ಜಿಲ್ಲಾ ಬಿಜೆಪಿ ಗೊಂದಲ ಬಿವೈವಿ ಬಗೆಹರಿಸ್ತಾರಾ?

| Published : Nov 12 2023, 01:02 AM IST

ಸಾರಾಂಶ

ರಾಜ್ಯ ಬಿಜೆಪಿ ನೂತನ ಸಾರಥಿಗೆ ಹಲವು ಸವಾಲು । ಬಿಎಸ್‌ವೈ ನಿವಾಸಕ್ಕೆ ದಾವಣಗೆರೆ ಬಿಜೆಪಿ ನಾಯಕರ ದಂಡು

ರಾಜ್ಯ ಬಿಜೆಪಿ ನೂತನ ಸಾರಥಿಗೆ ಹಲವು ಸವಾಲು । ಬಿಎಸ್‌ವೈ ನಿವಾಸಕ್ಕೆ ದಾವಣಗೆರೆ ಬಿಜೆಪಿ ನಾಯಕರ ದಂಡು

ನಾಗರಾಜ ಎಸ್.ಬಡದಾಳ್

ಕನ್ನಡಪ್ರಭ ವಾರ್ತೆ ದಾವಣಗೆರೆ

ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲುಂಡ ನಂತರ ದಿಕ್ಕೇ ತೋಚದಂತಾಗಿದ್ದ ಬಿಜೆಪಿ ಪಾಳಯದಲ್ಲಿ ಇದೀಗ ನೂತನ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ನೇಮಕವಾಗುತ್ತಿದ್ದಂತೆಯೇ ಚಟುವಟಿಕೆಗಳು ಗರಿಗೆದರಿವೆ.

ಮನೆಯೊಂದು, ಹಲವು ಬಾಗಿಲು ಎಂಬಂತಾಗಿದ್ದ ದಾವಣಗೆರೆ ಜಿಲ್ಲಾ ಬಿಜೆಪಿಯ ಎಲ್ಲಾ ಗೊಂದಲ, ಸಮಸ್ಯೆ, ವೈಮನಸ್ಸು ಸರಿಪಡಿಸುವ ಶಕ್ತಿ ಇದ್ದರೆ ಅದು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪಗೆ ಮಾತ್ರ. ಈಗ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರಗೆ ಪಕ್ಷದ ಸಾರಥ್ಯ ಸಿಕ್ಕಿದ್ದು, ದಾವಣಗೆರೆಯ ಹಿರಿಯ, ಕಿರಿಯ ಮುಖಂಡರು, ಕಾರ್ಯಕರ್ತರಲ್ಲೂ ಉತ್ಸಾಹ ಹೆಚ್ಚಿಸಿದೆ.

ಉಚ್ಚಾಟಿತರ ಬಗ್ಗೆ ಮೃದುಧೋರಣೆ?

ಚನ್ನಗಿರಿ ಶಾಸಕರಾಗಿದ್ದ ಮಾಡಾಳು ವಿರೂಪಾಕ್ಷಪ್ಪ ಸರ್ಕಾರಿ ಅಧಿಕಾರಿಯಾದ ತಮ್ಮ ಪುತ್ರನ ಮೇಲೆ ಭ್ರಷ್ಟಾಚಾರ ಆರೋಪ ಪ್ರಕರಣದಿಂದ ಮುಜುಗರಕ್ಕೀಡಾದರು. ಅಷ್ಟೇ ಅಲ್ಲ, ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗದಿದ್ದರಿಂದ ಹಿರಿಯ ಪುತ್ರ ಮಾಡಾಳು ಮಲ್ಲಿಕಾರ್ಜುನ ಪಕ್ಷೇತರನಾಗಿ ಸ್ಪರ್ಧಿಸಿ ಪುತ್ರನ ಪರ ಓಡಾಡಿದ್ದರಿಂದ ಪಕ್ಷದಿಂದ ವಿರೂಪಾಕ್ಷಪ್ಪ, ಮಲ್ಲಿಕಾರ್ಜುನರನ್ನು ಬಿಜೆಪಿ ಶಿಸ್ತು ಸಮಿತಿ ಉಚ್ಚಾಟಿಸಿತ್ತು. ಅದೇ ರೀತಿ ಜಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಪರ ಕೆಲಸ ಮಾಡಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಟಿ.ಗುರುಸಿದ್ದನಗೌಡ, ಪುತ್ರ ಡಾ.ಟಿ.ಜಿ.ರವಿಕುಮಾರ ಮತ್ತು ಸಹೋದರರ ವಜಾ ಮಾಡಿತ್ತು.

ಇದು ಉಚ್ಚಾಟನೆಗೊಂಡವರ ಕಥೆಯಾದರೆ, ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ಮಾಜಿ ಸಚಿವ ಹೊನ್ನಾಳಿಯ ಎಂ.ಪಿ.ರೇಣುಕಾಚಾರ್ಯ ಕಾಂಗ್ರೆಸ್ಸಿನ ಸಿಎಂ, ಡಿಸಿಎಂ, ಸಚಿವ ಭೇಟಿ ಮಾಡಿ, ಅಚ್ಚರಿ ಹುಟ್ಟು ಹಾಕಿದ್ದರು. ಅಷ್ಟೇ ಅಲ್ಲ, ತಾವು ಬಿಜೆಪಿ ಬಿಟ್ಟಿಲ್ಲ, ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಆಕಾಂಕ್ಷಿಯೆಂದು ಸಾರಿದ್ದಾರೆ.

ಮಾಯಕೊಂಡ ಮಾಜಿ ಶಾಸಕ ಪ್ರೊ.ಎನ್.ಲಿಂಗಣ್ಣ ಆರೋಗ್ಯದ ಕಾರಣಕ್ಕಾಗಿ ಟಿಕೆಟ್ ತಪ್ಪಿಸಿಕೊಂಡವರು. ದಾವಣಗೆರೆ ಉತ್ತರ-ದಕ್ಷಿಣದಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡಿ, ಬಿಜೆಪಿ ಕೈ ಸುಟ್ಟುಕೊಂಡಿತು. ಸದ್ಯಕ್ಕೆ ಹಳೆ ಬೇರು, ಹೊಸ ಚಿಗುರು ಎಂಬಂತೆ ಬಿಜೆಪಿಯನ್ನು ರಾಜ್ಯದಲ್ಲಷ್ಟೇ ಅಲ್ಲ, ಕೇಂದ್ರ ಕರ್ನಾಟಕದಲ್ಲೂ ಗಟ್ಟಿಗೊಳಿಸುವ ಹೊಣೆ ವಿಜಯೇಂದ್ರ ಹೆಗಲ ಮೇಲಿದೆ.

................

ಜಿಲ್ಲಾ ಬಿಜೆಪಿ ವಿಚಾರದಲ್ಲಿ ವಿಜಯೇಂದ್ರ ನಡೆ ಏನು?

ದಾವಣಗೆರೆ ಮಟ್ಟಿಗೆ ಹೇಳಬೇಕೆಂದರೆ ಉಚ್ಚಾಟಿತ ಮಾಜಿ ಶಾಸಕರು, ಪುತ್ರರ ವಿಚಾರದಲ್ಲಿ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಏನು ಕ್ರಮ ಕೈಗೊಳ್ಳುತ್ತಾರೆಂಬ ಕುತೂಹಲ ಸಹಜ ಹುಟ್ಟಿಕೊಂಡಿದೆ. ಅಷ್ಟಕ್ಕೂ ಉಚ್ಚಾಟಿತರ ಪೈಕಿ ಗುರುಸಿದ್ದನಗೌಡರು ಯಡಿಯೂರಪ್ಪ ಸಮಕಾಲೀನರು. ಮಾಡಾಳು ವಿರೂಪಾಕ್ಷಪ್ಪ ಬಿಎಸ್‌ವೈ ಆಪ್ತ ಬಳಗದಲ್ಲಿ ಗುರುತಿಸಿಕೊಂಡು ಬಂದವರು. ವಿಜಯೇಂದ್ರ ಮಾಡಬಹುದಾದ ಮೊದಲ ಕೆಲಸವೆಂದರೆ ಮನೆಯೊಂದು, ಹಲವು ಬಾಗಿಲಾದ ಎಲ್ಲಾ ಮುಖಂಡರು, ಹಿರಿಯರು, ಯುವ ನಾಯಕರನ್ನು ಒಂದು ಕಡೆ ಸೇರಿಸುವ ಕೆಲಸ ಮಾಡುವುದು ನಿಶ್ಚಿತ. ಅಲ್ಲದೇ, ಸ್ವತಃ ಯಡಿಯೂರಪ್ಪ ಈಚೆಗೆ ದಾವಣಗೆರೆ ಸಮಾರಂಭವೊಂದರಲ್ಲಿ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಸಿದ್ದೇಶ್ವರಗೆ ಗೆಲ್ಲಿಸಿ ಎಂಬ ಕರೆ ನೀಡಿದ್ದು ಗಮನಿಸಿದರೆ ಸಂಸದ ಸಿದ್ದೇಶ್ವರಗೆ ಮತ್ತೆ ಅವಕಾಶದ ಬಾಗಿಲು ತೆರೆಯುವುದು ಸ್ಪಷ್ಟ.ಯಾರಿಗೆ ಲೋಕಸಭಾ ಟಿಕೆಟ್ ?

ನಾಲ್ಕು ಬಾರಿ ಗೆದ್ದ ಡಾ.ಜಿ.ಎಂ.ಸಿದ್ದೇಶ್ವರ್‌ ಗೆ ಟಿಕೆಟ್ ಸಿಗುತ್ತದಾ ಅಥವಾ ರೇಣುಕಾಚಾರ್ಯ, ಡಾ.ಟಿ.ಜಿ.ರವಿಕುಮಾರ ಅಥವಾ ಹೊಸ ಮುಖ ಕಣಕ್ಕಿಳಿಸುತ್ತಾರಾ ನೋಡಬೇಕಿದೆ. ವಿಜಯೇಂದ್ರಗೆ ಪಕ್ಷದ ನಾಯಕತ್ವ ಸಿಕ್ಕಿದ್ದರಿಂದ ಸಿದ್ದೇಶ್ವರ ಹಾದಿ ಸುಗಮವಾಗಿರುವುದು ಸ್ಪಷ್ಟ. ಉಳಿದವರ ಅತೃಪ್ತಿ ಶಮನ ಮಾಡುವುದಾಗಲೀ, ಉಚ್ಚಾಟಿತರಿಗೆ ತಿಳಿ ಹೇಳಿ, ವಾಪಸ್‌ ಪಕ್ಷಕ್ಕೆ ಕರೆಸಿಕೊಳ್ಳುವುದು ಯಡಿಯೂರಪ್ಪ, ವಿಜಯೇಂದ್ರಗೆ ದೊಡ್ಡದಲ್ಲ. ಅದರಲ್ಲೂ ಯುವ ಕಾರ್ಯಕರ್ತರ ಸಂಭ್ರಮಕ್ಕೆ ಸಾಟಿ ಇಲ್ಲದಂತಾಗಿದೆ.