ಮೈಸೂರು ಜಿಲ್ಲೆಯವರೇ ಆದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸಿದ್ದಾರೆ. ಡಿ.ಕೆ.ಶಿವಕುಮಾರ್‌ ನೂತನ ಮುಖ್ಯಮಂತ್ರಿ ಆಗಲಿದ್ದಾರೆ. ಅವರ ಸಂಪುಟದಲ್ಲಿ ಅವಿಭಜಿತ ಮೈಸೂರು ಜಿಲ್ಲೆಯಲ್ಲಿ ಯಾರಿಗೆಲ್ಲಾ ಅವಕಾಶ ಸಿಗಬಹುದು ಎಂಬ ಚರ್ಚೆಗಳು ನಡೆಯುತ್ತಿವೆ.

ಅಂಶಿ ಪ್ರಸನ್ನಕುಮಾರ್‌

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ಜಿಲ್ಲೆಯವರೇ ಆದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸಿದ್ದಾರೆ. ಡಿ.ಕೆ. ಶಿವಕುಮಾರ್‌ ನೂತನ ಮುಖ್ಯಮಂತ್ರಿ ಆಗಲಿದ್ದಾರೆ. ಅವರ ಸಂಪುಟದಲ್ಲಿ ಅವಿಭಜಿತ ಮೈಸೂರು ಜಿಲ್ಲೆಯಲ್ಲಿ ಯಾರಿಗೆಲ್ಲಾ ಅವಕಾಶ ಸಿಗಬಹುದು ಎಂಬ ಚರ್ಚೆಗಳು ನಡೆಯುತ್ತಿವೆ.

ಅವಿಭಜಿತ ಮೈಸೂರು ಜಿಲ್ಲೆಯಲ್ಲಿ 15 ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ ಕೃಷ್ಣರಾಜದಿಂದ ಟಿ.ಎಸ್. ಶ್ರೀವತ್ಸ- ಬಿಜೆಪಿ, ಚಾಮುಂಡೇಶ್ವರಿ- ಜಿ.ಟಿ. ದೇವೇಗೌಡ, ಹುಣಸೂರು- ಜಿ.ಡಿ. ಹರೀಶ್‌ ಗೌಡ ಹಾಗೂ ಎಂ.ಆರ್. ಮಂಜುನಾಥ್‌- ಹನೂರು- (ಮೂವರು ಜೆಡಿಎಸ್‌) ಗೆದ್ದಿದ್ದಾರೆ. ಉಳಿದ 11 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ.

ಸಿದ್ದರಾಮಯ್ಯ- ವರುಣ ಕ್ಷೇತ್ರ ಅವರ ಸಂಪುಟದಲ್ಲಿ ಡಾ.ಎಚ್‌.ಸಿ. ಮಹದೇವಪ್ಪ- ಟಿ. ನರಸೀಪುರ ಹಾಗೂ ಕೆ. ವೆಂಕಟೇಶ್‌- ಪಿರಿಯಾಪಟ್ಟಣ ಇದ್ದರು. ಕ್ರಮವಾಗಿ ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿದ್ದರು. ಇದಲ್ಲದೇ ನರಸಿಂಹರಾಜ- ತನ್ವೀರ್‌ ಸೇಠ್‌. ಚಾಮರಾಜ- ಕೆ. ಹರೀಶ್‌ ಗೌಡ,

ನಂಜನಗೂಡು- ದರ್ಶನ್‌ ಧ್ರುವನಾರಾಯಣ್, ಎಚ್‌.ಡಿ. ಕೋಟೆ- ಅನಿಲ್‌ ಚಿಕ್ಕಮಾದು, ಕೆ.ಆರ್‌. ನಗರ- ಡಿ. ರವಿಶಂಕರ್‌, ಚಾಮರಾಜನಗರ- ಸಿ. ಪುಟ್ಟರಂಗಶೆಟ್ಟಿ.

ಕೊಳ್ಳೇಗಾಲ-ಎ.ಆರ್‌.ಕೃಷ್ಣಮೂರ್ತಿ, ಗುಂಡ್ಲುಪೇಟೆ- ಎಚ್‌.ಎಂ. ಗಣೇಶಪ್ರಸಾದ್‌- ಕಾಂಗ್ರೆಸ್‌ ಪಕ್ಷದ ಶಾಸಕರಾಗಿದ್ದಾರೆ.

ಸಿದ್ದರಾಮಯ್ಯ ಅವರ ನಿರ್ಗಮನದಿಂದಾಗಿ ಅವರ ಪುತ್ರ, ವಿಧಾನ ಪರಿಷತ್‌ ಸದಸ್ಯ ಡಾ.ಯತೀಂದ್ರ ಅವರಿಗೆ ಸಚಿವ ಸ್ಥಾನ ಗ್ಯಾರಂಟಿ ಎನ್ನಲಾಗಿದೆ. ಸಿದ್ದರಾಮಯ್ಯ ಸಂಪುಟದಲ್ಲಿದ್ದ ಡಾ.ಎಚ್.ಸಿ. ಮಹದೇವಪ್ಪ ಅವರು ಡಿ.ಕೆ. ಶಿವಕುಮಾರ್‌ ಅವರಿಂತಲೂ ಮುಂಚೆಯೇ ಶಾಸಕರಾದವರು. ಹೀಗಾಗಿ ಸಂಪುಟ ಸೇರುತ್ತಾರೋ ಇಲ್ಲವೋ ನೋಡಬೇಕು. ಆದರೆ ಹೈಕಮಾಂಡ್‌ ಹಾಗೂ ಸಿದ್ದರಾಮಯ್ಯ ಅವರು ಸೂಚಿಸಿದರೆ, ಅವಕಾಶ ನೀಡಿದರೆ ಸೇರಬಹುದು. ಕೆ. ವೆಂಕಟೇಶ್‌ ಅವರು ಕೂಡ ಡಿ.ಕೆ. ಶಿವಕುಮಾರ್‌ ಅವರಿಗಿಂತ ಮುಂಚಿತವಾಗಿ ಶಾಸಕರಾದವರು. ಜೆ.ಎಚ್‌. ಪಟೇಲ್‌ ಸಂಪುಟದಲ್ಲಿ ಕಾಡಾ ಸಚಿವರಾಗಿದ್ದ ಅವರು ಮತ್ತೊಮ್ಮೆ ಮಂತ್ರಿಯಾಗಬೇಕು ಎಂದು ಬಯಸಿದ್ದರು. ಅದರಂತೆ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದರು. ಹೀಗಾಗಿ ಅವರು ಮಂತ್ರಿಯಾಗಲು ಒತ್ತಡವನ್ನೇನು ಹಾಕುತ್ತಿಲ್ಲ.

2002ರ ಉಪ ಚುನಾವಣೆ ಸೇರಿದಂತೆ ಸತತ ಆರು ಬಾರಿ ಆಯ್ಕೆಯಾಗಿರುವ ತನ್ವೀರ್‌ ಸೇಠ್‌ ಅವರು ಧರಂಸಿಂಗ್‌ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿದ್ದರು. ಕೊಡಗು ಹಾಗೂ ಮೈಸೂರು ಉಸ್ತುವಾರಿ ನಿರ್ವಹಿಸಿದ್ದರು. ಸಿದ್ದರಾಮಯ್ಯ ಸಂಪುಟದಲ್ಲಿ ಕೊನೆಯ ಎರಡು ವರ್ಷ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾಗಿ, ರಾಯಚೂರು ಉಸ್ತುವಾರಿ ನಿರ್ವಹಿಸಿದ್ದರು.

ಅದೇ ರೀತಿ ಕೊಳ್ಳೇಗಾಲ ಶಾಸಕ ಎ.ಆರ್‌. ಕೃಷ್ಣಮೂರ್ತಿ ಅವರು 1994, 1999 ರಲ್ಲಿ ಸಂತೇಮರಹಳ್ಳಿಯಿಂದ ಶಾಸಕರಾಗಿದ್ದರು. ಇದೀಗ ಇಪ್ಪತ್ತು ವರ್ಷಗಳ ನಂತರ ಕೊಳ್ಳೇಗಾಲ ಕ್ಷೇತ್ರದಿಂದ ಮೂರನೇ ಬಾರಿ ಆಯ್ಕೆಯಾಗಿದ್ದಾರೆ. ಸುದೀರ್ಘ ಕಾಲ ಸಚಿವರಾಗಿದ್ದ ಹಾಗೂ ರಾಜ್ಯಪಾಲರೂ ಆಗಿದ್ದ ಬಿ. ರಾಚಯ್ಯಅವರ ಪುತ್ರರಾದ ಎ.ಆರ್‌. ಕೃಷ್ಣಮೂರ್ತಿ ಅವರಿಗೆ ಮಂತ್ರಿಯಾಗಬೇಕು ಎಂಬ ಬಯಕೆ ಇದೆ. ತನ್ವೀರ್‌ ಸೇಠ್‌ ಹಾಗೂ ಎ.ಆರ್‌. ಕೃಷ್ಣಮೂರ್ತಿ ಅವರು ಸಚಿವ ಸ್ಛಾನಕ್ಕೆ ಅರ್ಹರಿದ್ದರೂ ಜಾತಿ ಮತ್ತು ಪ್ರಾದೇಶಿಕತೆ ಅಡ್ಡಿಯಾಗಬಹುದು ಎಂಬ ಆತಂಕ ಇದೆ. ಏಕೆಂದರೆ ಮುಸ್ಲಿಂ ಕೋಟಾದಲ್ಲಿ ಜಮೀರ್‌ ಅಹ್ಮದ್‌ ಖಾನ್‌, ಯು.ಟಿ. ಖಾದರ್‌, ಎನ್‌.ಎ. ಹ್ಯಾರೀಸ್‌, ರಿಜ್ವಾನ್‌ ಅರ್ಷದ್‌, ಸಲೀಂ ಅಹ್ಮದ್‌, ನಜೀರ್‌ ಅಹ್ಮದ್‌, ಕೂಡ ಆಕಾಂಕ್ಷಿತರು. ಪ.ಜಾತಿ ಕೋಟಾದಲ್ಲಿ ಡಾ.ಜಿ. ಪರಮೇಶ್ವರ್‌, ಡಾ.ಎಚ್‌.ಸಿ. ಮಹದೇವಪ್ಪ, ಕೆ.ಎಚ್‌. ಮುನಿಯಪ್ಪ, ಪ್ರಿಯಾಂಕ್‌ ಖರ್ಗೆ, ಪಿ.ಎಂ. ನರೇಂದ್ರ ಸ್ವಾಮಿ, ರೂಪಕಲಾ ಮೊದಲಾದವರು ಆಕಾಂಕ್ಷಿತರು. ಹೀಗಾಗಿ ಈ ಬಾರಿಯಾದರೂ ತನ್ವೀರ್‌ ಸೇಠ್‌ ಹಾಗೂ ಎ.ಆರ್‌. ಕೃಷ್ಣಮೂರ್ತಿ ಅವರಿಗೆ ಅವಕಾಶ ಸಿಗುವುದೇ ಕಾದು ನೋಡಬೇಕು.

ಚಾಮರಾಜನಗರದಿಂದ ಸತತ ನಾಲ್ಕನೇ ಬಾರಿ ಆಯ್ಕೆಯಾಗಿರುವ ಸಿ. ಪುಟ್ಟರಂಗಶೆಟ್ಟಿ ಅವರು ಈ ಹಿಂದೆ ಸಿದ್ದರಾಮಯ್ಯ ಸಂಪುಟದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವರಾಗಿದ್ದರು. ಉಪ್ಪಾರ ಜನಾಂಗಕ್ಕೆ ಮತ್ತೊಮ್ಮೆ ಅವಕಾಶ ನೀಡಬೇಕು ಎಂದು ಕೋರುತ್ತಿದ್ದಾರೆ.

ನಂಜನಗೂಡಿನ ದರ್ಶನ್‌ ಅವರು ಮಾಜಿ ಸಂಸದ ದಿ. ಧ್ರುವನಾರಾಯಣ ಅವರ ಪುತ್ರ. ಅವರಿಗೂ ಜಾತಿ ಮತ್ತು ಪ್ರಾದೇಶಿಕತೆ ಅಡ್ಡಿ. ಅದೇ ರೀತಿ ಎಚ್‌.ಡಿ. ಕೋಟೆಯ ಅನಿಲ್‌ ಚಿಕ್ಕಮಾದು ನಾಯಕ ಜನಾಂಗಕ್ಕೆ ಸೇರಿದವರು. ಮಾಜಿ ಶಾಸಕ ದಿ.ಎಸ್‌. ಚಿಕ್ಕಮಾದು ಅವರ ಪುತ್ರ. ನಾಯಕ ಜನಾಂಗದಿಂದ ಸತೀಶ್‌ ಜಾರಕಿಹೊಳಿ, ರಾಜಣ್ಣ, ನಾಗೇಂದ್ರ ಮತ್ತಿತರರು ಆಕಾಂಕ್ಷಿತರಿದ್ದಾರೆ.

ಗುಂಡ್ಲುಪೇಟೆಯ ಎಚ್.ಎಂ.ಗಣೇಶಪ್ರಸಾದ್‌ ವೀರಶೈವ- ಲಿಂಗಾಯತ ಜನಾಂಗದಿಂದ ಈ ಭಾಗದಿಂದ ಗೆದ್ದಿರುವ ಏಕೈಕ ಶಾಸಕರು. ಚಾಮರಾಜದ ಕೆ. ಹರೀಶ್‌ ಗೌಡ, ಕೆ.ಆರ್‌. ನಗರದ ಡಿ. ರವಿಶಂಕರ್‌ ಮೊದಲ ಬಾರಿ ಗೆದ್ದವರು. ಜಾತಿ, ಪ್ರಾದೇಶಿಕ ಸಮತೋಲನದಿಂದಾಗಿ ಮಂತ್ರಿ ಸ್ಥಾನ ಕೇಳುವ ಸ್ಥಿತಿಯಲ್ಲಿ ಇಲ್ಲ.