ಹಾಲಿನ ಟ್ಯಾಂಕರ್‌ಗಳ ಮೂಲಕ ಕುಡಿವ ನೀರು ಪೂರೈಕೆ: ಡಿಕೆಶಿ

| Published : Mar 05 2024, 01:37 AM IST / Updated: Mar 05 2024, 10:37 AM IST

ಸಾರಾಂಶ

ನಗರದ ವಿವಿಧ ಭಾಗಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿರುವ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಅಧಿಕಾರಿಗಳ ಜೊತೆ ಸಭೆ ನಡೆಸಿ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ವಿವಿಧ ಭಾಗಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿರುವ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಅಧಿಕಾರಿಗಳ ಜೊತೆ ಸಭೆ ನಡೆಸಿ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.

ಬಿಬಿಎಂಪಿ ಹಾಗೂ ಜಲಮಂಡಳಿ ಅಧಿಕಾರಿಗಳು ಎರಡು-ಮೂರು ಬಾರಿ ಸಭೆ ನಡೆಸಿದರೂ ಪರಿಹಾರ ದೊರಕದ ಹಿನ್ನೆಲೆಯಲ್ಲಿ ಖುದ್ದು ಡಿ.ಕೆ.ಶಿವಕುಮಾರ್‌ ಸೋಮವಾರ ಸಭೆ ನಡೆಸಿ ಪ್ರಮುಖ ಸೂಚನೆಗಳನ್ನು ನೀಡಿದರು.

ನಗರದಲ್ಲಿರುವ ಖಾಸಗಿ ಟ್ಯಾಂಕರ್‌ಗಳ ಮಾಲಿಕರು ಮಾ.7ರೊಳಗೆ ನೋಂದಣಿ ಮಾಡಿಕೊಳ್ಳದಿದ್ದರೆ ಅಂತಹ ಟ್ಯಾಂಕರ್‌ಗಳನ್ನು ವಶಕ್ಕೆ ಪಡೆದುಕೊಂಡು ಅವುಗಳ ಮೂಲಕ ನೀರು ಪೂರೈಸಬೇಕು.

 ನಿರುಪಯುಕ್ತ ಹಾಲಿನ ಟ್ಯಾಂಕರ್‌ಗಳನ್ನು ನೀರು ಪೂರೈಕೆಗೆ ಬಳಸಬೇಕು. ಅಗತ್ಯಬಿದ್ದರೆ ನಗರದ ಹೊರ ಭಾಗದಲ್ಲಿರುವ ಕೃಷಿ ಕೊಳವೆ ಬಾವಿಗಳನ್ನು ವಶಕ್ಕೆ ಪಡೆದು ನಗರಕ್ಕೆ ನೀರು ಪೂರೈಸಬೇಕು ಎಂದು ಸೂಚನೆ ನೀಡಿದರು.

ನೀರು ಪೂರೈಕೆ ನಮ್ಮ ಕರ್ತವ್ಯ: ಪ್ರತಿಯೊಬ್ಬರಿಗೂ ನೀರು ನೀಡುವುದು ನಮ್ಮ ಕರ್ತವ್ಯವಾಗಿದೆ. ನಾಗರಿಕರು ಅನಗತ್ಯವಾಗಿ ನೀರು ಪೋಲು ಮಾಡಬಾರದು. ಬೀಕರ ಬರಗಾಲದಲ್ಲಿ ನೀರಿನ ಮಿತ ಬಳಕೆ ಮಾಡಬೇಕು.- ಡಿ.ಕೆ.ಶಿವಕುಮಾರ್‌ ಉಪಮುಖ್ಯಮಂತ್ರಿ

ಟ್ಯಾಂಕರ್‌ಗಳಿಗೆ ಕಿಮೀ ಆಧಾರದಲ್ಲಿ ದರ ನಿಗದಿ?
ಟ್ಯಾಂಕರ್ ನೀರು ಪೂರೈಕೆಗೆ ₹500 ರಿಂದ ₹2 ಸಾವಿರ, ₹3 ಸಾವಿರದ ವರೆಗೂ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ಅಸೋಸಿಯೇಷನ್ ಬಳಿ ಮಾತನಾಡಿ ನೀರಿನ ದರವನ್ನು ಕಿ.ಮೀ. ಆಧಾರದಲ್ಲಿ ನಿಗದಿ ಪಡಿಸಲಾಗುವುದು ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಬೆಂಗಳೂರಿನಲ್ಲಿ 6,997 ಕೊಳವೆಬಾವಿ ಬರಿದು!
ಬೆಂಗಳೂರಿನಲ್ಲಿ 16,781 ಕೊಳವೆ ಬಾವಿಗಳಿದ್ದು, ಈ ಪೈಕಿ 6,997 ಕೊಳವೆ ಬಾವಿಗಳು ಬತ್ತಿ ಹೋಗಿವೆ. 7,784 ಕೊಳವೆ ಬಾವಿಗಳು ಚಾಲ್ತಿಯಲ್ಲಿವೆ. ಹೊಸ ಕೊಳವೆ ಬಾವಿ ಕೊರೆಸಲು ಇರುವ ಗೊಂದಲ ಶೀಘ್ರ ಬಗೆಹರಿಸಲಾಗುವುದು ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು. 

ಕುಡಿವ ನೀರು ಕಾರು ತೊಳೆಯಲು ಬಳಸುವಂತಿಲ್ಲ: ಕಾರು ತೊಳೆಯಲು, ತೋಟಗಾರಿಕೆ, ಫ್ಲಶ್‌ ಮಾಡಲು, ಪಾರ್ಕಿಂಗ್‌ ಪ್ರದೇಶ ಸ್ವಚ್ಛಗೊಳಿಸಲು ಕುಡಿಯುವ ನೀರು ಬಳಸದಂತೆ ಆದೇಶ ಜಾರಿಗೊಳಿಸಲು ಜಲಮಂಡಳಿ ಮುಂದಾಗಿದೆ. ಇದಕ್ಕಾಗಿ ‘ನೀರು ಉಳಿಸಿ ಬೆಂಗಳೂರು ಉಳಿಸಿ’ ಅಭಿಯಾನ ಕೈಗೊಂಡಿದೆ.