ಹೊಸಪೇಟೆಗೆ ಸಕ್ಕರೆ ಕಾರ್ಖಾನೆ ಕೊಡ್ತಾರಾ ಸಿಎಂ ಸಿದ್ದರಾಮಯ್ಯ?

| Published : Jun 20 2024, 01:01 AM IST

ಹೊಸಪೇಟೆಗೆ ಸಕ್ಕರೆ ಕಾರ್ಖಾನೆ ಕೊಡ್ತಾರಾ ಸಿಎಂ ಸಿದ್ದರಾಮಯ್ಯ?
Share this Article
  • FB
  • TW
  • Linkdin
  • Email

ಸಾರಾಂಶ

ಸಿಎಂ ಸಿದ್ದರಾಮಯ್ಯ ಜೂ.೨೧ರಂದು ಕೆಡಿಪಿ ಸಭೆ ನಡೆಸಲು ವಿಜಯನಗರ ಜಿಲ್ಲೆಗೆ ಆಗಮಿಸುತ್ತಿದ್ದಾರೆ.

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ: ಹೊಸಪೇಟೆಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡಲಾಗುವುದು ಎಂದು ವಿಧಾನಸಭೆ ಚುನಾವಣೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಈಗ ಆ ಭರವಸೆಯನ್ನು ಸಿಎಂ ಈಡೇರಿಸುವರೇ ಎಂದು ಹೊಸಪೇಟೆ, ಕಮಲಾಪುರ ಭಾಗದ ರೈತರು ಎದುರು

ನೋಡುತ್ತಿದ್ದಾರೆ.ಸಿಎಂ ಸಿದ್ದರಾಮಯ್ಯ ಜೂ.೨೧ರಂದು ಕೆಡಿಪಿ ಸಭೆ ನಡೆಸಲು ವಿಜಯನಗರ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಹಾಗಾಗಿ ರೈತರು ತಮ್ಮ ಪ್ರಮುಖ ಬೇಡಿಕೆ ಈಡೇರಿಸುವರೇ ಎಂದು ಮುಖ್ಯಮಂತ್ರಿಯತ್ತ ಆಶಯದೊಂದಿಗೆ ನೋಡುತ್ತಿದ್ದಾರೆ. ಹೊಸಪೇಟೆ ತಾಲೂಕಿನ ನಾಗೇನಹಳ್ಳಿ ಗ್ರಾಪಂ ವ್ಯಾಪ್ತಿಯ ಬೆನಕಾಪುರ, ಕಾಳಘಟ್ಟ ಪ್ರದೇಶದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ 77 ಎಕರೆ ಜಾಗ ಗುರುತಿಸಲಾಗಿದೆ. ಹಿಂದಿನ ಸರ್ಕಾರ ಹಂಪಿ ಶುಗರ್ಸ್‌ ಕಾರ್ಖಾನೆ ಸ್ಥಾಪನೆಗೆ ಮುಂದಾಗಿತ್ತು. ಜಾಗದ ವಿವಾದದಿಂದ ಕಾರ್ಖಾನೆ ಭೂಮಿಪೂಜೆ ನೆರವೇರಿಲ್ಲ. ಈಗ ಹೊಸ ಜಾಗ ಗುರುತಿಸಲಾಗಿದ್ದು, ಯಾರು ಕಾರ್ಖಾನೆ ಸ್ಥಾಪನೆ ಮಾಡಲಿದ್ದಾರೆ ಎಂಬುದು ಇನ್ನು ನಿರ್ಧಾರವಾಗಿಲ್ಲ. ಕೆಡಿಪಿ ಸಭೆಗೆ ಸ್ವತಃ ಸಿಎಂ ಆಗಮಿಸುತ್ತಿರುವುದರಿಂದ ಈ ಭಾಗದ ರೈತರ ಪ್ರಮುಖ ಬೇಡಿಕೆಯಾದ ಸಕ್ಕರೆ ಕಾರ್ಖಾನೆ ಸ್ಥಾಪನೆ ವಿಚಾರ ಮುನ್ನೆಲೆಗೆ ಬಂದಿದೆ.

4 ಲಕ್ಷಕ್ಕೂ ಅಧಿಕ ಟನ್‌ ಕಬ್ಬು ಉತ್ಪಾದನೆ:

ಹೊಸಪೇಟೆಯ ಚಿತ್ತವಾಡ್ಗಿ ಭಾಗದಲ್ಲಿ ಈ ಹಿಂದಿನಿಂದಲೂ ಐಎಸ್‌ಆರ್‌ ಸಕ್ಕರೆ ಸ್ಥಾಪನೆ ಮಾಡಲಾಗಿತ್ತು. ಈ ಕಾರ್ಖಾನೆ ಸಂಕಷ್ಟದಲ್ಲಿದ್ದಾಗ ಈ ಹಿಂದೆ ರೈತರು ಸಹಾಯ ಮಾಡಿದ್ದರು. ಆದರೆ, ಕಾರ್ಖಾನೆ 2014-15ನೇ ಸಾಲಿನಲ್ಲಿ ಸ್ಥಗಿತಗೊಂಡಿತು. ಆಗಿನಿಂದಲೂ ರೈತರು ಬೆಳೆದ ಕಬ್ಬು ಬೆಳೆಗೆ ಉತ್ತಮ ಬೆಲೆ ದೊರೆಯದೇ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಈ ಭಾಗದಲ್ಲಿ 4ಲಕ್ಷಕ್ಕೂ ಅಧಿಕ ಟನ್‌ ಕಬ್ಬು ಬೆಳೆಯಲಾಗುತ್ತದೆ. ಹೊರ ಜಿಲ್ಲೆಯ ಕಾರ್ಖಾನೆಗಳಿಗೆ ಕಬ್ಬು ಸಾಗಿಸುವಂತಾಗಿದೆ. ಈಗ ಸಿಎಂ ಕಬ್ಬು ಬೆಳೆಯುವ ರೈತರಿಗೆ ಆಸರೆಯಾಗಲಿ. ಈ ಕುರಿತು ಶೀಘ್ರವೇ ನಿರ್ಧಾರ ತೆಗೆದುಕೊಳ್ಳಲಿ ಎಂದು ಒತ್ತಾಯಿಸುತ್ತಾರೆ ರೈತ ಹನುಮಂತಪ್ಪ.

ಈ ಹಿಂದಿನ ಸರ್ಕಾರದಲ್ಲಿ ಮಾಜಿ ಸಚಿವ ಆನಂದ ಸಿಂಗ್‌ ಜಂಬುನಾಥನಹಳ್ಳಿ ಪ್ರದೇಶದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಗಾಗಿ ಹಂಪಿ ಶುಗರ್ಸ್‌ಗೆ 81.86 ಎಕರೆ ಭೂಮಿ ಮಂಜೂರು ಮಾಡಿಸಿದ್ದರು. ಈ ಜಾಗವನ್ನು ಬಡವರಿಗೆ ಮನೆ ನಿರ್ಮಿಸಲು ಮೀಸಲಿಡುವ ಉದ್ದೇಶದಿಂದ ನಾಗೇನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಸರ್ಕಾರಿ ಜಾಗ ಗುರುತಿಸಲಾಗಿದೆ. ಆದರೆ, ಈವರೆಗೆ ಕಾರ್ಖಾನೆ ಸ್ಥಾಪನೆ ಕುರಿತು ಯಾವುದೇ ಬೆಳವಣಿಗೆ ಆಗಿಲ್ಲ. ಈ ನಡುವೆ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಹಂಪಿ ಶುಗರ್ಸ್‌ಗೆ ಸರ್ಕಾರ ನೀಡಿದ ಭೂಮಿ ಪಡೆಯಲು ಕಾನೂನು ಹೋರಾಟ ನಡೆಸಲಾಗುವುದು ಎಂದು ಹೇಳಿದ್ದಾರೆ. ಈ ಹಿಂದಿನ ಐಎಸ್‌ಆರ್‌ ಸಕ್ಕರೆ ಕಾರ್ಖಾನೆ ಮುಚ್ಚಿದ ಬಳಿಕ ಈ ಭಾಗದಲ್ಲಿ ಪ್ರತ್ಯಕ್ಷ, ಪರೋಕ್ಷವಾಗಿ ಉದ್ಯೋಗಕ್ಕೂ ಪೆಟ್ಟು ಬಿದ್ದಿದೆ. ಸಕ್ಕರೆ ಕಾರ್ಖಾನೆ ಸ್ಥಾಪನೆ ಬಗ್ಗೆ ಮಾಜಿ ಸಚಿವ ಆನಂದ ಸಿಂಗ್, ಹಾಲಿ ಶಾಸಕ ಎಚ್‌.ಆರ್‌. ಗವಿಯಪ್ಪ ನಡುವೆ ಪ್ರತಿಷ್ಠೆಯ ವಿಷಯವಾಗಿಯೂ ಈ ಹಿಂದೆ ಆರೋಪ, ಪ್ರತ್ಯಾರೋಪಕ್ಕೂ ಕಾರಣವಾಗಿತ್ತು. ಆದರೆ, ಸಕ್ಕರೆ ಕಾರ್ಖಾನೆ ಸ್ಥಾಪನೆ ವಿಷಯ ರಾಜಕೀಯ ವಿಷಯ ಆಗದೇ ಆದಷ್ಟು ಬೇಗ ಕಾರ್ಖಾನೆ ಸ್ಥಾಪನೆಯಾಗಿ ನಾವು ಎದುರಿಸುತ್ತಿರುವ ಸಂಕಷ್ಟ ದೂರಾಗಲಿ ಎಂಬುದು ರೈತರ ಒತ್ತಾಯ ಆಗಿದೆ.

ಹೊಸಪೇಟೆ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡಿದರೆ ರೈತರು, ಕಬ್ಬು ಕಟಾವು ಮಾಡುವ ಕೂಲಿ ಕಾರ್ಮಿಕರಿಗೂ ಅನುಕೂಲ ಆಗಲಿದೆ. ಈಗ ರೈತರು ಕಡಿಮೆ ಬೆಲೆಗೆ ಹೊರ ಜಿಲ್ಲೆಯ ಕಾರ್ಖಾನೆಗಳಿಗೆ ಕಬ್ಬು ಸಾಗಿಸುವಂತಾಗಿದೆ. ಜಿಲ್ಲೆಗೆ ಆಗಮಿಸುತ್ತಿರುವ ಸಿಎಂ ರೈತರಿಗೆ ಸಿಹಿ ಸುದ್ದಿ ನೀಡಲಿ ಎನ್ನುತ್ತಾರೆ ಹೊಸಪೇಟೆ ರೈತರ ಸಂಘದ ಅಧ್ಯಕ್ಷ ಕಟಗಿ ಜಂಬಯ್ಯ ನಾಯಕ.