ಸಾರಾಂಶ
ಇಲ್ಲಿನ ನೇರ್ತನೆ ರಸ್ತೆಯ ಪಕ್ಕದಲ್ಲಿಯೇ ಕಾಡಾನೆಗಳು ಓಡಾಟ ನಡೆಸುತ್ತಿದ್ದು ಸಂಜೆಯಾದರೆ ಜನರು ಮನೆಗಳಿಂದ ಹೊರಬರಲು ಭಯ ಪಡುವ ವಾತಾವರಣ ನಿರ್ಮಾಣವಾಗಿದೆ. ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿ ಮುಂದುವರಿದಿದೆ.
ಶುಕ್ರವಾರ ರಾತ್ರಿಯ ವೇಳೆ ಧರ್ಮಸ್ಥಳ ಪೊಲಸೊಳಿಕೆ ನಿವಾಸಿ ಕೃಷ್ಣಪ್ಪ ಅವರ ಮನೆಯ ಸಮೀಪದ ತೋಟಕ್ಕೆ ನುಗ್ಗಿದ ಕಾಡಾನೆಗಳು ಬಾಳೆ ಹಾಗೂ ಅಡಕೆ ಗಿಡ, ಮರಗೆಣಸಿನ ಗಿಡಗಳನ್ನು ನಾಶಗೊಳಿಸಿದೆ. ತೋಟದಲ್ಲಿದ್ದ ಬಾಳೆಗಿಡಗಳನ್ನು ಸಂಪೂರ್ಣವಾಗಿ ಮುರಿದು ಹಾಕಿದ್ದು ಮನೆಯ ಸಮೀಪವೇ ಆನೆಗಳು ಓಡಾಟ ನಡೆಸಿದ್ದು ಜನರಲ್ಲಿ ಭಯಮೂಡಿಸಿದೆ.ಧರ್ಮಸ್ಥಳ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಸಮೀಪ್ ನಿವಾಸಿ ಕ್ಸೇವಿಯರ್ ಎಂಬವರಿಗೆ ಸೇರಿದ ತೋಟಕ್ಕೆ ನುಗ್ಗಿದ ಕಾಡಾನೆಗಳು ವ್ಯಾಪಕವಾಗಿ ಕೃಷಿಗೆ ಹಾನಿಯುಂಟುಮಾಡಿದೆ. ಇಲ್ಲಿ ಫಸಲು ಬರುವ ಸುಮಾರು ಹತ್ತಕ್ಕೂ ಅಧಿಕ ಅಡಕೆ ಮರಗಳನ್ನು ನೆಲಕ್ಕೆ ಉರುಳಿಸಿದೆ. ದೊಡ್ಡ ತೆಂಗಿನ ಮರಗಳನ್ನೂ ನೆಲಕ್ಕೆ ಉರುಳಿಸಿದೆ. ತೋಟದಲ್ಲಿ ನೀರಿನ ಸಂಪರ್ಕ ಕ್ಕೆ ಹಾಕಲಾಗಿದ್ದ ಪೈಪ್‌ಗಳನ್ನು ಸಂಪೂರ್ಣವಾಗಿ ಪುಡಿಗೈದಿದ್ದು ಅಪಾರ ನಷ್ಟ ಸಂಭವಿಸಿದೆ. ಇಲ್ಲಿನ ನೇರ್ತನೆ ರಸ್ತೆಯ ಪಕ್ಕದಲ್ಲಿಯೇ ಕಾಡಾನೆಗಳು ಓಡಾಟ ನಡೆಸುತ್ತಿದ್ದು ಸಂಜೆಯಾದರೆ ಜನರು ಮನೆಗಳಿಂದ ಹೊರಬರಲು ಭಯ ಪಡುವ ವಾತಾವರಣ ನಿರ್ಮಾಣವಾಗಿದೆ. ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.