ಹಿಂದುತ್ವದ ಮೇಲಿನ ಷಡ್ಯಂತ್ರಕ್ಕೆ ಬಗ್ಗಲ್ಲ: ಗೋಪಾಲಜಿ ನಾಗರಕಟ್ಟೆ

| Published : Sep 12 2025, 12:06 AM IST

ಹಿಂದುತ್ವದ ಮೇಲಿನ ಷಡ್ಯಂತ್ರಕ್ಕೆ ಬಗ್ಗಲ್ಲ: ಗೋಪಾಲಜಿ ನಾಗರಕಟ್ಟೆ
Share this Article
  • FB
  • TW
  • Linkdin
  • Email

ಸಾರಾಂಶ

ವಿಕಾಸ ಭಾರತದ ಸಂಸ್ಕಾರಕ್ಕಾಗಿ ಆರಂಭವಾದ ಆರ್‌ಎಸ್‌ಎಸ್‌ಗೆ ಈಗ ನೂರು ವರ್ಷ. ರಾಷ್ಟ್ರಧರ್ಮ ಸಂಸ್ಕಾರವೇ ಸಂಘದ ಉದ್ದೇಶ ಎಂದು ಎಂದು ವಿಶ್ವ ಹಿಂದು ಪರಿಷತ್ ರಾಷ್ಟ್ರೀಯ ಕಾರ್ಯದರ್ಶಿ ಗೋಪಾಲಜಿ ನಾಗರಕಟ್ಟೆ ತಿಳಿಸಿದರು.

ಹಾನಗಲ್ಲ: ಹಿಂದುವಿಗೆ ಅಪಮಾನ ಮಾಡಿದ ಯಾವ ಸರ್ಕಾರಗಳೂ ಉಳಿದಿಲ್ಲ. ಹಿಂದುತ್ವದ ಮೇಲೆ ಆಕ್ರಮಣವೂ ಹೊಸದಲ್ಲ, ಷಡ್ಯಂತ್ರಗಳಿಗೆ ಬಗ್ಗುವುದಿಲ್ಲ. ಹಿಂದು ಪಲಾಯನವಾದಿಯೂ ಅಲ್ಲ ಎಂದು ವಿಶ್ವ ಹಿಂದು ಪರಿಷತ್ ರಾಷ್ಟ್ರೀಯ ಕಾರ್ಯದರ್ಶಿ ಗೋಪಾಲಜಿ ನಾಗರಕಟ್ಟೆ ಎಚ್ಚರಿಸಿದರು.ಇಲ್ಲಿನ ವಿರಾಟ ಹಿಂದೂ ಮಹಾಗಣಪತಿ ಆಯೋಜಿಸಿದ್ದ ತಾರಕೇಶ್ವರ ವೇದಿಕೆಯಲ್ಲಿ ನಡೆದ ಧರ್ಮಸಭೆಯಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿ, ಹಿಂದು ಸಂಸ್ಕೃತಿಯ ಮೇಲೆ ಆಕ್ರಮಣ ನಡೆದಾಗೆಲ್ಲ ಹಿಂದೂ ಕೈ ಕಟ್ಟಿ ಕುಳಿತಿಲ್ಲ. ನಾವು ಹೇಡಿಗಳಲ್ಲ. ಧರ್ಮಸ್ಥಳ ಶ್ರದ್ಧಾಕೇಂದ್ರವನ್ನು ಗುರಿಯಾಗಿಸಿಕೊಂಡು ನಡೆಸಿದ ಎಲ್ಲ ತಂತ್ರಗಳು ಷಡ್ಯಂತ್ರಗಳೇ ಆಗಿವೆ. ಧರ್ಮಸ್ಥಳದ ಡಾ. ವೀರೇಂದ್ರ ಹೆಗ್ಗಡೆಯವರು ರಾಜ್ಯಕ್ಕೆ ನೀಡಿದ ಕೊಡುಗೆ ಅಭಿನಂದನೀಯ. ಇದು ಕೇವಲ ಧರ್ಮಸ್ಥಳದ ಮೇಲಿನ ಆಕ್ರಮಣ ಅಲ್ಲ. ಇಡೀ ಹಿಂದುತ್ವದ ಮೇಲಿನ ಆಕ್ರಮಣ ಎಂದರು.

ಬುರುಡೆ ಬಿಟ್ಟವರೆಲ್ಲ ತಕ್ಕ ಶಾಸ್ತಿ ಅನುಭವಿಸಬೇಕು. ವಿಕಾಸ ಭಾರತದ ಸಂಸ್ಕಾರಕ್ಕಾಗಿ ಆರಂಭವಾದ ಆರ್‌ಎಸ್‌ಎಸ್‌ಗೆ ಈಗ ನೂರು ವರ್ಷ. ರಾಷ್ಟ್ರಧರ್ಮ ಸಂಸ್ಕಾರವೇ ಸಂಘದ ಉದ್ದೇಶ. ಸ್ವದೇಶಿ ಭಾವ ಅರಳಿ ಸ್ವಾಭಿಮಾನಿಗಳಾಗಿ ಪ್ರೇರಣಾದಾಯಕ ಸತ್ಸಮಾಜಕ್ಕಾಗಿ ಶ್ರಮಿಸುವುದೇ ಸಂಘದ ಆಶಯ. ಉತ್ತರ ಕರ್ನಾಟಕದಲ್ಲಿ ಮಠಗಳು ಮಾಡಿದ ಶೈಕ್ಷಣಿಕ ಸೇವೆ ಸದಾ ಕಾಲಕ್ಕೂ ಸ್ಮರಣೀಯ. ಶೈಕ್ಷಣಿಕ, ಪ್ರಾಕೃತಿಕ ಸಂವರ್ಧನೆ ಬೇಕಾಗಿದೆ. ಭೂಮಿ ಹಾಳು ಮಾಡುವುದು ಬೇಡ. ದೇಶಕ್ಕಾಗಿ ನಾನೇನು ಮಾಡಿದೆ ಎಂಬುದೇ ಈಗಿನ ಅಗತ್ಯ ಎಂದರು.

ಹೂವಿನಹಡಗಲಿಯ ಗವಿಸಿದ್ದೇಶ್ವರ ಮಠದ ಡಾ. ಶಾಂತವೀರ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಅಂಧ ಅನಾಥ ದೀನ ದುರ್ಬಲರಿಗೆ ಶಕ್ತಿ ತುಂಬಿದ ನಾಡು ಹಾನಗಲ್ಲ. ಹಾನಗಲ್ಲ ಲಿಂ. ಕುಮಾರ ಶಿವಯೋಗಿಗಳವರು ಪಂ. ಪಂಚಾಕ್ಷರಿ ಗವಾಯಿಗಳಿಗೆ ನೀಡಿದ ಸಂಸ್ಕಾರ ಕಾರಣದಿಂದಾಗಿ ಸಂಗೀತದ ಮೂಲಕ ಅಂಧ ಅನಾಥ ದುರ್ಬಲರಿಗೆ ಅಕ್ಷಯ ಪಾತ್ರೆ ನೀಡಿದಂತಾಯಿತು. ದೇಶದ ಹಿತಕ್ಕಾಗಿ ಯುವಕರು ಮುನ್ನುಡಿ ಇಡಬೇಕು. ಮಹಾತ್ಮರ ಆದರ್ಶಗಳ ಪಾಠ ನಮಗೆ ಬೇಕಾಗಿದೆ. ಮಹಾತ್ಮರು ನೀಡಿದ ಸಂದೇಶ, ತಂದೆ- ತಾಯಿ ಗುರುಗಳ ಮಾರ್ಗದರ್ಶನ ಇನ್ನಷ್ಟು ಬೇಕಾಗಿದೆ. ದ್ವೇಷ ಅಸೂಯೆಗಳನ್ನು ದೂರ ಚೆಲ್ಲಿ, ಸೌಹಾರ್ದ ಮನಸ್ಸನ್ನುಳ್ಳವರಾಗಿ ಭಾರತೀಯ ಸಂಸ್ಕಾರ ನಿತ್ಯೋತ್ಸವವಾಗಬೇಕಾಗಿದೆ ಎಂದರು.ರವಿಚಂದ್ರ ಪುರೋಹಿತ ಆಶಯ ನುಡಿ ನುಡಿದರು. ಹಿರಿಯರಾದ ಬಲ್ಲಣ್ಣ ಬಂಕಾಪೂರ ಅಧ್ಯಕ್ಷತೆ ವಹಿಸಿದ್ದರು. ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮಿಗಳು ಸಮ್ಮುಖ ವಹಿಸಿದ್ದರು. ಗಣ್ಯರಾದ ಸಿದ್ದಲಿಂಗಣ್ಣ ಕಮಡೊಳ್ಳಿ, ಬಿ.ಎಸ್. ಕುಲಕರ್ಣಿ, ಗಾಯಕಿ ಸಂಧ್ಯಾ ಗಿರೀಶ ಅತಿಥಿಗಳಾಗಿದ್ದರು. ಪ್ರಭಾಕರ ಕರಗುದರಿ ವಂದೇ ಮಾತರಂ ಗೀತೆ ಹಾಡಿದರು. ತುಳಜೇಶ ಮೂಲಿಮನಿ ಸ್ವಾಗತಿಸಿದರು. ಚೇತನ ಬೆಂಡಿಗೇರಿ ಅತಿಥಿಗಳನ್ನು ಪರಿಚಯಿಸಿದರು. ಗಿರೀಶ ದೇಶಪಾಂಡೆ ನಿರೂಪಿಸಿದರು. ರವಿ ಪುರದ ವಂದಿಸಿದರು.