ಬಂಗಾರಪೇಟೆ ತಾಲೂಕಿನ ಗಡಿಭಾಗದಲ್ಲಿ ಮೊಕ್ಕಾಂ ಹೂಡಿರುವ ಗಜಪಡೆ ಪ್ರತಿ ದಿನ ಗಡಿ ಗ್ರಾಮಗಳಲ್ಲಿ ಕಾಣಿಸಿಕೊಂಡು ಜನರ ನೆಮ್ಮದಿಯನ್ನು ಕೆಡಿಸುತ್ತಿವೆ. ಕದಿರಿನತ್ತ, ಸಾಕರಸನಹಳ್ಳಿ, ಭೀಮಗಾನಹಳ್ಳಿ, ಕೀರುಮಂದೆ ಸೇರಿದಂತೆ ಗಡಿಗ್ರಾಮಗಳ ಸುತ್ತಮುತ್ತಲು ೬ ಕಾಡಾನೆಗಳ ಗುಂಪು ರೈತರು ಬೆಳೆದಿರುವಂತಹ ರಾಗಿ, ಭತ್ತ, ಟೊಮ್ಯಾಟೋ ಇತ್ಯಾದಿ ಬೆಳೆಗಳನ್ನು ನಾಶಪಡಿಸಿವೆ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಗಡಿಭಾಗದಲ್ಲಿ ಕಾಡಾನೆಗಳ ಉಪಟಳ ಮಿತಿ ಮೀರಿದ್ದು, ಕಾಡಂಚಿನ ಗ್ರಾಮಗಳ ರೈತರ ಬೆಳೆಗಳನ್ನು ನಾಶಮಾಡುವ ಮೂಲಕ ಅನ್ನದಾತನನ್ನು ಸಂಕಷ್ಟಕ್ಕೆ ತಂದೊಡ್ಡುತ್ತಿವೆ.ತಾಲೂಕಿನ ಗಡಿಭಾಗದಲ್ಲಿ ಮೊಕ್ಕಾಂ ಹೂಡಿರುವ ಗಜಪಡೆ ಪ್ರತಿ ದಿನ ಗಡಿ ಗ್ರಾಮಗಳಲ್ಲಿ ಕಾಣಿಸಿಕೊಂಡು ಜನರ ನೆಮ್ಮದಿಯನ್ನು ಕೆಡಿಸುತ್ತಿವೆ. ಕದಿರಿನತ್ತ, ಸಾಕರಸನಹಳ್ಳಿ, ಭೀಮಗಾನಹಳ್ಳಿ, ಕೀರುಮಂದೆ ಸೇರಿದಂತೆ ಗಡಿಗ್ರಾಮಗಳ ಸುತ್ತಮುತ್ತಲು ೬ ಕಾಡಾನೆಗಳ ಗುಂಪು ರೈತರು ಬೆಳೆದಿರುವಂತಹ ರಾಗಿ, ಭತ್ತ, ಟೊಮ್ಯಾಟೋ ಇತ್ಯಾದಿ ಬೆಳೆಗಳನ್ನು ನಾಶ ಮಾಡುವ ರೈತರಿಗೆ ಲಕ್ಷಾಂತರ ರೂಗಳ ನಷ್ಟವನ್ನು ಉಂಟುಮಾಡುತ್ತಿವೆ.

ಬೆಳೆನಷ್ಟ ಪರಿಹಾರಕ್ಕೆ ಆಗ್ರಹ

ಗುರುವಾರ ಭೀಮಗಾನಹಳ್ಳಿ ಗ್ರಾಮದಲ್ಲಿ ಭತ್ತದ ರಾಶಿ, ಜೋಳ, ಬಾಳೆ ಮತ್ತು ರಾಗಿ ಬೆಳೆಯನ್ನು ಆನೆಗಳು ನಾಶ ಮಾಡಿವೆ. ರೈತ ತಿಮ್ಮೇಗೌಡ ರಾಗಿ ರಾಶಿ, ನಾಗಯ್ಯರ ರಾಗಿ ಮೇದೆಯಸಂಗ್ರಿಸಿಟ್ಟಿದ್ದರು. ಅವುಗಳನ್ನು ಆನೆಗಳು ನಶಪಡಿಸಿವೆ. ಕಾಡಾನೆಗಳ ನಿಯಂತ್ರಣಕ್ಕೆ ಸೋಲಾರ್ ಫೆನ್ಸಿಂಗ್ ಅಳವಡಿಸಿದ್ದರೂ, ಅದು ಸರಿಯಾಗಿ ಕೆಲಸ ಮಾಡದ ಕಾರಣ ಕಾಡಿನಿಂದ ನಾಡಿಗೆ ಬರುವ ಆನೆಗಳು ರೈತರು ಕಷ್ಟಪಟ್ಟು ಬೆಳೆದ ಬೆಳೆಯನ್ನು ನಾಶಮಾಡುತ್ತಿದೆ. ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದ ಬೆಳೆಗಳು ನಾಶವಾಗುತ್ತಿದ್ದು, ಬೆಳೆ ನಾಶಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ರೈತರು ಒತ್ತಾಯ ಮಾಡಿದ್ದಾರೆ.ಕಾಡಾನೆಗಳ 2 ಗುಂಪು

ಕಾಡಾನೆಗಳ ಕಾರ್ಯಾಚರಣೆಗೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜನೆ ಮಾಡಿ ಹಗಲು ರಾತ್ರಿ ಅವುಗಳನ್ನು ಓಡಿಸಲು ಪ್ರಯತ್ನ ಮಾಡಲಾಗುತ್ತಿದೆ. ಆದರೆ ತಮಿಳುನಾಡಿನ ಅರಣ್ಯ ಪ್ರದೇಶಕ್ಕೆ ಹೋಗಿ ಮತ್ತೆ ನಮ್ಮ ಕಡೆ ಬರುತ್ತಿದೆ. ಎರಡು ಗುಂಪುಗಳಲ್ಲಿ ಇರುವಂತಹ ಆನೆಗಳ ಪೈಕಿ ಒಂದು ಗುಂಪು ದೊಡ್ಡಪೊನ್ನಡಹಳ್ಳಿ, ಯರಗೋಳ್, ಕೀರಮಂದೆ ಅರಣ್ಯ ಪ್ರದೇಶದಲ್ಲಿ ಮತ್ತೊಂದು ಗುಂಪು ತಳೂರು, ಕದಿರಿನತ್ತ ಭಾಗದಲ್ಲಿ ಇದ್ದು, ಕಾಡಂಚಿನ ಸುತ್ತಮುತ್ತಲಿನ ಗ್ರಾಮಸ್ಥರು ಅರಣ್ಯ ಪ್ರದೇಶದ ಕಡೆ, ತೋಟದ ಕಡೆ ಹೋಗುವುದನ್ನು ತಡೆಯಬೇಕು. ದನಕರುಗಳನ್ನು ಮೇಯಿಸಲು ಯಾವುದೇ ಕಾರಣಕ್ಕೂ ಕಾಡಿನೊಳಗೆ ಹೋಗಬಾರದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿದಿನ ರೈತರ ಬೆಳೆಗಳು ನಾಶವಾಗುತ್ತಿರುವುದನ್ನು ನೋಡಿದರೆ, ಕಾಡಾನೆಗಳನ್ನು ಸಿಬ್ಬಂದಿ ಕಾಟಾಚಾರಕ್ಕೆ ಎಂಬಂತೆ ಕಾರ್ಯಾಚರಣೆ ಮಾಡುತ್ತಿದ್ದಾರೆ. ಭೀಮಗಾನಹಳ್ಳಿ ಗ್ರಾಮ ಒಂದರಲ್ಲೇ ಐದಾರು ರೈತರ ವರ್ಷದ ಕೂಳು ಇಲ್ಲದಂತಾಗಿದೆ. ಅರಣ್ಯ ಇಲಾಖೆ ಕೊಡುವಂತಹ ಪರಿಹಾರದಿಂದ ಒಂದು ಬಾರಿ ಭೂಮಿಯನ್ನು ಉಳುಮೆ ಮಾಡಿಸಲಿಕ್ಕೆ ಸಾಧ್ಯವಿಲ್ಲ. ಸಿಬ್ಬಂದಿಯ ನಿರ್ಲಕ್ಷದಿಂದ ಬೆಳೆಗಳು ನಾಶವಾಗುತ್ತಿದ್ದು, ಸರ್ಕಾರ ತಜ್ಞರನ್ನು ಕರೆಯಿ ಆನೆಗಳನ್ನು ತಮಿಳುನಾಡಿಗೆ ಓಡಿಸಬೇಕು. ಜೊತೆಗೆ ರೈತರ ಕಷ್ಟಕ್ಕೆ ನೆರವಾಗಲು ಮುಂದಾಗಬೇಕು ಹಾಗೂ ಬೆಳೆ ನಷ್ಟ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.