ವಿಷಯ ತಿಳಿದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿ, ಆನೆಗಳು ಸ್ಥಳಬಿಟ್ಟು ಬೇರೆಡೆಗೆ ಹೋಗದಂತೆ ನಾಕಾಬಂಧಿ ನಿರ್ಮಿಸಿ ಕಟ್ಟೆಚ್ಚರ ವಹಿಸಿದ್ದರು. ಆನೆಗಳನ್ನು ರಾತ್ರಿ ವೇಳೆ ಕಾಡಿಗೆ ಓಡಿಸಲು ಸಕಲ ಸಿದ್ಧತೆ ಮಾಡಿಕೊಂಡಿರುವುದಾಗಿ ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ರಾಮನಗರ
ತಾಲೂಕಿನ ಬಿಡದಿ ಹೋಬಳಿ ತೊರೆದೊಡ್ಡಿ(ಇಟ್ಟಮಡು) ಗ್ರಾಮದ ಬಳಿ ತೋಟದಲ್ಲಿ ಮಂಗಳವಾರ ಸಂಜೆ ವೇಳೆಗೆ ಮೂರು ಕಾಡಾನೆಗಳು ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿವೆ.ಬಿಡದಿ- ಮುದವಾಡಿ ಮುಖ್ಯರಸ್ತೆ ಪಕ್ಕದಲ್ಲಿರುವ ಖಾಸಗಿ ಜಮೀನಿನಲ್ಲಿ ಮೂರು ಕಾಡಾನೆಗಳಿರುವುದು ಕಂಡುಬಂದಿದೆ. ಇದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸುದ್ಧಿ ಮುಟ್ಟಿಸಿದರು. ಕಾಡಾನೆಗಳು ಹಂದಿಗೊಂದಿ ಅರಣ್ಯ ಪ್ರದೇಶದಿಂದ ಆಹಾರವನ್ನರಸಿ ಉರಗಹಳ್ಳಿ ಮಾರ್ಗವಾಗಿ ರಾಮನಹಳ್ಳಿ ಮೂಲಕ ಬಂದಿದ್ದು, ಅಕ್ಕಪಕ್ಕದ ಜಮೀನುಗಳಿಗೆ ಹೋಗದಂತೆ ಅರಣ್ಯ ಇಲಾಖೆ ಸಿಬ್ಬಂದಿ ಕ್ರಮವಹಿಸಿದ್ದರು.
ಕೆಲವು ದಿನಗಳ ಹಿಂದೆಯಷ್ಟೇ ಹೆಗ್ಗಡಗೆರೆ ಕೆರೆಯ ಆಸುಪಾಸಿನ ತೋಟಗಳಲ್ಲಿ ಎರಡು ಆನೆಗಳು ಕಾಣಿಸಿಕೊಂಡು ರೈತರಲ್ಲಿ ಆತಂಕ ಮೂಡಿಸಿದ್ದವು. ಈಗ ಮೂರು ಆನೆಗಳು ಸೋಮವಾರ ರಾತ್ರಿ ಆಹಾರ ಅರಸಿಕೊಂಡು ಬಂದಿವೆ. ರಾಮನಹಳ್ಳಿ ಕಡೆಯಿಂದ ಬರುವಾಗ ರೈತರ ತೋಟಗಳಲ್ಲಿ ಬೆಳೆದಿದ್ದ ಫಸಲುಗಳನ್ನು ಆನೆಗಳು ತಿಂದು ನಾಶಪಡಿಸಿವೆ. ಆಹಾರ ಸಿಕ್ಕ ನಂತರ ಮತ್ತೆ ಅರಣ್ಯದ ಕಡೆಗೆ ಹೋಗುವ ವೇಳೆಗೆ ಬೆಳಕಾಗಿದ್ದ ಕಾರಣದಿಂದಾಗಿ ತೊರೆದೊಡ್ಡಿ ಹೊರವಲಯದಲ್ಲಿರುವ ಜಮೀನಿನಲ್ಲಿ ಕುರುಚಲು ಗಿಡಗಳ ಮಧ್ಯೆ ಬೀಡುಬಿಟ್ಟಿವೆ.ವಿಷಯ ತಿಳಿದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿ, ಆನೆಗಳು ಸ್ಥಳಬಿಟ್ಟು ಬೇರೆಡೆಗೆ ಹೋಗದಂತೆ ನಾಕಾಬಂಧಿ ನಿರ್ಮಿಸಿ ಕಟ್ಟೆಚ್ಚರ ವಹಿಸಿದ್ದರು. ಆನೆಗಳನ್ನು ರಾತ್ರಿ ವೇಳೆ ಕಾಡಿಗೆ ಓಡಿಸಲು ಸಕಲ ಸಿದ್ಧತೆ ಮಾಡಿಕೊಂಡಿರುವುದಾಗಿ ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.
ಬಿಡದಿ ಸಮೀಪಕ್ಕೆ ಕಾಡಾನೆಗಳು ಬಂದಿರುವ ಸುದ್ದಿ ತಿಳಿದ ಸುತ್ತಮುತ್ತಲಿನ ಪ್ರದೇಶದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಆನೆಗಳನ್ನು ದೂರದಿಂದ ಕಂಡು ಕುತೂಹಲ ತಣಿಸಿಕೊಂಡರು.