ಸಾರಾಂಶ
ಕೊಪ್ಪ ಹೊರವಲಯದ ಹಂದಿಗೋಡು ಪ್ರದೇಶದಲ್ಲಿ ನ.೨೫ರ ರಾತ್ರಿ ಆನೆಗಳು ಬಂದಿರುವ ಕುರುಹು ಸಿಕ್ಕಿದ್ದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಬಾಳಗಡಿ ತಾಲೂಕು ಕಚೇರಿಗೆ ಸಮೀಪದ ಹಂದಿಗೋಡು ಶ್ರೀನಿವಾಸ್ ರಾವ್‌ರವರ ಗದ್ದೆ, ತೋಟದಲ್ಲಿ ಆನೆಗಳ ಹೆಜ್ಜೆ ಗುರುತು ಹಾಗೂ ಲದ್ದಿ ಅವಶೇಷಗಳು ಕಂಡುಬಂದಿವೆ.
ಬಾಳಗಡಿಯ ಹಂದಿಗೋಡು ಶ್ರೀನಿವಾಸ್ ರಾವ್‌ರವರ ಗದ್ದೆ, ತೋಟದಲ್ಲಿ ಆನೆಗಳ ಹೆಜ್ಜೆ ಗುರುತು
ಕನ್ನಡಪ್ರಭ ವಾರ್ತೆ, ಕೊಪ್ಪಕೊಪ್ಪ ಹೊರವಲಯದ ಹಂದಿಗೋಡು ಪ್ರದೇಶದಲ್ಲಿ ನ.೨೫ರ ರಾತ್ರಿ ಆನೆಗಳು ಬಂದಿರುವ ಕುರುಹು ಸಿಕ್ಕಿದ್ದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಬಾಳಗಡಿ ತಾಲೂಕು ಕಚೇರಿಗೆ ಸಮೀಪದ ಹಂದಿಗೋಡು ಶ್ರೀನಿವಾಸ್ ರಾವ್‌ರವರ ಗದ್ದೆ, ತೋಟದಲ್ಲಿ ಆನೆಗಳ ಹೆಜ್ಜೆ ಗುರುತು ಹಾಗೂ ಲದ್ದಿ ಅವಶೇಷಗಳು ಕಂಡುಬಂದಿವೆ. ಗದ್ದೆಯಲ್ಲಿ ಆ ದಿನವೇ ಬತ್ತದ ಕೊಯ್ಲು ನಡೆದಿದ್ದು ಮಾರನೆ ದಿನ ಹೊರೆಗಾಗಿ ಕೊಯ್ದ ಬತ್ತದ ತೆನೆಗಳನ್ನು ಗದ್ದೆಯಲ್ಲೇ ಬಿಡಲಾಗಿತ್ತು. ಮಂಗಳವಾರ ಹೊರೆಗೆ ಸಿದ್ಧತೆ ನಡೆಸುತ್ತಿದ್ದಾಗ ಗದ್ದೆ ತೋಟದಲ್ಲಿ ಆನೆ ಹೆಜ್ಜೆಗುರುತು, ಲದ್ದಿ ಬಿದ್ದಿರುವುದನ್ನು ಕಂಡು ಒಂದು ಕ್ಷಣ ಭಯ, ಗಾಬರಿ ಉಂಟಾಯಿತು ಎಂದು ತೋಟದ ಮಾಲೀಕರ ಪುತ್ರ ದೇವದತ್ ತಿಳಿಸಿದ್ದಾರೆ.
ಮರಿಯಾನೆಯೊಂದಿಗೆ ದೊಡ್ಡ ಆನೆ ಹೆಜ್ಜೆ ಗುರುತು ಮೂಡಿದ್ದವು. ಗದ್ದೆಯಲ್ಲಿ ಕೊಯ್ಲು ಮಾಡಿ ಹಾಕಿದ ಸೋನಮಸೂರಿ ಬತ್ತದ ತೆನೆಗಳನ್ನು ತಿಂದಿರುವ ಆನೆಗಳು ತೋಟದಲ್ಲಿ ಸುಮಾರು ಅರ್ಧ ಕಿ.ಮೀ. ದೂರದವರೆಗೂ ಎಳೆದು ಹಾಕಿದ ಕುರುಹುಗಳು ಇವೆ. ಧರೆ ಹತ್ತಿ ಬಾಳಗಡಿ ಗುಡ್ಡದ ಮೇಲಿಂದ ಬಲಗಾರು ಕಡೆಗೆ ಆನೆಗಳು ಹೋಗಿರುವ ಬಗ್ಗೆ ಬಲಗಾರು ಗ್ರಾಮಸ್ಥರು ಸುಳಿವು ನೀಡಿದ್ದಾರೆ. ಪಟ್ಟಣಕ್ಕೆ ಸಮೀಪದಲ್ಲಿ ಆನೆಗಳು ಗೋಚರವಾಗಿರುವುದು ಗಾಬರಿ ತರಿಸುವಂತಹ ವಿಷಯ. ಅರಣ್ಯ ಇಲಾಖೆ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ಕೃಷಿಕ ವಸಂತ್ ವಿ.ಹರ್ಡಿಕರ್ ತಿಳಿಸಿದ್ದಾರೆ. ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಪಟ್ಟಣಕ್ಕೆ ಅತೀ ಸಮೀಪದ ಬಲಗಾರು ಬಳಿ ಆನೆಗಳು ಕಾಣಿಸಿಕೊಂಡಿದ್ದು ಮೂರ‍್ನಾಲ್ಕು ಆನೆಗಳು ಇದ್ದವೆಂಬ ಶಂಕೆಯನ್ನು ಅನೇಕರು ವ್ಯಕ್ತಪಡಿಸಿದ್ದರು. ಈ ಭಾಗದಲ್ಲಿ ಆನೆ ವಾಸಸ್ಥಾನ ಇದಿಲ್ಲ. ಆನೆಗಳು ಈವರೆಗೂ ಆಹಾರ ಹುಡುಕಿ ಈ ಭಾಗಕ್ಕೆ ಬಂದ ಉದಾಹಣೆಯೇ ಇಲ್ಲ. ಆನೆಗಳ ಹಿಂಡಿನಲ್ಲಿದ್ದ ಮರಿಯಾನೆ ತಪ್ಪಿಸಿಕೊಂಡು ಬಂದ ಹಿನ್ನೆಲೆ ಯಲ್ಲಿ ಅದನ್ನು ಹುಡುಕಿ ತಾಯಿ ಆನೆ ಬಂದಿರಬಹುದು. ಬಲಗಾರು ಭಾಗದಿಂದ ಆನೆ ಹೋಗಿರುವ ಸುಳಿವು ಇದೆ ಎಂದಾದರೆ ಕಟ್ಟಿನಮನೆ ಮುಖೇನ ಚಿಕ್ಕಗ್ರಹಾರ ವಲಯ ಅರಣ್ಯ ಸೇರಿರುವ ಸಾಧ್ಯತೆ ಹೆಚ್ಚಿದೆ ಎಂದು ಕೆಲವರು ಅನಿಸಿಕೆ ವ್ಯಕ್ತಪಡಿಸಿದ್ದಾರೆ.