ಪುರದಾಳು ಗ್ರಾಮದಲ್ಲಿ ಕಾಡಾನೆಗಳು ಕಾಣಿಸಿಕೊಂಡಿದ್ದು, ರೈತರ ತೋಟಗಳ ಮೇಲೆ ದಾಳಿ ನಡೆಸಿ ಅಡಕೆ ಮರಗಳನ್ನು ನಾಶ ಮಾಡಿದ ಘಟನೆ ಗುರುವಾರ ರಾತ್ರಿ ನಡೆದಿದೆ.
ಶಿವಮೊಗ್ಗ: ಪುರದಾಳು ಗ್ರಾಮದಲ್ಲಿ ಕಾಡಾನೆಗಳು ಕಾಣಿಸಿಕೊಂಡಿದ್ದು, ರೈತರ ತೋಟಗಳ ಮೇಲೆ ದಾಳಿ ನಡೆಸಿ ಅಡಕೆ ಮರಗಳನ್ನು ನಾಶ ಮಾಡಿದ ಘಟನೆ ಗುರುವಾರ ರಾತ್ರಿ ನಡೆದಿದೆ.
ಗುರುವಾರ ತಡರಾತ್ರಿ ವೇಳೆ ಪುರದಾಳು ಗ್ರಾಮದ ವಸಂತ್ ಕುಮಾರ್, ಅನಂತಪ್ಪ, ವೀರಪ್ಪ ಮತ್ತು ಚಂದ್ರಮ್ಮರವರ ಅಡಿಕೆ ತೋಟಕ್ಕೆ ನುಗ್ಗಿದ ಕಾಡಾನೆಗಳು ಸುಮಾರು 35ಕ್ಕೂ ಹೆಚ್ಚು ಅಡಕೆ ಮರಗಳನ್ನು ಹಾಗೂ ಬಾಳೆ ತೋಟವನ್ನು ನಾಶಪಡಿಸಿವೆ.ಪದೇ ಪದೇ ಕಾಡಾನೆಗಳು ದಾಳಿ ನಡೆಸುತ್ತಿದ್ದು ರೈತರ ಬೆಳೆ ಕೈ ತಪ್ಪುತ್ತಿದ್ದರೂ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಅರಣ್ಯ ಇಲಾಖೆಯ ವಿರುದ್ಧ ರೈತರು ಹಿಡಿ ಶಾಪ ಹಾಕುತ್ತಿದ್ದಾರೆ.
ಕಾಡಾನೆ ಹಾವಳಿ ತಪ್ಪಿಸಿ ರೈತರ ಬೆಳೆ ರಕ್ಷಿಸುವಂತೆ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದ್ದರೂ ಕಾಡಾನೆ ದಾಳಿ ತಡೆಯುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದ್ದು, ಈ ಕೂಡಲೇ ಆನೆ ದಾಳಿ ತಡೆಯಲು ಸೋಲಾರ್ ಫೆನ್ಸಿಂಗ್ ಅಳವಡಿಸುವುದರ ಜೊತೆಗೆ ರೈತರಿಗೆ ಪರಿಹಾರ ನೀಡಬೇಕೆಂದು ಪುರದಾಳು ಗ್ರಾಮ ಪಂಚಾಯಿತಿ ಸದಸ್ಯ ಪ್ರದೀಪ್ ಎಸ್ ಹೆಬ್ಬೂರ್ ಅಗ್ರಹಿಸಿದ್ದಾರೆ.