ಸಾರಾಂಶ
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಮನೆಯ ಮುಂದೆ ವಾಯು ವಿಹಾರ ಮಾಡುತ್ತಿದ್ದ ಕಾಫಿ ಬೆಳೆಗಾರರ ಮೇಲೆ ಒಂಟಿಸಲಗ ದಾಳಿ ನಡೆಸಿದ್ದು, ಸಮಯಪ್ರಜ್ಞೆಯಿಂದ ಅವರು ಓಡಿ ಪಾರಾದ ಘಟನೆ ಶುಕ್ರವಾರ ಬೆಳಗ್ಗೆ ಕೊಡಗರಹಳ್ಳಿಯಲ್ಲಿ ನಡೆದಿದೆ.ಕೊಡಗರಹಳ್ಳಿ ಲಕ್ಷ್ಮಿ ತೋಟದ ಮಾಲೀಕ ಬಿ.ಡಿ.ಸುಭಾಷ್ ಕಾಡಾನೆ ದಾಳಿಯಿಂದ ಪಾರಾದವರು. ಈ ಸಂದರ್ಭ ಒಂಟಿಸಲಗದ ಘೀಳು, ಜನರ ಕೂಗಾಟ, ನಾಯಿಗಳ ಚೀರಾಟದಿಂದ ಈ ಭಾಗದಲ್ಲಿ ಕೆಲ ನಿಮಿಷ ಯಾರಿಗೂ, ಏನು ತೋಚದ ಅಯೋಮಯ ಪರಿಸ್ಥಿತಿ ಉಂಟಾಗಿತ್ತು. ಈ ನಡುವೆ ಒಂಟಿಸಲಗ ರಸ್ತೆ ದಾಟಿ ತೋಟದೊಳಗೆ ಮರೆಯಾಗಿದೆ.
ನಿರಂತರ ದಾಂದಲೆ:ಕೆಲವು ಸಮಯದ ಹಿಂದೆ ಸಿದ್ದಾಪುರ ವ್ಯಾಪ್ತಿಯಲ್ಲಿ ವರದಿಯಾಗುತ್ತಿದ್ದ ಕಾಡಾನೆಗಳ ದಾಳಿ ಮತ್ತು ಹಾವಳಿಗಳು ಸುಂಟಿಕೊಪ್ಪ ಹೋಬಳಿಯ ಕೊಡಗರಹಳ್ಳಿ ಉಪ್ಪು ತೋಡು, ಕಂಬಿಬಾಣೆ, 7ನೇ ಹೊಸಕೋಟೆ, ಮತ್ತಿಕಾಡು,ಭೂತನಕಾಡು,ಕೆದಕಲ್, ಹೊರೂರು ವ್ಯಾಪ್ತಿಗೂ ವಿಸ್ತರಿಸಿದೆ. ಇಲ್ಲಿ ಹಗಲು ರಾತ್ರಿ ಎನ್ನದೆ ಕಾಡಾನೆಗಳು ಸಂಚರಿಸುತ್ತಿದ್ದು ಆನೆ ಮತ್ತು ಮಾನವರ ನಡುವೆ ಮಾಡು ಇಲ್ಲಾವೇ ಮಡಿ ಎಂಬ ಹಂತ ತಲುಪಿದೆ. ಅರಣ್ಯ ಇಲಾಖೆಯ ಕ್ಷಿಪ್ರ ಕಾರ್ಯಪಡೆ ಮಳೆ ಗಾಳಿ ಚಳಿಯನ್ನು ಲೆಕ್ಕಿಸದೆ ತಮಗೆ ವಹಿಸಿದ ಕೆಲಸ ನಿರ್ವಹಿಸುತ್ತಿದೆ. ಆದರೆ ಆನೆ ದಾಂದಲೆ ನಿಂತಿಲ್ಲ.
ಅರಣ್ಯ ಇಲಾಖೆಯ ವತಿಯಿಂದ ಕಾಡಾನೆಗಳನ್ನು ಓಡಿಸುವುದು ಹೊರತು ಪಡಿಸಿದರೆ ಬೇರೆ ಕಾರ್ಯಕ್ರಮ ನಡೆಯುತ್ತಿಲ್ಲ. ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಸುಮಾರು 10-15 ಕಾಡಾನೆಗಳ ಹಿಂಡು ಕಂಟಕಪ್ರಾಯವಾಗಿದ್ದು, ಅವುಗಳನ್ನು ಸೆರೆಹಿಡಿದು ಪಳಗಿಸಬೇಕಾಗಿದೆ.ಈ ವ್ಯಾಪ್ತಿಯಲ್ಲಿ ಒಂಟಿ ಸಲಗವೊಂದು ಮನೆ, ಶಾಲೆ, ಜನವಸತಿ ಪ್ರದೇಶಗಳಲ್ಲಿ ಸಂಚಾರ ನಡೆಸಿ ಹಾನಿ ಪ್ರಾಣಬೀತಿ ಉಂಟುಮಾಡುತ್ತಿದೆ.