ಪ್ರಕೃತಿ, ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಉದ್ದೇಶ
ಸಂಡೂರು: ಕಾಡು ಹಾಗೂ ವನ್ಯಜೀವಿಗಳ ಸಂರಕ್ಷಣೆ ಕೇವಲ ಅರಣ್ಯ ಇಲಾಖೆಯ ಜವಾಬ್ದಾರಿಯಲ್ಲ. ಮುಂದಿನ ಪೀಳಿಗೆಗೆ ಶುದ್ಧ ಗಾಳಿ, ನೀರು ಹಾಗೂ ಸುಂದರ ಪರಿಸರ ಉಳಿಸಿಕೊಡುವುದು ಪ್ರತಿಯೊಬ್ಬ ನಾಗರಿಕನ ಹೊಣೆಯಾಗಿದೆ ಎಂದು ಸಂಡೂರು ದಕ್ಷಿಣ ವಲಯ ಅರಣ್ಯಾಧಿಕಾರಿ ಸೈಯದ್ ದಾದಾ ಖಲಂದರ್ ತಿಳಿಸಿದರು.
ತಾಲೂಕಿನ ನಂದಿಹಳ್ಳಿಯಲ್ಲಿರುವ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ೭೨ನೇ ವನ್ಯಜೀವಿ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.ಪ್ರತಿ ಅಕ್ಟೋಬರ್ ತಿಂಗಳಲ್ಲಿ ದೇಶಾದ್ಯಂತ ವನ್ಯಜೀವಿ ಸಪ್ತಾಹ ಆಚರಿಸಲಾಗುತ್ತಿದ್ದು, ಪ್ರಕೃತಿ, ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ವನ್ಯಜೀವಿಗಳನ್ನು ರಕ್ಷಿಸುವುದೆಂದರೆ ಕೇವಲ ಕಾಡಿನಲ್ಲಿರುವ ಪ್ರಾಣಿಗಳನ್ನು ಉಳಿಸುವುದಲ್ಲ. ಅವುಗಳೊಂದಿಗೆ ಸಹಬಾಳ್ವೆ ನಡೆಸುವ ಪರಿಸರ ವ್ಯವಸ್ಥೆ ಸಂರಕ್ಷಿಸುವುದಾಗಿದೆ. ಅರಣ್ಯ ನಾಶವಾದರೆ, ಅದರ ಪರಿಣಾಮ ಮನುಷ್ಯನ ಬದುಕಿನ ಮೇಲೆಯೂ ಬೀರುತ್ತದೆ. ಆದ್ದರಿಂದ ಕಾಡು ಮತ್ತು ವನ್ಯಜೀವಿಗಳ ರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು.
ಸಂಡೂರು ಉತ್ತರ ಹಾಗೂ ದಕ್ಷಿಣ ವಲಯಗಳ ಒಟ್ಟು ೩೫,೨೮೪ ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ಚಿರತೆ, ಕರಡಿ, ಕಾಡುಹಂದಿ, ಕೊಂಡಗುರಿ, ನವಿಲು ಸೇರಿದಂತೆ ವಿವಿಧ ಪ್ರಾಣಿ ಪಕ್ಷಿಸಂಕುಲ ಹಾಗೂ ಅನೇಕ ಜಾತಿಯ ಸರಿಸೃಪಗಳು ಕಂಡು ಬರುತ್ತವೆ. ಈ ಜೀವವೈವಿದ್ಯ ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಎಚ್.ತಿಪ್ಪೇಸ್ವಾಮಿ ಮಾತನಾಡಿ, ವನ್ಯಜೀವಿ ಹಾಗೂ ಅರಣ್ಯ ಸಂರಕ್ಷಣೆಯಲ್ಲಿ ಯುವ ಸಮುದಾಯ ಪ್ರಮುಖ ಪಾತ್ರ ವಹಿಸಬೇಕಿದೆ. ವಿದ್ಯಾರ್ಥಿಗಳು ಪ್ರಕೃತಿ ಮತ್ತು ಜೀವಸಂಕುಲದ ಬಗ್ಗೆ ಕಾಳಜಿ ವಹಿಸಿ ಅವುಗಳ ಪೋಷಣೆ ಹಾಗೂ ಸಂರಕ್ಷಣೆಗೆ ಮುಂದಾದಾಗ ಅವರ ಬದುಕಿಗೂ ನಿಜವಾದ ಅರ್ಥ ಬರುತ್ತದೆ. ನಮ್ಮ ಜೀವನದ ಮೂಲಾಧಾರವೇ ಪರಿಸರ. ಪರಿಸರದ ಸಮತೋಲನ ಹದಗೆಟ್ಟರೆ, ಯಾವುದೇ ತಂತ್ರಜ್ಞಾನವೂ ಮಾನವ ಬದುಕನ್ನು ಉಳಿಸಲು ಸಾಧ್ಯವಿಲ್ಲ. ಆದ್ದರಿಂದ ವನ್ಯಜೀವಿ ಸಪ್ತಾಹದ ಸಂದರ್ಭದಲ್ಲಿ ಕಾಡು, ವನ್ಯಜೀವಿ ಹಾಗೂ ಪರಿಸರ ಸಂರಕ್ಷಿಸುವ ದೃಢ ಸಂಕಲ್ಪ ಪ್ರತಿಯೊಬ್ಬರೂ ಮಾಡಬೇಕು ಎಂದು ಕರೆ ನೀಡಿದರು.
ಬಳ್ಳಾರಿಯ ಡಾ.ಅಶೋಕ್ ಬಿ ಅವರು ಹಾವುಗಳು ಹಾಗೂ ಸರಿಸೃಪಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.ಆಶು ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.ಉಪ ವಲಯ ಅರಣ್ಯಾಧಿಕಾರಿ ಆರ್. ತಿಪ್ಪೇಸ್ವಾಮಿ ಸ್ವಾಗತಿಸಿದರೆ, ವೀರಾಂಜನೇಯ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಕೆ.ಎಂ. ಹೊನ್ನೂರಸ್ವಾಮಿ ವಂದಿಸಿದರು. ಕಾರ್ಯಕ್ರಮದಲ್ಲಿ ಡಾ. ಚೌಡ್ಪಪ್ಪ, ಡಾ. ಸುಮಾ, ಸದ್ವಿದ್ಯಾ ಕಾಲೇಜಿನ ಉಪನ್ಯಾಸಕ ದುರುಗಪ್ಪ, ಉತ್ತರ ವಲಯ ಅರಣ್ಯಾಧಿಕಾರಿ ಬಿ.ಎಸ್. ಮಂಜುನಾಥ್, ಅರಣ್ಯ ಪಾಲಕರಾದ ದೀಪಕ್ ಸಿ, ವೆಂಕಟೇಶ್ ಸಿ, ಚಿಕ್ಕಪ್ಪ, ಚಂದ್ರನಾಯಕ್, ವಿ. ಲಕ್ಷö್ಮಣ್, ಟಿ. ಬಜ್ಜಯ್ಯ, ಅರಣ್ಯ ವೀಕ್ಷಕರಾದ ಆಸಿಫ್, ಚಂದ್ರಶೇಖರ್, ಇಮಾಮ್ ಸಾಬ್ ಸೇರದಂತೆ ಅರಣ್ಯ ಇಲಾಖೆಯ ಸಿಬ್ಬಂದಿ, ಸ್ನಾತಕೋತ್ತರ ಕೇಂದ್ರದ ಉಪನ್ಯಾಸಕರು, ಸಿಬ್ಬಂದಿ, ವಿದ್ಯಾರ್ಥಿಗಳು, ಸದ್ವಿದ್ಯಾ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
