ಸಾರಾಂಶ
‘ಧರ್ಮಸ್ಥಳ ಗ್ರಾಮದಲ್ಲಿ ಉತ್ಖನನಕ್ಕೂ ಮುನ್ನ ಬುರುಡೆ ಪ್ರಕರಣದ ಪ್ರಮುಖ ಆರೋಪಿ ಚಿನ್ನಯ್ಯನನ್ನು ಪ್ರತಿಷ್ಠಿತ ಸ್ವಾಮೀಜಿಯೊಬ್ಬರ ಬಳಿ ಕರೆದುಕೊಂಡು ಹೋಗಲಾಗಿತ್ತು. ಬುರುಡೆ ವಿಚಾರವಾಗಿ ಆ ಸ್ವಾಮೀಜಿಗೆ ಎಲ್ಲವೂ ಗೊತ್ತು. ಎಂದು ಪ್ರಕರಣದ ದೂರುದಾರ ಹಾಗೂ ಸೌಜನ್ಯ ಪರ ಹೋರಾಟಗಾರ ಜಯಂತ್ ಸ್ಫೋಟಕ ಹೇಳಿಕೆ
ಮಂಗಳೂರು : ‘ಧರ್ಮಸ್ಥಳ ಗ್ರಾಮದಲ್ಲಿ ಉತ್ಖನನಕ್ಕೂ ಮುನ್ನ ಬುರುಡೆ ಪ್ರಕರಣದ ಪ್ರಮುಖ ಆರೋಪಿ ಚಿನ್ನಯ್ಯನನ್ನು ಪ್ರತಿಷ್ಠಿತ ಸ್ವಾಮೀಜಿಯೊಬ್ಬರ ಬಳಿ ಕರೆದುಕೊಂಡು ಹೋಗಲಾಗಿತ್ತು. ಬುರುಡೆ ವಿಚಾರವಾಗಿ ಆ ಸ್ವಾಮೀಜಿಗೆ ಎಲ್ಲವೂ ಗೊತ್ತು. ಕಾಲ ಬಂದಾಗ ಸ್ವಾಮೀಜಿಯ ಹೆಸರನ್ನು ಬಹಿರಂಗಪಡಿಸುತ್ತೇವೆ’ ಎಂದು ಪ್ರಕರಣದ ದೂರುದಾರ ಹಾಗೂ ಸೌಜನ್ಯ ಪರ ಹೋರಾಟಗಾರ ಜಯಂತ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಬೆಳ್ತಂಗಡಿಯಲ್ಲಿ ಭಾನುವಾರ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ‘ಆ ಸ್ವಾಮೀಜಿ ಭೇಟಿ ವೇಳೆ ನಾನು ಹೋಗಿರಲಿಲ್ಲ. ಚಿನ್ನಯ್ಯ ಬೇರೆಯವರ ಜೊತೆ ಹೋಗಿದ್ದ. ಸ್ವಾಮೀಜಿ ಬಳಿ ಸುಳ್ಳು ಹೇಳಲು ಆಗುತ್ತಾ? ಹೀಗಾಗಿ, ಚಿನ್ನಯ್ಯ ಅವರ ಬಳಿ ಎಲ್ಲವನ್ನೂ ಹೇಳಿದ್ದಾನೆ. ಅವರೊಬ್ಬ ಪ್ರತಿಷ್ಠಿತ ಸ್ವಾಮೀಜಿ. ಸದ್ಯಕ್ಕೆ ಅವರ ಹೆಸರನ್ನು ಬಹಿರಂಗಪಡಿಸುವುದಿಲ್ಲ. ಕಾಲ ಬಂದಾಗ ಸ್ವಾಮೀಜಿಯ ಹೆಸರನ್ನು ಬಹಿರಂಗಪಡಿಸುತ್ತೇವೆ’ ಎಂದರು.ಮಟ್ಟಣ್ಣವರ್‌ಗೆ ಶವ ಹೂತ ಸ್ಥಳ ಗೊತ್ತು:
‘ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಅನಾಥ ಶವಗಳನ್ನು ಹೂತಿರುವ ಸ್ಥಳವು ಹೋರಾಟಗಾರ ಗಿರೀಶ್ ಮಟ್ಟಣ್ಣವರ್‌ಗೂ ಗೊತ್ತು. ಎಸ್‌ಐಟಿ ರಚನೆಗೂ ಮುಂಚೆ ಚಿನ್ನಯ್ಯನ ಜೊತೆಗೆ ಗಿರೀಶ್ ಮಟ್ಟಣ್ಣವರ್ ಕೂಡ ಉತ್ಖನನ ಮಾಡಿದ ಎಲ್ಲ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಆದರೆ, ಚಿನ್ನಯ್ಯ ಈಗ ಎಸ್‌ಐಟಿಗೆ ಬೇರೆ ಜಾಗ ತೋರಿಸಿದ್ದಾನೆ. ಹಾಗಾಗಿ, ಹೂತಿರುವ ಶವಗಳು ಅವನಿಗೆ ಪತ್ತೆಯಾಗಿಲ್ಲ’ ಎಂದಿದ್ದಾರೆ.
‘ಗಿರೀಶ್ ಮಟ್ಟಣ್ಣವರ್‌ಗೆ ಮೊದಲೇ ಆತ ಅಗೆಯುವ ಸ್ಥಳಗಳನ್ನು ತೋರಿಸಿದ್ದ. ನನಗೆ ಏಪ್ರಿಲ್ ತಿಂಗಳ ನಂತರ ಚಿನ್ನಯ್ಯನ ವಿಚಾರ ಗೊತ್ತಾಗಿದೆ. ಈಗ ಆತ ತಾನು ಹೂತ ಜಾಗಗಳನ್ನು ಸರಿಯಾಗಿ ತೋರಿಸಿಲ್ಲ. ಅವನನ್ನು ಕೆಲವರು ಬೆದರಿಸಿದ್ದಾರೆ. ಹೀಗಾಗಿ, ದೊಡ್ಡಮಟ್ಟದಲ್ಲಿ ಹೆಣ್ಣು ಮಕ್ಕಳನ್ನು ಹೊತ್ತಿರುವ ಸ್ಥಳವನ್ನು ಆತ ತೋರಿಸಿಲ್ಲ’ ಎಂದರು.
‘ನಾವು ದೇವಸ್ಥಾನದ ವಿರುದ್ಧ ಪಿತೂರಿ ಮಾಡುತ್ತಿಲ್ಲ. ಈ ಆಟ ಒಂದು ಹಂತಕ್ಕೆ ಬರಲಿ, ಆಮೇಲೆ ತೋರಿಸುತ್ತೇವೆ. ಕೆಲವರು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಹೋರಾಟದಲ್ಲಿ ಬಿರುಕು ಬಂದಿಲ್ಲ. ನಮ್ಮದು ಸತ್ಯಪರ, ನ್ಯಾಯದ ಪರ ಹೋರಾಟ’ ಎಂದು ಹೇಳಿದರು.
ಎಸ್‌ಐಟಿ ತನಿಖೆ ಬಗ್ಗೆ ಭಯವಿಲ್ಲ:
ತಮ್ಮ ಮನೆ ಮೇಲೆ ನಡೆದ ಎಸ್ಐಟಿ ದಾಳಿ ಕುರಿತು ಪ್ರತಿಕ್ರಿಯಿಸಿ, ‘ನಾನೇನು ಕಳ್ಳತನ ಮಾಡಿಲ್ಲ, ಅತ್ಯಾ*ರ,, ಕೊಲೆ ಮಾಡಿಲ್ಲ. ಹೀಗಾಗಿ, ಎಸ್‌ಐಟಿ ತನಿಖೆ ಬಗ್ಗೆ ಭಯಗೊಳ್ಳಬೇಕಾದ ಅಗತ್ಯವಿಲ್ಲ. ಎಸ್‌ಐಟಿ ಅಧಿಕಾರಿಗಳು ನಮ್ಮ ಮನೆಗೆ ಬಂದಾಗ ನಾನು ಊರಲ್ಲಿಯೇ ಇದ್ದೆ, ಆದರೆ, ಮನೆಯಲ್ಲಿ ಇರಲಿಲ್ಲ. ಆರ್‌ಟಿಐ ಮೂಲಕ ತೆಗೆದ ಎಲ್ಲ ದಾಖಲೆಗಳನ್ನು ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದಾರೆ. ಇದನ್ನು ನಾನು ಮಹಜರು ಎಂದು ಭಾವಿಸುತ್ತೇನೆ, ದಾಳಿ ಅಲ್ಲ’ ಎಂದರು.
‘ಸುಪ್ರೀಂಕೋರ್ಟ್ ಉಸ್ತುವಾರಿಯಲ್ಲಿ ಈ ಪ್ರಕರಣದ ತನಿಖೆ ಆಗಬೇಕು ಎಂಬ ಉದ್ದೇಶದಿಂದ ನಾನು ಚಿನ್ನಯ್ಯನನ್ನು ದೆಹಲಿಗೆ ಕರೆದುಕೊಂಡು ಹೋಗಿದ್ದೆ. ಬುರುಡೆಯನ್ನೂ ಸಹ ದೆಹಲಿಗೆ ತೆಗೆದುಕೊಂಡು ಹೋಗಿದ್ದು ನಿಜ. ಚಿನ್ನಯ್ಯನಿಗೆ ನಮ್ಮ ಮನೆಯಲ್ಲಿ ಊಟ ಹಾಕಿದ್ದೆ, ಅದಕ್ಕೆ ಮಹಜರು ಮಾಡಿದ್ದಾರೆ. ಆದರೆ, ನಾನು ಚಿನ್ನಯ್ಯನಿಗೆ ಬುರುಡೆ ಕೊಟ್ಟಿಲ್ಲ. ಯಾವುದೇ ಲ್ಯಾಬಿನಿಂದಾಗಲಿ, ಮಣ್ಣಿನಿಂದಾಗಲಿ ನಾನು ಬುರುಡೆಯನ್ನು ತೆಗೆದುಕೊಂಡು ಹೋಗಿ ಕೊಟ್ಟಿಲ್ಲ’ ಎಂದರು.
‘ಸೌಜನ್ಯ ಪ್ರಕರಣದಲ್ಲಿ ಚಿನ್ನಯ್ಯ ಭಾಗಿಯಾಗಿದ್ದಾನೆ ಎನ್ನುವುದು ನನಗೆ ಗೊತ್ತು. ಈಗ ಚಿನ್ನಯ್ಯ ನಮ್ಮನ್ನು ಹಳ್ಳಕ್ಕೆ ತಂದು ಹಾಕಿದ್ದಾನೆ. ಹಾಗಾಗಿ, ಅವನಿಗೆ ಮುಂದೆ ಮಾರಿ ಹಬ್ಬ ಇದೆ’ ಎಂದರು.
- ಉತ್ಖನನಕ್ಕೂ ಮುನ್ನ ಪ್ರತಿಷ್ಠಿತ ಸ್ವಾಮೀಜಿ ಜತೆ ಚಿನ್ನಯ್ಯ ಭೇಟಿ
- ಕೇಸಿನ ಎಲ್ಲ ವಿಚಾರಗಳನ್ನೂ ಆತ ಸ್ವಾಮೀಜಿ ಅವರಿಗೆ ತಿಳಿಸಿದ್ದ
- ಅವರು ಪ್ರತಿಷ್ಠಿತ ಸ್ವಾಮೀಜಿ, ಅವರಿಗೆ ಎಲ್ಲ ವಿಷಯಗಳೂ ಗೊತ್ತು
- ಶವ ಹೂತಿರುವ ಸ್ಥಳ ಮಟ್ಟಣ್ಣವರ್‌ಗೂ ಗೊತ್ತು: ಜಯಂತ್ ಹೇಳಿಕೆ