ಸಾರಾಂಶ
ಧಾರವಾಡ:
ತನ್ನ ವರದಿಗಳನ್ನೇ ಜಾರಿಗೆ ತರದ ರಾಜ್ಯ ಸರ್ಕಾರ ಇನ್ನು ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳ ನಿರ್ಣಯಗಳನ್ನು ಜಾರಿಗೆ ತರುವುದೇ? ಎಂದು ಹಿರಿಯ ಸಾಹಿತಿ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಪ್ರಶ್ನಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರವು ತಾನು ಮಾಡಿದ ವರದಿಗಳನ್ನೇ ಜಾರಿಗೆ ತರುವಲ್ಲಿ ಆಸಕ್ತಿ ತೋರುತ್ತಿಲ್ಲ ಎಂಬುದು ಗೊತ್ತಿರುವ ಸಂಗತಿ. ಹೀಗಾಗಿ ಕಸಾಪದ ವರದಿ, ನಿರ್ಣಯಗಳನ್ನು ತರುವುದೇ ಎಂಬ ಜಿಜ್ಞಾಸೆ ಮೂಡಿದೆ ಎಂದ ಅವರು, ಸರೋಜಿನಿ ಮಹಿಷಿ ವರದಿ, ಪರಿಷ್ಕೃತ ಸರೋಜಿನಿ ಮಹಿಷಿ ವರದಿ, ಸರ್ಕಾರಿ ಶಾಲೆಗಳ ಸಬಲೀಕರಣ ವರದಿ ಸೇರಿದಂತೆ ಕನ್ನಡ ನಾಡು-ನುಡಿ, ಶಿಕ್ಷಣದ ವಿಷಯವಾಗಿ ರಾಜ್ಯ ಸರ್ಕಾರವೇ ಸಿದ್ಧಪಡಿಸಿದ ವರದಿಗಳನ್ನು ಶಾಸನ ಸಭೆಯಲ್ಲಿ ಚರ್ಚಿಸಿ ಜಾರಿಗೆ ತಂದಿಲ್ಲ. ಇಂತಹ ಸಂದರ್ಭದಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ನಿರ್ಣಯಗಳನ್ನು ತರಬೇಕಾದರೆ ಕಸಾಪ ಅಧ್ಯಕ್ಷರಿಂದ ತೀವ್ರ ಒತ್ತಡದ ಅಗತ್ಯತೆಯನ್ನು ಒತ್ತಿ ಹೇಳಿದರು.
ಸಾಹಿತ್ಯ ಪರಿಷತ್ತಿನ ನಿರ್ಣಯಗಳ ಜಾರಿ ವಿಷಯದಲ್ಲಿ ಆದ್ಯತೆ ಮೇಲೆ ಸರ್ಕಾರವನ್ನು ಗುರಿಪಡಿಸಬೇಕು. ಈ ಜವಾಬ್ದಾರಿ ಸಂಪೂರ್ಣ ಕಸಾಪ ಅಧ್ಯಕ್ಷರದ್ದು. ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ವೇದಿಕೆ ಇಳಿದು ಮುಂದಿನ ವರ್ಷವೇ ಹತ್ತುವ ಅಧ್ಯಕ್ಷರುಗಳಿದ್ದಾರೆ. ಸಮ್ಮೇಳನದಲ್ಲಿ ತೀರ್ಮಾನವಾದ ನಿರ್ಣಯಗಳನ್ನು ಜಾರಿಗೊಳಿಸಲು ನಿರಂತರವಾಗಿ ಕ್ರಿಯಾಶೀಲವಾಗಿ ಕೆಲಸ ಮಾಡುವಲ್ಲಿ ವಿಫಲರಾಗಿರುವ ಕಾರಣ ಸರ್ಕಾರವೂ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಈ ವಿಷಯದಲ್ಲಿ ಸರ್ಕಾರದ ವೈಫಲ್ಯವನ್ನು ಸಾಹಿತ್ಯ ಪರಿಷತ್ ಎತ್ತಿ ತೋರಬೇಕು. ನಿರಂತರ ಒತ್ತಡ ಹಾಕುತ್ತಾ ಹೋದಾಗ ಮಾತ್ರ ನಿರ್ಣಯಗಳು ಜಾರಿಗೆ ಬರಲಿವೆ. ಇಲ್ಲಿಯ ವರೆಗೂ ನಾನು ಗಮನಿಸಿದ ಹಾಗೆ ಯಾವ ಅಧ್ಯಕ್ಷರುಗಳು ನಿರ್ಣಯಗಳ ಜಾರಿಗೆ ನಿರೀಕ್ಷಿತ ಮಟ್ಟಿಗೆ ಒತ್ತಡ ಹಾಕಿರುವ ಉದಾಹರಣೆಗಳಿಲ್ಲ ಎಂದು ಎಸ್.ಜಿ. ಸಿದ್ಧರಾಮಯ್ಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಸಾಪ ಕಾರ್ಯವಿದು:ಪ್ರಸ್ತುತ ರಾಜ್ಯ ಮಾತ್ರವಲ್ಲದೇ ಇಡೀ ದೇಶದಲ್ಲಿಯೇ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣ ವರೆಗೂ ಸಂಕಷ್ಟದ ಸ್ಥಿತಿಯೊಳಗಿದ್ದು, ಹೀಗಾಗಿ ಈ ವಿಷಯ ಸಮಾಜದಲ್ಲಿ ಹೆಚ್ಚು ಚರ್ಚೆಗೆ ಒಳಗಾಗಬೇಕಿದೆ. ಸ್ಥಳೀಯ ಮಹತ್ವ ಕಳೆದುಕೊಳ್ಳುವ ರೀತಿಯಲ್ಲಿ ಶಿಕ್ಷಣ ಬೆಳೆಯುತ್ತಿದೆ. ಪ್ರಾದೇಶಿಕ ಚರಿತ್ರೆ, ಪರಂಪರೆ ಹಾಗೂ ಅಸ್ಮಿತೆಯನ್ನು ಮಕ್ಕಳಿಗೆ ಬೋಧಿಸದೇ ಇದ್ದಲ್ಲಿ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯದ ಅಸ್ಮಿತೆ ಕಂಡುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಶಿಕ್ಷಣ ಕುರಿತು ಈ ಹಿಂದಿನ ಮತ್ತು ಇಂದಿನ ತೌಲಿನಕ ದೃಷ್ಟಿಯಲ್ಲಿ ವಿವೇಚನೆ ಮಾಡಿ, ಮುಂದಿನ ಶಿಕ್ಷಣ ಹೇಗಿರಬೇಕು ಎಂದು ಸಾಹಿತ್ಯ ಪರಿಷತ್ತು ನಿರ್ದೇಶನ ಕೊಡವ ಕಾರ್ಯ ಮಾಡಬೇಕಿದೆ ಎಂದು ಕಸಾಪದ ಕಾರ್ಯವನ್ನು ಪ್ರೊ. ಎಸ್.ಜಿ. ಸಿದ್ದರಾಮಯ್ಯನವರು ಎಚ್ಚರಿಸಿದರು.ಧಾರವಾಡದ ಬೇಂದ್ರೆ ಭವನದ ದುಸ್ಥಿತಿ ಬಗ್ಗೆ ಮಾಹಿತಿ ಬಂದಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರೊಂದಿಗೆ ಈ ಬಗ್ಗೆ ಮಾತನಾಡಿದ್ದು ಆದಷ್ಟು ಶೀಘ್ರ ಬೇಂದ್ರೆ ಭವನಕ್ಕೆ ಕಾಯಕಲ್ಪ ಒದಗಿಸುವ ಭರವಸೆಯನ್ನು ಸಚಿವರು ನೀಡಿದ್ದಾರೆ. ಕಾದು ನೋಡೋಣ ಎಂದು ಪ್ರೊ. ಎಸ್.ಜಿ. ಸಿದ್ದರಾಮಯ್ಯ ಹೇಳಿದರು.