ರಾಮನಗರ; ಜಿಲ್ಲೆಯಲ್ಲಿ ತೀವ್ರಗೊಂಡಿರುವ ಕಾಡಾನೆ ಹಾವಳಿ ಕೇವಲ ಬೆಳೆಗಳನ್ನಷ್ಟೇ ಅಲ್ಲದೆ, ಜನರ ಜೀವಕ್ಕೂ ಎರವಾಗಿ ಪರಿಣಮಿಸಿದೆ. ಕಾಡಾನೆ ಹಾವಳಿಯಿಂದಾಗಿ ಕಾಡಂಚಿನ ಗ್ರಾಮಗಳಲ್ಲಿ ಕತ್ತಲಾಗುತ್ತಿದ್ದಂತೆ ಜನರು ಮನೆಯಿಂದ ಹೊರಗೆ ಬರಲು ಹೆದರುವಂತಾಗಿದೆ
ರಾಮನಗರ; ಜಿಲ್ಲೆಯಲ್ಲಿ ತೀವ್ರಗೊಂಡಿರುವ ಕಾಡಾನೆ ಹಾವಳಿ ಕೇವಲ ಬೆಳೆಗಳನ್ನಷ್ಟೇ ಅಲ್ಲದೆ, ಜನರ ಜೀವಕ್ಕೂ ಎರವಾಗಿ ಪರಿಣಮಿಸಿದೆ. ಕಾಡಾನೆ ಹಾವಳಿಯಿಂದಾಗಿ ಕಾಡಂಚಿನ ಗ್ರಾಮಗಳಲ್ಲಿ ಕತ್ತಲಾಗುತ್ತಿದ್ದಂತೆ ಜನರು ಮನೆಯಿಂದ ಹೊರಗೆ ಬರಲು ಹೆದರುವಂತಾಗಿದೆ.
ಜಿಲ್ಲೆಯ ಐದು ತಾಲೂಕುಗಳ ವ್ಯಾಪ್ತಿಯಲ್ಲಿ ಸುಮಾರು 100ಕ್ಕೂ ಹೆಚ್ಚು ಗ್ರಾಮಗಳು ಶಾಶ್ವತ ಕಾಡಾನೆ ಪೀಡಿತ ಪ್ರದೇಶಗಳಾಗಿವೆ. ಈ ಗ್ರಾಮಗಳಲ್ಲಿ ರೈತರ ಜಮೀನಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿವೆ. ಇನ್ನು ಕಾಡಾನೆಗಳನ್ನು ಓಡಿಸಲು ಹೋದರೆ ಜೀವಕ್ಕೆ ಅಪಾಯ ಎಂಬ ಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಕಾಡಾನೆ ಪೀಡಿತ ಪ್ರದೇಶಗಳ ಜನತೆ ಕತ್ತಲಾಗುತ್ತಿದ್ದಂತೆ ಮನೆಯಿಂದ ಹೊರಗೆ ಬರಲು ಭಯಪಡುತ್ತಿದ್ದಾರೆ.ಸಿಬ್ಬಂದಿಯನ್ನೇ ಅಟ್ಟಾಡಿಸಿದ ಆನೆ:
ಚನ್ನಪಟ್ಟಣ ತಾಲೂಕಿನ ಸುಣ್ಣಘಟ್ಟ ಗ್ರಾಮದಲ್ಲಿ ಭಾನುವಾರ ಮೂರು ಕಾಡಾನೆಗಳು ಪ್ರತ್ಯಕ್ಷವಾಗಿದ್ದು, ರೈತ ಶಿವಶಂಕರ್ ತೋಟದಲ್ಲಿ ಬೀಡುಬಿಟ್ಟಿದ್ದವು. ಕಾಡಾನೆಗಳನ್ನು ಕಾಡಿಗೆ ಓಡಿಸಲು ಮುಂದಾದ ವೇಳೆ ಒಂಟಿ ಸಲಗವೊಂದು ಅರಣ್ಯ ಇಲಾಖೆ ಸಿಬ್ಬಂದಿಗಳನ್ನೇ ಅಟ್ಟಾಡಿಸಿದ್ದು ಆತಂಕ ಸೃಷ್ಟಿಸಿತು. ಪಟಾಕಿ ಸಿಡಿಸಿ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾತ್ರಿ ವೇಳೆಗೆ ಆನೆಗಳನ್ನು ಕಾಡಿಗಟ್ಟಲು ಇಲಾಖೆ ಮುಂದಾಗಿದೆ. ತಿಂಗಳ ಹಿಂದಷ್ಟೇ ಆನೆ ಸೆರೆ ಕಾರ್ಯಾಚರಣೆಯ ವೇಳೆ 9 ಆನೆಗಳ ಹಿಂಡು ಸಿಬ್ಬಂದಿಗಳನ್ನು ಅಟ್ಟಾಡಿಸಿದ್ದ ಘಟನೆ ನಡೆದಿತ್ತು.ಆನೆಗಳ ಹಾಟ್‌ಸ್ಪಾಟ್:
ಜಿಲ್ಲೆಗೆ ಹೊಂದಿಕೊಂಡಂತೆ ಬನ್ನೇರುಘಟ್ಟ ವನ್ಯಜೀವಿ ವಲಯ, ಕಾವೇರಿ ವನ್ಯಜೀವಿ ವಲಯ ಪ್ರಮುಖ ವನ್ಯಜೀವಿ ಅರಣ್ಯ ಪ್ರದೇಶಗಳಾಗಿವೆ. ಜಿಲ್ಲೆಯ ಗಡಿಭಾಗಕ್ಕೆ ಹೊಂದಿಕೊಂಡಂತೆ 299 ಕಿಲೋ ಮೀಟರ್ ದೂರ ಅರಣ್ಯ ವಿಸ್ತರಿಸಿದೆ. ವನ್ಯಜೀವಿ ವಲಯಕ್ಕೆ ಹೊಂದಿಕೊಂಡಂತೆ ಬೆಂಗಳೂರು ದಕ್ಷಿಣ ಜಿಲ್ಲಾ ವ್ಯಾಪ್ತಿಯಲ್ಲಿ ತೆಂಗಿನಕಲ್ಲು, ಕೊಂಬಿನಕಲ್ಲು, ನರೀಕಲ್ಲು, ಹಂದಿಗುಂದಿ, ಸೇರಿ ಹತ್ತಾರು ಸಾವಿರ ಎಕರೆ ಪ್ರಾದೇಶಿಕ ಅರಣ್ಯ ಪ್ರದೇಶವಿದೆ. ಎರಡೂ ವನ್ಯಜೀವಿ ವಲಯದಿಂದ ಜಿಲ್ಲೆಯ ಪ್ರಾದೇಶಿಕ ಅರಣ್ಯ ಪ್ರದೇಶಕ್ಕೆ ಬರುವ ಕಾಡಾನೆ ಹಿಂಡು ಕಾಡಂಚಿನ ಗ್ರಾಮಗಳಲ್ಲಿ ಪದೇಪದೆ ಹಾವಳಿ ಮಾಡುತ್ತಿವೆ. ಇದರಿಂದಾಗಿ ಜಿಲ್ಲೆಯ ನೂರಾರು ಗ್ರಾಮ ಕಾಡಾನೆಗಳ ಹಾಟ್‌ಸ್ಪಾಟ್ ಆಗಿವೆ.ಜೀವಕ್ಕೆ ಕಂಟಕ:
ವನ್ಯ ಜೀವಿ ವಲಯದಲ್ಲಿ 4-5 ಗುಂಪುಗಳಲ್ಲಿ ಸುಮಾರು 35ಕ್ಕೂ ಹೆಚ್ಚು ಆನೆ ಜಿಲ್ಲೆಯ ವಿವಿಧ ಪ್ರಾದೇಶಿಕ ಅರಣ್ಯ ಪ್ರದೇಶದಂಚಿನ ಗ್ರಾಮಗಳತ್ತ ದಾಂಗುಡಿ ಇಡುತ್ತಿರುತ್ತವೆ. ಜತೆಗೆ ಕೆಲ 2-3 ಒಂಟಿಸಲಗಗಳು ಇದ್ದು ಜನರ ಜೀವಕ್ಕೆ ಕಂಟಕವಾಗಿ ಪರಿಣಮಿಸಿವೆ.ಪೂರ್ಣಗೊಳ್ಳದ ಆನೆ ಬ್ಯಾರಿಕೇಡ್ ನಿರ್ಮಾಣ:
ಕಾಡಾನೆಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಒಂದಿಲ್ಲೊಂದು ಉಪಾಯ ಮಾಡುತ್ತಲೇ ಬಂದಿದೆ. ಆದರೆ, ಬುದ್ಧಿವಂತ ವನ್ಯಜೀವಿ ಎಂದು ಕರೆಯುವ ಆನೆಗಳು ರಂಗೋಲೆ ಕೆಳಗೆ ನುಸುಳುವ ಚಾಣಾಕ್ಷತನ ತೋರಿದ್ದು ಎಲ್ಲಾ ಪ್ರಯತ್ನಗಳನ್ನು ವಿಫಲ ಮಾಡುತ್ತಲೇ ಇವೆ. ಆನೆ ನಿರೋಧ ಗುಂಡಿ, ಬೇಲಿ ಹಾಕುವುದು ಸೇರಿ ಸಾಕಷ್ಟು ಪ್ರಯತ್ನಗಳನ್ನು ವಿಫಲ ಮಾಡಿವೆ. ಇದಕ್ಕೆ ಪರಿಹಾರ ಎಂಬಂತೆ ರೈಲ್ವೆ ಕಂಬಿಯಿಂದ ಆನೆ ಬ್ಯಾರಿಕೇಡ್ ನಿರ್ಮಾಣ ಕಾರ್ಯವನ್ನು ಅರಣ್ಯ ಇಲಾಖೆ ಕೈಗೊಂಡಿದೆಯಾದರೂ ಈ ಕಾಮಗಾರಿ ಪೂರ್ಣಗೊಳ್ಳದಿರುವುದು ಕಾಡಾನೆ ಹಾವಳಿ ಸಮಸ್ಯೆಯಾಗಿ ಪರಿಣಮಿಸಿದೆ.ಬನ್ನೇರುಘಟ್ಟ ವನ್ಯಜೀವಿ ವಲಯದಿಂದ ಕಾವೇರಿ ವನ್ಯಜೀವಿ ವಲಯದ ಮುತ್ತತ್ತಿ ಅರಣ್ಯ ಪ್ರದೇಶದವರೆಗೆ 299 ಕಿ.ಮೀ ಉದ್ದದ ಅರಣ್ಯ ದಲ್ಲಿ ರೈಲ್ವೆ ಬ್ಯಾರಿಕೇಟ್ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ.
ಉಳಿದ ಭಾಗದಲ್ಲಿ ಅರ್ಕಾವತಿ ನದಿ, ಕೆಲವೆಡೆ ಜನವಸತಿ ಗ್ರಾಮಗಳಿರುವುದು, ಮತ್ತೆ ಕೆಲವೆಡೆ ಅರಣ್ಯ ಇಲಾಖೆ ಮತ್ತು ರೈತರ ನಡುವೆ ಭೂ ವಿವಾದ ಎದುರಾಗಿರುವುದು ರೈಲ್ವೆ ಬ್ಯಾರಿ ಕೇಡ್ ನಿರ್ಮಾಣಕ್ಕೆ ಕಗ್ಗಂಟಾಗಿದೆ. ಬ್ಯಾರಿಕೇಡ್ ಇಲ್ಲದ ಜಾಗ ಗುರುತು ಮಾಡಿಕೊಂಡಿರುವ ಆನೆಗಳು ಅಲ್ಲಿಂದ ಇತ್ತ ಬರುತ್ತಿವೆ.ಬಾಕ್ಸ್..........
ಮೂಲಸ್ಥಾನಕ್ಕೇ ಮರಳುತ್ತಿರುವ ಆನೆಗಳು:ಆನೆಗಳ ದಾಂಗುಡಿ ನಿಯಂತ್ರಣಕ್ಕಾಗಿ ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ 3 ಮೀಟರ್ ಉದ್ದ, 3 ಮೀಟರ್ ಅಗಲ ಹಾಗೂ 2 ಮೀಟರ್ ಆಳದ ಕಂದಕಗಳನ್ನು ನಿರ್ಮಿಸಲಾಗಿದೆ. 50 ಕಿಮೀ ವ್ಯಾಪ್ತಿಯ ಅರಣ್ಯದಲ್ಲಿ 10 ಕಿ.ಮೀ ಪ್ರದೇಶದಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ ಉಳಿದಿರುವ 10ರಿಂದ 12 ಆನೆಗಳನ್ನು ಸಹ ಕಾವೇರಿ ವನ್ಯಜೀವಿ ಧಾಮಕ್ಕೆ ಸ್ಥಳಾಂತರಿಸಿದರೆ ಜಿಲ್ಲೆ ಸಂಪೂರ್ಣ ಆನೆಮುಕ್ತವಾಗಲಿದೆ ಎಂಬುದು ಇಲಾಖೆಯ ಲೆಕ್ಕಾಚಾರ. ಆದರೆ, ಬುದ್ದಿವಂತ ಪ್ರಾಣಿಯಾದ ಆನೆಗಳು ನೂರಾರು ಕಿ.ಮೀ ದೂರ ಸ್ಥಳಾಂತರಿಸಿದರೂ ತಮ್ಮ ಮೂಲ ಸ್ಥಳಕ್ಕೆ ಮರಳುತ್ತಿರುವುದರಿಂದ ಸಮಸ್ಯೆ ಮತ್ತಷ್ಟು ಗಂಭೀರವಾಗಿದೆ.
ಬಾಕ್ಸ್.............ಕಾವೇರಿ ವನ್ಯಜೀವಿ ಧಾಮದಲ್ಲಿ 230-250 ಕಾಡಾನೆ:
ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಮೊದಲು 35 ಆನೆಗಳಿದ್ದರೆ, ಅರಣ್ಯಇಲಾಖೆ ಕ್ರಮಗಳಿಂದ ಈ ಸಂಖ್ಯೆ 12ಕ್ಕೆ ಇಳಿದಿದೆ. ಈ ಎಲ್ಲ ಆನೆಗಳನ್ನು ಕಾವೇರಿ ವನ್ಯಜೀವಿ ಧಾಮಕ್ಕೆ ಹಿಮ್ಮೆಟ್ಟಿಸಲಾಗಿದೆ. ಆದರೆ, ಇತ್ತೀಚೆಗೆ ಸ್ಥಳಾಂತರಿಸಿದ ಆನೆಗಳಲ್ಲಿ ಕೆಲವು ಆನೆಗಳು ಒಂದೊಂದಾಗಿ ಮತ್ತೆ ಜಿಲ್ಲೆಗೆ ಮರಳುತ್ತಿವೆ. ಪ್ರಸ್ತುತ ತೆಂಗಿನಕಲ್ಲು ಅರಣ್ಯದಲ್ಲಿ 6, ಕಬ್ಬಾಳು ಅರಣ್ಯದಲ್ಲಿ 3 ಹಾಗೂ ಕನಕಪುರದ ಬೆಟ್ಟಹಳ್ಳಿ ಗಡಿಯಲ್ಲಿ ಆನೆ ಇರುವ ಮಾಹಿತಿ ಲಭ್ಯವಾಗಿದೆ. ಈಗ ಕಾವೇರಿ ವನ್ಯಜೀವಿ ಧಾಮದಲ್ಲಿ 230ರಿಂದ 250 ಆನೆಗಳಿರುವುದು ದೃಢಪಟ್ಟಿದೆ. ಇದರಲ್ಲಿ ಬನ್ನೇರುಘಟ್ಟ ಹಾಗೂ ತಮಿಳುನಾಡಿನ ಹೊಸೂರು ಭಾಗಗಳಿಂದ ವಲಸೆ ಬರುವ ಆನೆಗಳೂ ಸೇರಿವೆ. ಕನಕಪುರ ಭಾಗಕ್ಕೆ ಹೊಂದಿಕೊಂಡಿರುವ ಅರಣ್ಯದಲ್ಲೇ 50ರಿಂದ 60 ಆನೆಗಳಿವೆ.(ಇನ್ನೊಂದು ಬಾಕ್ಸ್ ಸುದ್ದಿ ಬರಲಿದೆ)
