ನೆಲಮಂಗಲವನ್ನು ಮಾದರಿ ಕ್ಷೇತ್ರವನ್ನಾಗಿಸುವೆ: ಶಾಸಕ ಎನ್.ಶ್ರೀನಿವಾಸ್ ಭರವಸೆ

| Published : Jan 10 2025, 12:47 AM IST

ಸಾರಾಂಶ

ಬಸ್ ನಿಲ್ದಾಣಗಳ ಕಾಮಗಾರಿ ಮಾಡಲು ಕಾಂಗ್ರೆಸ್ ಶಾಸಕನೇ ಬರಬೇಕಾಯಿತು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಐದು ವರ್ಷ ಆಡಳಿತದಲ್ಲಿತ್ತು, ಆಗ ಯಾಕೆ ಬಿಜೆಪಿ ಮುಖಂಡರು ಬಸ್ ನಿಲ್ದಾಣಗಳನ್ನು ನಿರ್ಮಿಸುವ ಬಗ್ಗೆ ಮಾತನಾಡಲಿಲ್ಲ ಎಂದು ಈ ವೇಳೆ ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ

ಸೋಂಪುರ ಹೋಬಳಿಯ ಲಕ್ಕೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶಾಸಕರ ನಡೆ ಹಳ್ಳಿಯ ಕಡೆ ಎಂಬ ಕಾರ್ಯಕ್ರಮದಲ್ಲಿ ಶಾಸಕ ಎನ್.ಶ್ರೀನಿವಾಸ್ ಸಾರ್ವಜನಿಕರಿಂದ ಕುಂದುಕೊರತೆ ಹಾಗೂ ಅಹವಾಲುಗಳನ್ನು ಸ್ವೀಕರಿಸಿದರು.

ನಿವೇಶನ ನೀಡಿ ಮನೆ ಮಂಜೂರು ಮಾಡಿ:

ಲಕ್ಕೂರು, ಲಕ್ಕೂರು ತೋಟ, ಸುಗ್ಗಯ್ಯನಪಾಳ್ಯದ ಜನರು ನಿವೇಶನ ನೀಡಿ ಮನೆ ಮಂಜೂರು ಮಾಡಿ ಕೊಡುವಂತೆ ಮನವಿ ಮಾಡಿದಾಗ ಸ್ಪಂದಿಸಿದ ಶಾಸಕರು, ಪ್ರತಿ ಗ್ರಾಪಂ ವತಿಯಿಂದ 100 ಮನೆಗಳನ್ನು ಮಂಜೂರು ಮಾಡಲಿದ್ದು, ಯಾರಿಗೆ ಮನೆ ಇಲ್ಲವೋ ಅಂತಹ ಫಲಾನುಭವಿಗಳನ್ನು ಗುರುತಿಸಿ ಮನೆ ನೀಡುತ್ತೇವೆ. ಸರ್ಕಾರಿ ಗೋಮಾಳ ಜಾಗವಿದ್ದರೆ ಅಂತಹ ಜಾಗವನ್ನು ಗುರುತಿಸಿ ಅಲ್ಲಿ ನಿವೇಶನ ನಿರ್ಮಿಸಲು ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ ಎಂದರು.

ರಸ್ತೆ ನಿರ್ಮಿಸಿ:

ಲಕ್ಕೂರು ಗ್ರಾಮದಿಂದ ಸುಗ್ಗಯ್ಯನಪಾಳ್ಯಕ್ಕೆ ಹೋಗುವ ರಸ್ತೆಗೆ ಕಾಂಕ್ರೀಟ್ ಹಾಗೂ ಡಾಂಬರೀಕರಣ ಮಾಡುವಂತೆ ಗ್ರಾಪಂ ಮಾಜಿ ಅಧ್ಯಕ್ಷೆ ಜಯಲಕ್ಷ್ಮಮ್ಮ, ಶಾಸಕರ ಗಮನಕ್ಕೆ ತಂದಾಗ, ಯೋಜನೆಗೆ ಅಂದಾಜು 4 ರಿಂದ 5 ಕೋಟಿ ರು. ಅನುದಾನ ಬೇಕಾಗುತ್ತದೆ. ಸದ್ಯದಲ್ಲೇ ಅಂದಾಜು ಯೋಜನಾ ಪಟ್ಟಿಯನ್ನು ತಯಾರಿಸಿ ಸಂಬಂಧಪಟ್ಟ ಸಚಿವರ ಜೊತೆ ಮಾತನಾಡಿ ಅನುದಾನ ಬಿಡುಗಡೆಗೊಳಿಸಿ ರಸ್ತೆ ನಿರ್ಮಿಸಿ ಕೊಡುವ ಜವಾಬ್ದಾರಿ ನನ್ನದು ಎಂದು ಭರವಸೆ ನೀಡಿದರು.

ಮಾದರಿ ಕ್ಷೇತ್ರ ಮಾಡುವ ಗುರಿ:

ಅಹವಾಲು ಸ್ವೀಕರಿಸಿ ನಂತರ ಶಾಸಕ ಶ್ರೀನಿವಾಸ್ ಮಾಧ್ಯಮಗಳೊಂದಿಗೆ ಮಾತನಾಡಿ, ಇನ್ನೂ ಮೂರುವರೆ ವರ್ಷಗಳ ಕಾಲ ಕ್ಷೇತ್ರದಲ್ಲಿ ಶಾಸಕನಾಗಿದ್ದು, ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ನೆಲಮಂಗಲ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಗುರಿ ಹೊಂದಿದ್ದೇನೆ ಎಂದರು.

ನಾನು ಚುನಾವಣೆಗೆ ಸ್ಪರ್ಧಿಸಿದಾಗ ವಿರೋಧ ಪಕ್ಷದ ಮುಖಂಡರು ನನ್ನ ಮೇಲೆ ಇಲ್ಲಸಲ್ಲದ ಆರೋಪಗಳ ಸುರಿಮಳೆಯನ್ನೇ ಸುರಿದರು. ಇದೀಗ ನನ್ನ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಕ್ಷೇತ್ರದ ಜನರೇ ಅವರಿಗೆ ಉತ್ತರ ನೀಡಲಿದ್ದಾರೆ ಎಂದರು.

ಬಸ್ ನಿಲ್ದಾಣ ಮೇಲ್ದರ್ಜೆಗೆ:

ಬಸ್ ನಿಲ್ದಾಣದ ಬಗ್ಗೆ ಈಗಾಗಲೇ ಸದನದಲ್ಲಿ ಸರ್ಕಾರದ ಗಮನಸೆಳೆದು ಸಾರಿಗೆ ಸಚಿವರ ಜೊತೆ ಚರ್ಚಿಸಿ ಹೆಚ್ಚಿನ ಅನುದಾನಕ್ಕೆ ಮನವಿ ಮಾಡಿದಾಗ ಅವರು ಸ್ಪಂದಿಸಿದ್ದಾರೆ. ಶೀಘ್ರದಲ್ಲೇ ಅವರನ್ನು ನೆಲಮಂಗಲ ಹಾಗೂ ದಾಬಸ್ ಪೇಟೆ ಬಸ್ ನಿಲ್ದಾಣಕ್ಕೆ ಕರೆ ತಂದು ವಾಸ್ತವತೆ ತೋರಿಸುತ್ತೇನೆ ಎಂದರು.

ಕಾಂಗ್ರೆಸ್ ಶಾಸಕನೇ ಬರಬೇಕಾಯಿತು:

ಬಸ್ ನಿಲ್ದಾಣಗಳ ಕಾಮಗಾರಿ ಮಾಡಲು ಕಾಂಗ್ರೆಸ್ ಶಾಸಕನೇ ಬರಬೇಕಾಯಿತು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಐದು ವರ್ಷ ಆಡಳಿತದಲ್ಲಿತ್ತು, ಆಗ ಯಾಕೆ ಬಿಜೆಪಿ ಮುಖಂಡರು ಬಸ್ ನಿಲ್ದಾಣಗಳನ್ನು ನಿರ್ಮಿಸುವ ಬಗ್ಗೆ ಮಾತನಾಡಲಿಲ್ಲ ಎಂದು ಈ ವೇಳೆ ಪ್ರಶ್ನಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಆರ್.ಗೌಡ, ಅಗಳಕುಪ್ಪೆ ಗೋವಿಂದರಾಜು, ಅಂಚೆಮನೆ ಪ್ರಕಾಶ್, ಖಲೀಂಉಲ್ಲಾ, ಲಕ್ಕೂರು ಗ್ರಾಪಂ ಅಧ್ಯಕ್ಷೆ ಶೋಭ, ಉಪಾಧ್ಯಕ್ಷೆ ಲಕ್ಷ್ಮೀದೇವಿ, ರಾಮಾಂಜನೇಯ, ಪಿಡಿಒ ಉಮಾಶಂಕರ್, ಗ್ರಾಪಂ ಸದಸ್ಯರಾದ ವನಿತ, ಗಂಗಮ್ಮ, ಮುಬೀನ್ ತಾಜ್, ಶಿವಕುಮಾರ್, ಹೊಸಳಯ್ಯ, ಮುಖಂಡರಾದ ನಾರಾಯಣ್, ದಿನೇಶ್ ನಾಯಕ್, ಮನು ಪ್ರಸಾದ್, ಹನುಮಂತರಾಜು, ಸುರೇಶ್, ನಯಾಜ್ ಖಾನ್, ಸಿದ್ದರಾಜು, ರವಿಕುಮಾರ್, ಮಾಚನಹಳ್ಳಿ ರಾಘು, ದೇವರಾಜು, ಚಿಕ್ಕಣ್ಣ ಮತ್ತಿತರರಿದ್ದರು.