ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕಾಂಗ್ರೆಸ್ ಗ್ಯಾರಂಟಿಗಳನ್ನು ನೀಡಿದಾಗ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಲಿದೆ, ಜನ ಸೋಮಾರಿಗಳಾಗುತ್ತಾರೆ ಎಂದು ಬಿಜೆಪಿಯವರು ಬೇಕಾಬಿಟ್ಟಿಯಾಗಿ ಮಾತನಾಡಿದ್ದರು. ಈಗ ಪ್ರಧಾನಿ ನರೇಂದ್ರ ಮೋದಿ ಗ್ಯಾರಂಟಿ ಎಂದು ಏಕೆ ಮಾಡಿದ್ದಾರೆ? ಇದರಿಂದ ದೇಶ ದಿವಾಳಿ ಆಗುವುದಿಲ್ಲವೇ ಎಂದು ಸಚಿವ ಮಧು ಬಂಗಾರಪ್ಪ ಕಿಡಿಕಾರಿದರು.ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ನಾವು ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಜನರಿಗೆ ಕೊಟ್ಟಿದ್ದ ಭರವಸೆಗಳನ್ನು ಈಡೇರಿಸಿ, ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. ₹57 ಸಾವಿರ ಕೋಟಿಯನ್ನು ಬಡವರಿಗೆ ಕೊಟ್ಟಿದ್ದೇವೆ. ಶ್ರೀಮಂತರ ಜೇಬಿಗೆ ಹಾಕಿಲ್ಲ. ಮೋದಿ ಗ್ಯಾರಂಟಿಯಿಂದ ಬಡವರ ಹಸಿದ ಹೊಟ್ಟೆಗಳು ತುಂಬಿಲ್ಲ. ಕಾಂಗ್ರೆಸ್ ಗ್ಯಾರಂಟಿ ಮೇಲೆಯೇ ಲೋಕಸಭೆ ಚುನಾವಣೆಯನ್ನೂ ಮಾಡುತ್ತದೆ ಎಂದರು.
ರಾಜ್ಯ ರೈತರಿಗೆ ಕೇಂದ್ರ ಸ್ಪಂದಿಸಿಲ್ಲ:ಮೋದಿ ಗ್ಯಾರಂಟಿಗಳು ಬರ್ಬಾದ್ ಮಾಡಿವೆ. ರೈತರ ಹೋರಾಟಕ್ಕೆ ಟಿಯರ್ ಗ್ಯಾಸ್ ಬಿಡಲಾಗುತ್ತದೆ. ರಾಜ್ಯದ ರೈತರಿಗೆ ಕೇಂದ್ರ ಏನು ಅನುಕೂಲ ಮಾಡಿಕೊಟ್ಟಿಲ್ಲ. ಬಿಜೆಪಿ ಕೈಯಲ್ಲಿ ಜನರಿಗಾಗಿ ಏನೂ ಇಲ್ಲ. ಶಿವಮೊಗ್ಗದ ರಾಗಿಗುಡ್ಡ ಕೋಮು ಪ್ರಕರಣದಲ್ಲಿ ಅವರ ಬೇಳೆ ಬೇಯಲಿಲ್ಲ. ರಾಮನನ್ನು ಬೀದಿಗೆ ತಂದು ನೋಡಿದರೂ ಪ್ರಯೋಜನವಾಗಿಲ್ಲ. ಹೈವೇ, ಏರ್ ಪೋರ್ಟ್, ಜಲಜೀವನ ಮಿಷನ್ ಯೋಜನೆಗಳಲ್ಲಿ ರಾಜ್ಯ ಸರ್ಕಾರದ ದುಡ್ಡಿದೆ. ಅದು ಸಂಸದ ರಾಘವೇಂದ್ರರ ಸಾಧನೆಯಲ್ಲ. ಜಿಲ್ಲೆಯಲ್ಲಿರುವ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ಕೇಂದ್ರದ ಸಹಕಾರ ಬೇಕಾಗಿದೆ. ಆದರೆ, ಸಂಸದ ರಾಘವೇಂದ್ರ ಅವರು ಶರಾವತಿ ಸಂತ್ರಸ್ತರ ಪರ ಒಮ್ಮೆಯೂ ಸಂಸತ್ತಿನಲ್ಲಿ ಧ್ವನಿ ಎತ್ತಿಲ್ಲ ಎಂದು ಕಿಚಾಯಿಸಿದರು.
ಕಾಂಗ್ರೆಸ್‌ಗೆ ಪೂರಕ ವಾತಾವರಣ:ಜನರಿಗೆ ನೀಡುತ್ತಿರುವ ಗ್ಯಾರಂಟಿಗಳಿಂದಾಗಿ ವಾತಾವರಣ ಚೆನ್ನಾಗಿದೆ. ಅನೇಕರು ಸ್ವಯಂಪ್ರೇರಿತರಾಗಿ ಪ್ರಚಾರಕ್ಕೆ ಬರುವುದಾಗಿ ಹೇಳುತ್ತಿದ್ದಾರೆ. ಆಯಾಯ ಕ್ಷೇತ್ರಗಳಲ್ಲಿ ಶಾಸಕರು ಹಾಗೂ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳಿಗೆ ಜವಾಬ್ದಾರಿ ನೀಡಲಾಗುತ್ತದೆ. ರಾಘವೇಂದ್ರ ಮೊದಲು ಗೆದ್ದಾಗ ಏನು ಕಡಿದುಕಟ್ಟೆ ಹಾಕಿದ್ದರು. ಜಾಲತಾಣಗಳಲ್ಲಿ ಹರಿದಾಡುವುದನ್ನು ಕಸದ ಬುಟ್ಟಿಗೆ ಹಾಕಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಹಳ ದೊಡ್ಡ ಕನಸುಗಳಿವೆ:ಜೆಡಿಎಸ್ ಬಿಜೆಪಿಯ ಬಿ ಟೀಂ ಆಗಿರುವುದರಿಂ ಸ್ವತಃ ಜೆಡಿಎಸ್ ಮತ್ತು ಬಿಜೆಪಿಗೇ ಹೊಡೆತ. ಬಿಜೆಪಿಯವರಿಗೆ ಸಂವಿಧಾನವೇ ದೊಡ್ಡ ಹೊಡೆತ ನೀಡುತ್ತಿದೆ. ಹುಚ್ಚರಿಗೂ ಬುದ್ಧಿ ಕಲಿಸುತ್ತೆ. ಗೀತಕ್ಕ ಸಮಾಜ ಸೇವೆಯಲ್ಲಿ ಬಹುದೊಡ್ಡ ಹೆಸರು ಮಾಡಿದವರು. ಅವರಿಗೆ ಶಿವಮೊಗ್ಗ ಕ್ಷೇತ್ರದ ಬಗ್ಗೆ ಬಹಳ ದೊಡ್ಡ ಕನಸುಗಳಿವೆ. ಬಿಜೆಪಿಗೆ ಈ ಬಾರಿ ಖಂಡಿತ ಮೆಜಾರಿಟಿ ಬರಲ್ಲ. ಮೋದಿ ಏನೋ ಹೇಳಿದ ಕೂಡಲೇ ಬಡವರ ಹೊಟ್ಟೆಗೆ ಅನ್ನ ಬೀಳಲ್ಲ. ಅನ್ನ ಕೊಡುವ ಸರ್ಕಾರ ನಮ್ಮದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಆರ್. ಎಂ. ಮಂಜುನಾಥ ಗೌಡ, ರಮೇಶ ಶಂಕರಘಟ್ಟ, ಜಿ.ಡಿ.ಮಂಜುನಾಥ್, ಎಚ್.ಸಿ. ಯೋಗೀಶ್, ಎನ್.ಪಿ. ಧರ್ಮರಾಜ್, ಎಸ್.ಕೆ.ಮರಿಯಪ್ಪ, ರಮೇಶ್, ವಿಜಯ್‍ಕುಮಾರ್, ರವಿಕುಮಾರ್, ರಮೇಶ್ ಶಂಕರಘಟ್ಟ, ಜಿ.ಡಿ.ಮಂಜುನಾಥ್, ಮುಹೀಬ್, ರವಿಕುಮಾರ್ ಇದ್ದರು.- - -
ಬಾಕ್ಸ್ಗೀತಾ ಶಿವರಾಜ್‌ಕುಮಾರ್ ಗೆದ್ದೆ ಗೆಲ್ಲುತ್ತಾರೆ
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್‍ಗೆ ಉತ್ತಮ ವಾತಾವರಣವಿದೆ. ಘೋಷಿತ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಗೆಲುವು ನಿಶ್ಚಿತವಾಗಿದೆ. ಈ ಹಿಂದೆ ಜೆಡಿಎಸ್‌ನಿಂದ ಗೀತಾ ಶಿವರಾಜ್ ಕುಮಾರ್ ಸ್ಪರ್ಧೆ ಮಾಡಿದ್ದರು. ನಾನೂ ಸ್ಪರ್ಧೆ ಮಾಡಿದ್ದೆ. ಆದರೆ, ವಾತಾವರಣ ಪೂರಕವಾಗಿ ಇರಲಿಲ್ಲ. ಆದರೂ ಸಾಕಷ್ಟು ಮತಗಳು ಬಂದಿದ್ದವು. ಆದರೆ, ಈ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿರುವುದರಿಂದ ಗೆಲುವು ಸಾಧ್ಯವಾಗಲಿದೆ ಎಂದು ಹೇಳಿದರು.- - -
ಟಾಪ್ ಕೋಟ್ ಲೋಕಸಭಾ ಚುನಾವಣೆ ಹಬ್ಬದ ರೀತಿಯಲ್ಲಿ ನಡೆಸಲಿದ್ದೇವೆ. 13 ವರ್ಷಗಳಿಂದ ಕಳೆದುಕೊಂಡಿರುವ ಸಂಸತ್ ಸ್ಥಾನವನ್ನು ಈಗ ಮತ್ತೆ ಕಾಂಗ್ರೆಸ್ ಗೆಲ್ಲುವುದು ಗ್ಯಾರಂಟಿ. ಸಮೀಕ್ಷೆಗಳು ನಂಬಲರ್ಹವಲ್ಲ. ಅವು ವಿಧಾನಸಭಾ ಚುನಾವಣೆ ಹೊತ್ತಲ್ಲಿ ಕಾಂಗ್ರೆಸ್ ವಿರುದ್ಧ ಸರ್ವೆ ವರದಿ ನೀಡಿದ್ದವು. ಆದರೆ, ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿರುವುದು ನಿಮ್ಮ ಕಣ್ಣ ಮುಂದೆಯೇ ಇದೆ- ಮಧು ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವ
- - --11ಎಸ್ಎಂಜಿಕೆಪಿ04: ಮಧು ಬಂಗಾರಪ್ಪ