ಮುಂಬರುವ ಎಲ್ಲ ಚುನಾವಣೆ ಗೆಲ್ಲಲು ಶ್ರಮಿಸುವೆ

| Published : Feb 02 2024, 01:02 AM IST

ಮುಂಬರುವ ಎಲ್ಲ ಚುನಾವಣೆ ಗೆಲ್ಲಲು ಶ್ರಮಿಸುವೆ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯ ಪ್ರತಿಯೊಂದು ಹಳ್ಳಿ-ಹಳ್ಳಿಗೂ ತಿರುಗಿ ಪಕ್ಷ ಸಂಘಟಿಸಿ ಮುಂಬರುವ ಲೋಕಸಭಾ, ಜಿಪಂ, ತಾಪಂ, ಎಪಿಎಂಸಿ ಸೇರಿ ಎಲ್ಲಾ ಚುನಾವಣೆಗಳಲ್ಲೂ ಗೆಲ್ಲಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ.

ಕನ್ನಡಪ್ರಭ ವಾರ್ತೆ ಹಾವೇರಿ

ಜಿಲ್ಲೆಯ ಪ್ರತಿಯೊಂದು ಹಳ್ಳಿ-ಹಳ್ಳಿಗೂ ತಿರುಗಿ ಪಕ್ಷ ಸಂಘಟಿಸಿ ಮುಂಬರುವ ಲೋಕಸಭಾ, ಜಿಪಂ, ತಾಪಂ, ಎಪಿಎಂಸಿ ಸೇರಿ ಎಲ್ಲಾ ಚುನಾವಣೆಗಳಲ್ಲೂ ಗೆಲ್ಲಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಇದಕ್ಕೆ ಪ್ರತಿಯೊಬ್ಬ ಮುಖಂಡರು, ಕಾರ್ಯಕರ್ತರ ಸಹಕಾರ ಅಗತ್ಯ ಎಂದು ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ಹೇಳಿದರು.

ಇಲ್ಲಿಯ ಶಿವಬಸವೇಶ್ವರ ಕಲ್ಯಾಣಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಪದಗ್ರಹಣ ಸಮಾರಂಭದಲ್ಲಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಅವರಿಂದ ಪಕ್ಷದ ಧ್ವಜ ಸ್ವೀಕರಿಸಿ ಅವರು ಮಾತನಾಡಿದರು.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಮತ್ತೊಮ್ಮೆ ಮೋದಿಯವರು ಪ್ರಧಾನಿಯಾಗಬೇಕು. ಅದಕ್ಕಾಗಿ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿ ಪಕ್ಷದ ಅಭ್ಯರ್ಥಿ ಗೆಲ್ಲಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಮಾಜಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ, ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿದ್ದ ಮುಖಂಡರೇ ಈಗ ಪಶ್ಚಾತಾಪ ಪಡುತ್ತಿದ್ದಾರೆ. ಕಾಂಗ್ರೆಸ್ ಶಾಸಕರಿಗೆ ಕ್ಷೇತ್ರದಲ್ಲಿ ಓಡಾಡಿ ಜನರಿಗೆ ಮುಖ ತೋರಿಸಲು ಆಗುತ್ತಿಲ್ಲ, ನಮ್ಮ ಸರ್ಕಾರ ಅವಧಿಯಲ್ಲಿ ಕೊಟ್ಟಿದ್ದ ಅನುದಾನವನ್ನೂ ವಾಪಸ್ ಪಡೆದಿದ್ದಾರೆ. ಕರೆಂಟ್ ಫ್ರಿ ಅಂತಾ ಹೇಳಿ ಲೋಡ್ ಶೆಡ್ಡಿಂಗ್ ಶುರು ಮಾಡಿದ್ದಾರೆ. ಬಸ್‌ಗಳ ಸಂಖ್ಯೆ ಕಡಿತಗೊಳಿಸಲಾಗಿದ್ದು, ಗೃಹಲಕ್ಷ್ಮಿ ಹಣ ಶೇ. ೬೫ರಷ್ಟು ಮಹಿಳೆಯರಿಗೆ ಇನ್ನೂ ಬರುತ್ತಿಲ್ಲ, ಸ್ಪಿಂಕ್ಲರ್ ದರ ದುಪಟ್ಟು ಮಾಡಿದೆ. ಈ ಸರ್ಕಾರ ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಸಿದುಕೊಳ್ಳುತ್ತಿದೆ. ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಈ ಸರ್ಕಾರ ಇರೋದಿಲ್ಲ, ಈಗಲೇ ಒಬ್ಬೊಬ್ಬರ ಮುಖ ಒಂದೊಂದು ಕಡೆ ಆಗಿವೆ. ಹೀಗಾಗಿ ಎಂಪಿ ಚುನಾವಣೆ ಬಹಳ ಪ್ರಮುಖ. ಗ್ಯಾರಂಟಿ ಯೋಜನೆಗಳನ್ನು ತಿರಸ್ಕರಿಸಿ ಪ್ರಧಾನಿ ಮೋದಿ ಬೆಂಬಲಿಸಿ ಎಂದು ಕರೆ ನೀಡಿದರು.

ಜಿಲ್ಲೆಯಲ್ಲೂ ಘರ್‌ ವಾಪಸಿ:

ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಣಿಬೆನ್ನೂರು ಕ್ಷೇತ್ರದಲ್ಲಿ ಬಂಡಾಯವಾಗಿ ಸ್ಪರ್ಧಿಸಿದ್ದ ಸಂತೋಷಕುಮಾರ್ ಪಾಟೀಲ ತಮ್ಮ ಬೆಂಬಲಿಗರೊಂದಿಗೆ ಗುರುವಾರ ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ಮರಳಿ ಪಕ್ಷ ಸೇರ್ಪಡೆಯಾದರು. ಇದರೊಂದಿಗೆ ಜಿಲ್ಲಾ ಬಿಜೆಪಿಯಲ್ಲೂ ಘರ್ ವಾಪಸಿ ಶುರುವಾದಂತಾಗಿದೆ.

ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪಕ್ಷದ ಶಾಲು ಹಾಕಿ ಸಂತೋಷ ಪಾಟೀಲ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಬಿ.ವೈ. ವಿಜಯೇಂದ್ರಗೆ ಅದ್ದೂರಿ ಸ್ವಾಗತ ಕೋರಿದ ಕಾರ್ಯಕರ್ತರು:ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಬಿ.ವೈ. ವಿಜಯೇಂದ್ರ ಅವರಿಗೆ ಪಕ್ಷದ ಕಾರ್ಯಕರ್ತರು ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಬೃಹತ್ ಗಾತ್ರದ ಹಾರವನ್ನು ಕ್ರೇನ್ ಮೂಲಕ ಹಾಕಿ ಅದ್ದೂರಿ ಸ್ವಾಗತ ಕೋರಿದರು.ಇದಕ್ಕೂ ಮೊದಲು ನಗರದ ಕೆಇಬಿ ವೃತ್ತದಿಂದ ಆರಂಭಗೊಂಡ ಬೈಕ್ ರ‍್ಯಾಲಿಯೊಂದಿಗೆ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ನಗರದ ಎಂ.ಜಿ. ರೋಡ್ ಮಾರ್ಗವಾಗಿ ಶಿವಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶ ಹಾಗೂ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭಕ್ಕೆ ಬರಮಾಡಿಕೊಂಡರು. ಈ ವೇಳೆ ಮೆರವಣಿಗೆಯ ಮಾರ್ಗದುದ್ದಕ್ಕೂ ಅಲ್ಲಲ್ಲಿ ಜೆಸಿಬಿ ಮೇಲಿಂದ ಹೂವಿನ ಮಳೆ ಸುರಿಸುವ ಮೂಲಕ ಅದ್ಧೂರಿಯಾಗಿ ಸ್ವಾಗತಿಸಲಾಯಿತು.ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಬಿ.ಸಿ. ಪಾಟೀಲ, ನೂತನ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ, ಶಾಸಕ ಅರವಿಂದ ಬೆಲ್ಲದ, ರಾಜ್ಯ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ, ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಮಾಜಿ ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ, ಶಿವರಾಜ ಸಜ್ಜನರ, ಪಿ. ರಾಜೀವ, ಕಳಕಪ್ಪ ಬಂಡಿ, ನಿಕಟಪೂರ್ವ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಗವಿಸಿದ್ದಪ್ಪ ದ್ಯಾಮಣ್ಣವರ, ಪಾಲಾಕ್ಷಗೌಡ ಪಾಟೀಲ, ಶೋಭಾ ನಿಸ್ಸೀಮಗೌಡ್ರ, ಶಶಿಧರ ಹೊಸಳ್ಳಿ, ರುದ್ರೇಶ ಚಿನ್ನಣ್ಣನವರ, ಪ್ರಭು ಹಿಟ್ನಳ್ಳಿ, ಕೃಷ್ಣ ಈಳಗೇರ, ಭೋಜರಾಜ ಕರೂದಿ, ಪಾಲಾಕ್ಷಗೌಡ ಪಾಟೀಲ, ಕಿರಣ ಕೋಣನವರ ಸೇರಿದಂತೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಇದ್ದರು.