ರಾಜ್ಯ ಬಿಜೆಪಿಯ ಒಳಬೇಗುದಿ : ಅಮಿತ್ ಶಾ ಭೇಟಿಗೆ ಭಿನ್ನರು ಮತ್ತೆ ದೆಹಲಿಗೆ ಪ್ರಯಾಣ?

| N/A | Published : Mar 10 2025, 12:19 AM IST / Updated: Mar 10 2025, 09:30 AM IST

bjp flag
ರಾಜ್ಯ ಬಿಜೆಪಿಯ ಒಳಬೇಗುದಿ : ಅಮಿತ್ ಶಾ ಭೇಟಿಗೆ ಭಿನ್ನರು ಮತ್ತೆ ದೆಹಲಿಗೆ ಪ್ರಯಾಣ?
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಬಿಜೆಪಿಯ ಒಳಬೇಗುದಿ ಮತ್ತೊಮ್ಮೆ ದೆಹಲಿಗೆ ಶಿಫ್ಟ್ ಆಗುವ ಸಾಧ್ಯತೆ ಇದ್ದು, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ವಿರುದ್ಧ ಬಂಡಾಯದ ಬಾವುಟ ಹಾರಿಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಬಣದ ಮುಖಂಡರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲು ಚಿಂತನೆ ನಡೆಸಿದ್ದಾರೆ.

 ಬೆಂಗಳೂರು : ರಾಜ್ಯ ಬಿಜೆಪಿಯ ಒಳಬೇಗುದಿ ಮತ್ತೊಮ್ಮೆ ದೆಹಲಿಗೆ ಶಿಫ್ಟ್ ಆಗುವ ಸಾಧ್ಯತೆ ಇದ್ದು, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ವಿರುದ್ಧ ಬಂಡಾಯದ ಬಾವುಟ ಹಾರಿಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಬಣದ ಮುಖಂಡರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲು ಚಿಂತನೆ ನಡೆಸಿದ್ದಾರೆ.

ಇದೇ ವಾರದಲ್ಲಿ ಯತ್ನಾಳ್ ಸೇರಿ ಹಲವು ಮುಖಂಡರು ದೆಹಲಿಗೆ ತೆರಳುವ ಸಾಧ್ಯತೆಯಿದೆ ಎಂಬ ಸುದ್ದಿ ಹಬ್ಬಿದೆ. ಆದರೆ, ಇದನ್ನು ಯತ್ನಾಳ ಬಣದ ಮುಖಂಡರು ಖಚಿತಪಡಿಸುತ್ತಿಲ್ಲ.

ಶುಕ್ರವಾರ ಅಮಿತ್ ಶಾ ಅವರು ಖಾಸಗಿ ಕಾರ್ಯಕ್ರಮದ ನಿಮಿತ್ತ ಬೆಂಗಳೂರಿಗೆ ಆಗಮಿಸಿದ್ದರು. ಕಾರ್ಯಕ್ರಮ ಆಯೋಜನೆಗೊಂಡಿದ್ದು ಯತ್ನಾಳ್‌ ಬಣದೊಂದಿಗೆ ಗುರುತಿಸಿಕೊಂಡಿರುವ ಮಾಜಿ ಸಚಿವ ಅರವಿಂದ್ ಲಿಂಬಾವಳಿ ಅವರ ಪತ್ನಿ ಮಂಜುಳಾ ಅವರು ಪ್ರತಿನಿಧಿಸುವ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ. ಸಮಾರಂಭದಲ್ಲಿ ಲಿಂಬಾವಳಿ ಅವರೂ ಉಪಸ್ಥಿತರಿದ್ದರು. ಈ ವೇಳೆ ರಾಜ್ಯ ಬಿಜೆಪಿಯಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಸುಮಾರು ಐದು ಪುಟಗಳ ಲಿಖಿತ ದೂರೊಂದನ್ನು ನೀಡಿದ್ದರು. ಅದನ್ನು ಸ್ವೀಕರಿಸಿದ ಅಮಿತ್ ಶಾ ಅವರು ತಾವು ಹೇಳಿದಾಗ ದೆಹಲಿಗೆ ಬರುವಂತೆ ಸೂಚಿಸಿದ್ದರು.

ಅದರ ಬೆನ್ನಲ್ಲೇ ಈಗ ಯತ್ನಾಳ್‌ ಬಣದ ಮುಖಂಡರು ಅಮಿತ್ ಶಾ ಅವರನ್ನು ಭೇಟಿ ಮಾಡಲು ದೆಹಲಿಗೆ ತೆರಳಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಅಲ್ಲದೆ, ಸಂಸದ ತೇಜಸ್ವಿ ಸೂರ್ಯ ಅವರ ಆರತಕ್ಷತೆ ಕಾರ್ಯಕ್ರಮ ಇದೇ ವಾರ ದೆಹಲಿಯಲ್ಲೂ ನಡೆಯಲಿದ್ದು, ಅದನ್ನೇ ನೆಪವಾಗಿಟ್ಟುಕೊಂಡು ದೆಹಲಿಗೆ ಪ್ರಯಾಣಿಸಲು ಭಿನ್ನರು ಚಿಂತನೆ ನಡೆಸಿದ್ದಾರೆ. ಈ ಬಗ್ಗೆ ಒಂದೆರಡು ದಿನಗಳಲ್ಲಿ ಸ್ಪಷ್ಟತೆ ಹೊರಬೀಳಬಹುದು ಎನ್ನಲಾಗುತ್ತಿದೆ.