ಪುತ್ರನಿಗೆ ಟಿಕೆಟ್‌ ಸಿಕ್ಕಿದ್ರೆ ಈಶ್ವರಪ್ಪ ಬಂಡಾಯ ಏಳ್ತಿದ್ರಾ?: ಆರ್.ಕೆ.ಸಿದ್ರಾಮಣ್ಣ

| Published : Mar 24 2024, 01:37 AM IST

ಪುತ್ರನಿಗೆ ಟಿಕೆಟ್‌ ಸಿಕ್ಕಿದ್ರೆ ಈಶ್ವರಪ್ಪ ಬಂಡಾಯ ಏಳ್ತಿದ್ರಾ?: ಆರ್.ಕೆ.ಸಿದ್ರಾಮಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ರಾಜಕಾರಣ ಎಂದರೆ ಅದೊಂದು ರೀತಿಯ ಯುದ್ಧ. ಆಕಸ್ಮಾತ್ ಕಾಂತೇಶ್‌ಗೆ ಟಿಕೆಟ್‌ ಕೊಟ್ಟಿದ್ದರೆ ನಾವು ಕೂಡ ಸಂತೋಷ ಪಡುತ್ತಿದ್ದೆವು. ಜಿಲ್ಲೆಯ ಕುಸ್ತಿಪಟು ಒಬ್ಬ ಬೇರೆ ಜಿಲ್ಲೆಗೆ ಹೋಗಿ ಗೆದ್ದು ಬಂದರೆ ಸಂಭ್ರಮಿಸಿದ ಹಾಗೆ ಕಾಂತೇಶ್ ಕೂಡ ಹಾವೇರಿ ಜಾತ್ರೆಯಲ್ಲಿ ಕುಸ್ತಿ ಗೆದ್ದು ಬಂದಂತೆ ಆಗುತ್ತಿತ್ತು. ಆದರೆ, ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಬೇಕು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಪುತ್ರ ಕೆ.ಇ.ಕಾಂತೇಶ್‌ಗೆ ಹಾವೇರಿಯಲ್ಲಿ ಟಿಕೆಟ್‌ ಸಿಕ್ಕಿದ್ದರೆ ಕೆ.ಎಸ್. ಈಶ್ವರಪ್ಪ ಬಂಡಾಯ ಏಳುತ್ತಿದ್ದರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಕೆ.ಸಿದ್ರಾಮಣ್ಣ ಪ್ರಶ್ನೆ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ರಾಜಕಾರಣದ ಶುದ್ಧೀಕರಣದ ಮಾತು ಎಲ್ಲಾ ಕಾಲಕ್ಕೂ ಇರುತ್ತದೆ. ಆದರೆ, ಕೇವಲ ಟಿಕೆಟ್‌ ಸಿಗಲಿಲ್ಲ ಎಂಬ ಕಾರಣಕ್ಕೆ ಈಗ ಶುದ್ಧೀಕರಣದ ಮಾತು ಆಡುತ್ತಿದ್ದಾರೆ. ರಾಜಕಾರಣ ಎಂದರೆ ಅದೊಂದು ರೀತಿಯ ಯುದ್ಧ. ಆಕಸ್ಮಾತ್ ಕಾಂತೇಶ್‌ಗೆ ಟಿಕೆಟ್‌ ಕೊಟ್ಟಿದ್ದರೆ ನಾವು ಕೂಡ ಸಂತೋಷ ಪಡುತ್ತಿದ್ದೆವು. ಜಿಲ್ಲೆಯ ಕುಸ್ತಿಪಟು ಒಬ್ಬ ಬೇರೆ ಜಿಲ್ಲೆಗೆ ಹೋಗಿ ಗೆದ್ದು ಬಂದರೆ ಸಂಭ್ರಮಿಸಿದ ಹಾಗೆ ಕಾಂತೇಶ್ ಕೂಡ ಹಾವೇರಿ ಜಾತ್ರೆಯಲ್ಲಿ ಕುಸ್ತಿ ಗೆದ್ದು ಬಂದಂತೆ ಆಗುತ್ತಿತ್ತು. ಆದರೆ, ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಬೇಕು ಎಂದರು.

ಕ್ಷೇತ್ರದ ಅಭಿವೃದ್ಧಿಗೆ ಕೋಟಿಗಟ್ಟಲೇ ಅನುದಾನ:

ಸಂಸದರ ಅಭಿವೃದ್ಧಿ ಕೆಲಸ ಕಣ್ಣಿಗೆ ಕಾಣುತ್ತಿದೆ. ಅವರು ಏನು ಮಾಡಿದ್ದಾರೆ ಎಂದು ಹೇಳಲು ಅನೇಕ ದಿನಗಳು ಬೇಕಾಗುತ್ತದೆ. ಶರಾವತಿ ಹಿನ್ನೀರು ಪ್ರದೇಶದ ಸಂಪರ್ಕ ಸೇತುವೆ ಆಗುತ್ತಿದ್ದು, ಆ ಭಾಗದ ಜನರಿಗೆ ಕೊಲ್ಲೂರು ಮತ್ತು ಸಾಗರ ಭಾಗದ ಸಂಪರ್ಕದ ಕೊಂಡಿಯಾಗಿದೆ. ವಿಮಾನ ನಿಲ್ದಾಣ ಆಗಿದೆ. ಪ್ರವಾಸೋದ್ಯಮಕ್ಕೆ ಒತ್ತು ನೀಡಿ ಹಲವು ಕೋಟಿಗಳ ಅನುದಾನ ತರಲಾಗಿದೆ. ರೈಲ್ವೆ, ಹೆದ್ದಾರಿಗೆ ಸಾವಿರಾರು ಕೋಟಿ ರು.ಗಳ ಸಂಸದರು ತಂದಿದ್ದು, ದೇಶದಲ್ಲೇ ಅಭಿವೃದ್ಧಿ ಮಾಡಿದ ಸಂಸದರಲ್ಲಿ ಬಿ.ವೈ.ರಾಘವೇಂದ್ರ ಮೊದಲ ಸ್ಥಾನದಲ್ಲಿದ್ದಾರೆ. ಕೇಂದ್ರ ಸರ್ಕಾರವು ಭ್ರಷ್ಟಚಾರ ರಹಿತ ಆಡಳಿತ ನೀಡಿದೆ. ಇಡೀ ಪ್ರಪಂಚವನ್ನೇ ನನ್ನ ಪರಿವಾರ ಎಂದು ಭಾವಿಸಿ ಭಾರತದ ಬಗ್ಗೆ ಹೆಮ್ಮೆ ಪಡುವ ರೀತಿಯಲ್ಲಿ ವಿಶ್ವನಾಯಕನಾಗಿ ಪ್ರಧಾನಿಯವರು ಗುರುತಿಸಿಕೊಂಡು ದೇಶದ ಘನತೆ ಹೆಚ್ಚಿಸಿದ್ದಾರೆ ಎಂದರು.

ಪ್ರಧಾನಿ ಮೋದಿ ಮತ್ತು ಸಂಸದ ಬಿ.ವೈ.ರಾಘವೇಂದ್ರ ಅವರ ಸಾಧನೆಗಳ ಕಾಂಗ್ರೆಸ್‌ನವರು ತೆರೆದ ಕಣ್ಣಿನಿಂದ ನೋಡಬೇಕು ಎಂದು ಕಾಂಗ್ರೆಸ್ಸಿನ ಟೀಕೆಗೆ ತಿರುಗೇಟು ನೀಡಿದ ಸಿದ್ರಾಮಣ್ಣ, ಮೋದಿಯವರ 10 ವರ್ಷದ ಸಾಧನೆಯ ಕಾಂಗ್ರೆಸ್ ನಾಯಕರು ಅಭಿವೃದ್ಧಿಯ ಅಂಕಿ ಅಂಶಗಳ ತಿಳಿದು ಮಾತನಾಡಲಿ ಎಂದರು. ಪತ್ರಿಕಾಗೋಷ್ಠಿಯಲ್ಲಿ ಅಣ್ಣಪ್ಪ, ಚಂದ್ರಶೇಖರ್ ಉಪಸ್ಥಿತರಿದ್ದರು.ಖಾಸಗಿ ವಲಯದಲ್ಲಿ ಉದ್ಯೋಗ ಸೃಷ್ಟಿ

ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಹೇಳಿರುವುದು ನಿಜ. ಹಾಗಂತ ಸರ್ಕಾರಿ ಉದ್ಯೋಗ ನೀಡುತ್ತೇವೆಂದು ಎಲ್ಲೂ ಹೇಳಿಲ್ಲ. ಖಾಸಗಿ ಕ್ಷೇತ್ರಕ್ಕೆ ಹೂಡಿಕೆ ಮಾಡುವ ಮೂಲಕ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಹೇಳಿದ್ದೇವು. ಆದರಂತೆ ಖಾಸಗಿ ವಲಯದಲ್ಲಿ ಉದ್ಯೋಗ ನೀಡಲಾಗುತ್ತಿದೆ ಎಂದು ಕಾಂಗ್ರೆಸ್‌ನ ಆರೋಪಕ್ಕೆ ಆರ್.ಕೆ.ಸಿದ್ರಾಮಣ್ಣ ತಿರುಗೇಟು ನೀಡಿದರು.