ಬುದ್ಧಿಶಕ್ತಿ ಕೆಲಸ ಮಾಡಿದೆ. ಹಸಿರು ಗಿಡಗಳು ಸ್ವಲ್ಪ ಮಟ್ಟಿಗೆ ವಿದ್ಯುತ್ ಪ್ರವಹಿಸಿದರೂ, ಕಾಫಿ ಗಿಡದ ರೆಂಬೆಗಳು ಅಥವಾ ಎಲೆಗಳನ್ನು ತಂತಿಯ ಮೇಲೆ ದಪ್ಪವಾಗಿ ಹಾಕಿದಾಗ ಅದು ವಿದ್ಯುತ್ ಪ್ರವಾಹದ ತೀವ್ರತೆಯನ್ನು ಕಡಿಮೆ ಮಾಡುತ್ತದೆ ಅಥವಾ ಆನೆಗಳ ದಪ್ಪ ಚರ್ಮಕ್ಕೆ ನೇರವಾಗಿ ಶಾಕ್ ಹೊಡೆಯದಂತೆ ತಡೆಯುತ್ತದೆ. ಕಾಡಾನೆಗಳ ಚಾಣಾಕ್ಷ ನಡೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.ಕಾಡಾನೆಗಳನ್ನು ಓಡಿಸಲು ಮುಂದಾದ ನಾಯಿಯನ್ನು ಕಂಡ ಗುಂಪಿನಲ್ಲಿದ್ದ ಒಂಟಿ ಕಾಡಾನೆಯೊಂದು ರೋಷದಿಂದ ನಾಯಿಯ ಬೆನ್ನಟ್ಟಿದೆ. ಆದರೆ ಅದೃಷ್ಟವಶಾತ್ ಸೋಲಾರ್ ವಿದ್ಯುತ್ ಬೇಲಿಯ ರಕ್ಷಣೆಯಿಂದ ನಾಯಿ ಅಪಾಯದಿಂದ ಪಾರಾಗಿದೆ. ಈ ಘಟನೆ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ಕಾಡಾನೆಗಳ ದಾಂಧಲೆಯಿಂದ ಭಯಗೊಂಡ ಗ್ರಾಮಸ್ಥರು ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿ ಕಾಡಾನೆಗಳನ್ನು ಅರಣ್ಯ ಪ್ರದೇಶದತ್ತ ಹಿಮ್ಮೆಟ್ಟಿಸಿದ್ದಾರೆ.

ಮಾನವ ಮತ್ತು ವನ್ಯಜೀವಿಗಳ ಸಂಘರ್ಷ ತಡೆಗೆ ಭೌತಿಕ ಬೇಲಿಗಳು ಮಾತ್ರ ಶಾಶ್ವತ ಪರಿಹಾರವಲ್ಲ ಎಂಬುದನ್ನು ಈ ಘಟನೆಗಳು ಸಾಬೀತುಪಡಿಸುತ್ತವೆ. ಆನೆಗಳ ಬುದ್ಧಿವಂತಿಕೆಯನ್ನು ಮೀರಿಸುವ ಕಠಿಣ ಬೇಲಿಗಳಿಗಿಂತ, ಅವುಗಳ ಕಾರಿಡಾರ್‌ ರಕ್ಷಣೆ ಮತ್ತು ಶಾಂತಿಯುತ ಸಹಬಾಳ್ವೆಯ ಮಾರ್ಗಗಳ ಬಗ್ಗೆ ಅರಣ್ಯ ಸಚಿವರು ಕ್ರಮ ಕೈಗೊಳ್ಳಬೇಕು ಎಂದು ರೈತರು ಹಾಗೂ ಕಾಫಿ ಬೆಳೆಗಾರರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.