ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ಅರಣ್ಯ ವನ್ಯಜೀವಿ ಇಲಾಖೆ ಅನುಮತಿ ನೀಡಬಾರದು. ಕರ್ನಾಟಕ ಪವರ್ ಕಾರ್ಪೋರೇಶನ್ ಅರಣ್ಯ ಕಾಯ್ದೆಯ ಉಲ್ಲಂಘನೆ ಮಾಡುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆ ಗಂಭೀರ ತನಿಖೆ ನಡೆಸಬೇಕು ಎಂದು ಪಶ್ಚಿಮ ಘಟ್ಟ ಉಳಿಸಿ ಸಭೆ ಅರಣ್ಯ ಸಚಿವರನ್ನು ಒತ್ತಾಯಿಸಿದೆ.

ಸಾಗರದ ವರದಶ್ರೀ ಸಭಾಂಗಣದಲ್ಲಿ ಏರ್ಪಡಿಸಿದ್ದ ಪಶ್ಚಿಮಘಟ್ಟದ ವಿವಿಧ ಪರಿಸರ ಸಂಘಟನೆಗಳ ಸಮಾಲೋಚನಾ ಸಭೆ ಬಳಿಕ ವೃಕ್ಷಲಕ್ಷ ಆಂದೋಲನದ ನಿಯೋಗ ಸಾಗರದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಸಾಗರ ಎ.ಸಿ.ಎಫ್. ರವಿ ಕೆ. ಸೊರಬ ಎ.ಸಿಎಫ್. ಸುರೇಶ, ಹೊಸನಗರ ಎ.ಸಿ.ಎಫ್. ಮೋಹನಕುಮಾರ ಇವರನ್ನು ಭೇಟಿ ಮಾಡಿ ಅರಣ್ಯ ಸಂರಕ್ಷಣೆ ಅಭಿವೃದ್ಧಿ ಕುರಿತು ಮನವಿ ಸಲ್ಲಿಸಿತು.

ರಾಷ್ಟ್ರೀಯ ಸಾಂಬಾರು ಮಂಡಳಿ ನಿರ್ದೇಶಕ ಪ್ರಸನ್ನ ಕೆರೆಕೈ, ತುಮರಿ ಇವರಿಗೆ ಅಪ್ಪೇಮಿಡಿ ಮಾವಿಗೆ ಸಾಂಬಾರು ಮಂಡಳಿ ಮಾನ್ಯತೆ ನೀಡಬೇಕು. ಪಶ್ಚಿಮ ಘಟ್ಟದ ಅಮೂಲ್ಯ ಜೀವವೈವಿಧ್ಯತಳಿ ಅಪ್ಪೇಮಿಡಿಗೆ ರಾಷ್ಟ್ರೀಯ ಸಾಂಬಾರು ಮಂಡಳಿ ಮಾನ್ಯತೆ ನೀಡಬೇಕು, ಸಾಂಬಾರು ಪಟ್ಟಿಗೆ ಸೇರ್ಪಡೆ ಮಾಡಬೇಕು ಎಂದು ಮನವಿ ಮಾಡಿದರು.

ಅಘನಾಶಿನಿ ವೇದಾವತಿ ನದಿ ತಿರುವು ಯೋಜನೆ ಮೂಲಕ ಬೆಂಗಳೂರಿಗೆ ನೀರು ಸಾಗಿಸುವ ಹಿಂಬಾಗಿಲ ಶರಾವತಿ ಯೋಜನೆಯಾಗಿದೆ ಎಂದು ಪಶ್ಚಿಮ ಘಟ್ಟದ ಪರಿಸರ ಸಂಘಟನೆಗಳು ವಿಶ್ಲೇಷಣೆ ಮಾಡಿವೆ. ಬೇಡ್ತಿ ಅಘನಾಶಿನಿ ಯೋಜನೆ ಕೈಬಿಡುವ ನಿರ್ದಾರವನ್ನು ರಾಜ್ಯ ಜಲಸಂಪನ್ಮೂಲ ಇಲಾಖೆ ಪ್ರಕಟಿಸಬೇಕು ಎಂದು ಒತ್ತಾಯಿಸಿದರು.


ಸೊರಬ ತಾಲೂಕು ಚಂದ್ರಗುತ್ತಿ ಬಳಿ ಬಸ್ತಿಕೊಪ್ಪ ಗ್ರಾಮದಲ್ಲಿ ಬೃಹತ್ ಗಣಿಗಾರಿಕೆಗೆ ಅವಕಾಶ ನೀಡಬಾರದು, ಇದಕ್ಕೆ ಜಿಲ್ಲಾಡಳಿತ, ಅರಣ್ಯ ಇಲಾಖೆ ಅನುಮತಿ ನೀಡಬಾರದು. ಪಶ್ಚಿಮ ಘಟ್ಟದ ಎಲ್ಲ 7 ಜಿಲ್ಲೆಗಳ ಶಾಸಕರ ಸಭೆಯನ್ನು ಮಾನ್ಯ ವಿಧಾನ ಸಭಾ ಅಧ್ಯಕ್ಷರು ಏರ್ಪಡಿಸಬೇಕು ಎಂದು ಆಗ್ರಹಿಸಿದರು.

ಕಾನು ಅರಣ್ಯಗಳ ರಕ್ಷಣೆ ಮತ್ತು ಅಭಿವೃದ್ಧಿ ಯೋಜನೆಗಳನ್ನು ಸಮರೋಪಾದಿಯಲ್ಲಿ ರಾಜ್ಯ ಅರಣ್ಯ ಇಲಾಖೆ ಜಾರಿಮಾಡಬೇಕು. ಹುಲಿಕಲ್ ಘಾಟ್‍ನ ಭೂಕುಸಿತ, ಕಾರ್ಮಿಕರ ಸಾವು ಅವೈಜ್ಞಾನಿಕ ರಸ್ತೆ ನಿರ್ಮಾಣ ಕಾಮಗಾರಿಗೆ ಸಾಕ್ಷಿಯಾಗಿದೆ. ಘಟ್ಟದಲ್ಲಿ ರಸ್ತೆ ಅಗಲೀಕರಣ ಅಪಾಯಕಾರಿ ಎಂದು ಭೂಕುಸಿತ ತಜ್ಞರ ಸಮೀತಿ 2021ರಲ್ಲಿ ನೀಡಿದ ವರದಿಯನ್ನು ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಪಶ್ಚಿಮ ಘಟ್ಟ ಉಳಿಸಿ ಸಭೆಯ ನೇತೃತ್ವವನ್ನು ಅನಂತ ಹೆಗಡೆ ಅಶೀಸರ ವಹಿಸಿದ್ದರು. ಶಿವಮೊಗ್ಗಾ ಪರ್ಯಾವರಣ ಸಂಸ್ಥೆ ಮುಖ್ಯಸ್ಥ ಡಾ.ಶ್ರೀಪತಿ, ಸಂಚಾಲಕ ಬಾಲಕೃಷ್ಣ ನಾಯ್ಡು, ಸೊರಬ ಪರಿಸರ ವೇದಿಕೆಯ ಸಂಚಾಲಕ ಶ್ರೀಪಾದ ಬಿಚ್ಚುಗತ್ತಿ, ಬಸ್ತಿಕೊಪ್ಪ ಗ್ರಾಮದ ಮಂಜುನಾಥ, ಚಂದ್ರಗುತ್ತಿಯ ಗಂಗಾಧರ ಗೌಡ, ಬೇದೂರು ಉದಯ, ಮಳಲಗದ್ದೆಯ ಸುಮನಾ, ನಾಗೇಂದ್ರ ಸಾಗರ, ಸಂಚಾಲಕ ಕೆ.ವೆಂಕಟೇಶ ಮತ್ತಿತರರು ಇದ್ದರು.