ಮೂರು ದಶಕಗಳ ನಂತರ ಕ್ಷೇತ್ರದ ಜನರ ನಿರೀಕ್ಷೆ । ಆಡಳಿತಾರೂಢ ಪಕ್ಷದವರು ಗೆದ್ದರೂ ಸಚಿವ ಸ್ಥಾನ ಸಿಕ್ಕಿಲ್ಲ । ಹ್ಯಾಟ್ರಿಕ್ ಗೆಲುವಿಗೆ ಕಾಂಗ್ರೆಸ್ ಮನ್ನಣೆ ನೀಡುತ್ತಾ

ಜಡೇಕುಂಟೆ ಮಂಜುನಾಥ್

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಮಂತ್ರಿ ಆಗಿದ್ದ ಹಿರಿಯೂರು ಕ್ಷೇತ್ರದ ಶಾಸಕ ಡಿ.ಸುಧಾಕರ್ ಅಕಾಲಿಕ ನಿಧನ ಹೊಂದಿದ ಕಾರಣ ಜಿಲ್ಲಾ ಮಂತ್ರಿಗಿರಿ ಸ್ಥಾನ ಖಾಲಿಯಾಗಿದೆ. ಈ ಸ್ಥಾನಕ್ಕೆ ಜಿಲ್ಲೆಯವರು ಬರ್ತಾರಾ ಅಥವಾ ಬೇರೆ ಜಿಲ್ಲೆಯ ಸಚಿವರನ್ನು ಚಿತ್ರದುರ್ಗ ಉಸ್ತುವಾರಿಗೆ ನೇಮಿಸುತ್ತಾರಾ? ಎಂಬ ಪ್ರಶ್ನೆಗಳು ಸೇರಿದಂತೆ ಮಂತ್ರಿಗಿರಿ ಯಾರಿಗೆ ಒಲಿದು ಬರಲಿದೆ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.

ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗುತ್ತಾ ಬಂದಿರುವ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ರಘುಮೂರ್ತಿ ಅವರಿಗೆ ಮಂತ್ರಿಭಾಗ್ಯ ಸಿಗಲಿದೆಯೇ ಅಥವಾ ಇವರಿಗಿಂತ ಹಿರಿಯರಾಗಿರುವ ಹೊಸದುರ್ಗದ ಬಿ.ಜಿ.ಗೋವಿಂದಪ್ಪ, ಮೊಳಕಾಲ್ಮೂರು ಎನ್.ವೈ.ಗೋಪಾಲಕೃಷ್ಣ ಅವರಿಗೆ ಹಿರಿತನದ ಆಧಾರದ ಮೇಲೆ ಮಂತ್ರಿ ಭಾಗ್ಯ ದಕ್ಕಲಿದೆಯಾ? ಇಂತಹ ಚರ್ಚೆಗಳು ಎಲ್ಲೆಡೆ ವಿಸ್ತರಿಸುತ್ತಿವೆ.

ಈಗಾಗಲೇ ವಾಲ್ಮೀಕಿ ಸಮುದಾಯದ ಇಬ್ಬರು ಸಚಿವರನ್ನು ಸಂಪುಟದಿಂದ ಹೊರಗಿಡಲಾಗಿದೆ. ಇದಕ್ಕೆ ಅನೇಕ ಕಾರಣಗಳೂ ಉಂಟು. ಈ ಖಾಲಿ ಇರುವ ಸ್ಥಾನಗಳಿಗೆ ವಾಲ್ಮೀಕಿ ಸಮಾಜದ ಟಿ. ರಘುಮೂರ್ತಿ ಅವರಿಗೆ ಮಂತ್ರಿಗಿರಿ ಕೊಡಲಾಗುತ್ತದೆ ಎಂಬ ಮಾತುಗಳು ಕೇಳಿಬಂದರೂ ಜಿಲ್ಲೆಯಲ್ಲಿ ಡಿ.ಸುಧಾಕರ್ ಮಂತ್ರಿಯಾಗಿದ್ದರಿಂದ ಅದು ಸಾಧ್ಯವಾಗಿರಲಿಲ್ಲ. ಇದೀಗ ಡಿ.ಸುಧಾಕರ್ ಅಕಾಲಿಕ ನಿಧನದಿಂದ ಖಾಲಿಯಾಗಿರುವ ಮಂತ್ರಿ ಸ್ಥಾನಕ್ಕೆ ಚಳ್ಳಕೆರೆ ರಘುಮೂರ್ತಿ ಅವರಿಗೆ ಈಗಲಾದರೂ ಅವಕಾಶ ಲಭಿಸುತ್ತದಾ ಎಂದು ಕ್ಷೇತ್ರದ ಮತದಾರ ಸೇರಿದಂತೆ ರಘುಮೂರ್ತಿ ಅಭಿಮಾನಿಗಳು ಆಸೆಗಣ್ಣಿನಿಂದ ನೋಡುತ್ತಿದ್ದಾರೆ.

2013ರಲ್ಲಿ ಪ್ರಥಮ ಬಾರಿಗೆ ವಿಧಾನಸಭೆಗೆ ಆರಿಸಿಹೋಗಿದ್ದ ರಘುಮೂರ್ತಿ ಅವರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಪರ ಕೆಲಸ ಮಾಡಿದ್ದರು. ಇದೇ ಕಾರಣಕ್ಕೆ 2018ರಲ್ಲೂ ಗೆದ್ದು ಬೀಗಿದ್ದರು. ಆ ಅವಧಿಯಲ್ಲಿ ಇಡೀ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಏಕೈಕ ಶಾಸಕರಾಗಿ ಹೊರಹೊಮ್ಮಿದ್ದರು. ಉಳಿದಂತೆ ಮೊಳಕಾಲ್ಮೂರು, ಹಿರಿಯೂರು, ಹೊಳಲ್ಕೆರೆ, ಹೊಸದುರ್ಗ, ಚಿತ್ರದುರ್ಗ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದರು. ಚಳ್ಳಕೆರೆ ಮಾತ್ರ ರಘುಮೂರ್ತಿ ಅವರನ್ನು ಬಿಟ್ಟು ಕೊಟ್ಟಿರಲಿಲ್ಲ. ಆಗ ರಾಜ್ಯದಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಾರದ ಕಾರಣ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಆಗ ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕ ಟಿ. ರಘುಮೂರ್ತಿ ಮಂತ್ರಿ ಆಗಿಯೇ ಬಿಟ್ಟರು ಎಂದು ಜನ ಮಾತಾಡಿಕೊಳ್ಳುತ್ತಿದ್ದರು. ಆದರೆ, ತುಮಕೂರು ಜಿಲ್ಲೆ ಪಾವಗಡದ ವೆಂಕಟರಮಣಪ್ಪ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡು ಕಾರ್ಮಿಕ ಖಾತೆ ಕೊಟ್ಟು ಚಿತ್ರದುರ್ಗ ಜಿಲ್ಲೆಗೆ ಉಸ್ತುವಾರಿ ಮಂತ್ರಿಯಾಗಿ ನೇಮಿಸಿಬಿಟ್ಟರು.

ಇಡೀ ಜಿಲ್ಲೆಯಲ್ಲಿ ಕಾಂಗ್ರೆಸ್ ಮರ್ಯಾದೆ ಉಳಿಸಿದ್ದ ಟಿ.ರಘುಮೂರ್ತಿ ಅವರಿಗೆ ಮಂತ್ರಿಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಕ್ಷೇತ್ರದ ಜನರಿಗೆ ಬಹುದೊಡ್ಡ ನಿರಾಸೆಯಾಗಿತ್ತು. ಆರು ಕ್ಷೇತ್ರಗಳಲ್ಲಿ ಒಂದೇ ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದರೂ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಮಂತ್ರಿ ಸ್ಥಾನ ದಕ್ಕದಿದ್ದಕ್ಕೆ ಕ್ಷೇತ್ರದಲ್ಲಿ ಅಸಮಾಧಾನ ವ್ಯಕ್ತವಾಗಿತ್ತು. ಇದಾದ ನಂತರ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ಬಿದ್ದು ಹೋಗಿತ್ತು. ಮತ್ತೆ 2023ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಮತ್ತೆ ಮೂರನೇ ಬಾರಿಗೆ ರಘುಮೂರ್ತಿ ಚಳ್ಳಕೆರೆ ಕ್ಷೇತ್ರದಲ್ಲಿ ಜಯಸಾಧಿಸಿದ್ದರು. ಒಂದು ಬಾರಿ ಗೆದ್ದವರು ಮತ್ತೆ ಚಳ್ಳಕೆರೆ ಕ್ಷೇತ್ರದಲ್ಲಿ ಗೆದ್ದು ಬಂದಿರಲಿಲ್ಲ. ಆದರೆ, ಟಿ. ರಘುಮೂರ್ತಿ ಹ್ಯಾಟ್ರಿಕ್ ಜಯಸಾಧಿಸುವ ಮೂಲಕ ಕ್ಷೇತ್ರದಲ್ಲಿ ಒಂದು ಬಾರಿ ಗೆದ್ದವರು ಇನ್ನೊಂದು ಬಾರಿ ಗೆಲ್ಲುವುದಿಲ್ಲ ಎಂಬ ಮಾತನ್ನು ಸುಳ್ಳಾಗಿಸಿದ್ದರು. 2023ರಲ್ಲಿ ರಘುಮೂರ್ತಿ ಅವರಿಗೆ ಮಂತ್ರಿ ಸ್ಥಾನ ಸಿಕ್ಕೇ ಸಿಗಲಿದೆ ಎಂದು ಆಸೆಗಣ್ಣಿನಿಂದ ನೋಡುತ್ತಿದ್ದ ಚಳ್ಳಕೆರೆ ಕ್ಷೇತ್ರದ ಜನರಿಗೆ ಈ ಬಾರಿಯೂ ನಿರಾಸೆಯಾಗಿತ್ತು. ಜಾತಿ, ಧರ್ಮ, ಪ್ರಾದೇಶಿಕತೆ, ಹಿರಿತನ ಹೀಗೆ ಅಳೆದೂ ತೂಗಿ ಸಂಪುಟಕ್ಕೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಚಳ್ಳಕೆರೆ ಕ್ಷೇತ್ರಕ್ಕೆ ಹ್ಯಾಟ್ರಿಕ್ ಗಿಪ್ಟ್ ಕೊಟ್ಟಿದ್ದ ಕ್ಷೇತ್ರದ ಜನತೆಗೆ ಕಾಂಗ್ರೆಸ್ ಮಂತ್ರಿಭಾಗ್ಯ ಕೊಡಲೇ ಇಲ್ಲ.

1994ರಲ್ಲಿ ಎಚ್.ಡಿ.ದೇವೇಗೌಡ ಸಂಪುಟದಲ್ಲಿ ಅಬಕಾರಿ ಆ ನಂತರ ಜೆ.ಎಚ್ ಪಟೇಲ್ ಸಂಪುಟದಲ್ಲಿ ಸಣ್ಣನೀರಾವರಿ ಖಾತೆ ಚಳ್ಳಕೆರೆ ತಿಪ್ಪೇಸ್ವಾಮಿ ಅವರಿಗೆ ನೀಡಲಾಗಿತ್ತು. ಈ ಅವಧಿ ಮುಗಿದ ನಂತರ ಅಲ್ಲಿಂದ ಇಲ್ಲಿಯವರೆಗೆ ಚಳ್ಳಕೆರೆಗೆ ಮಂತ್ರಿ ಭಾಗ್ಯ ಸಿಕ್ಕಿಲ್ಲ. ಆಡಳಿತಾರೂಢ ಪಕ್ಷದವರೇ ಇಲ್ಲಿ ಆರಿಸಿ ಬಂದರೂ ಮಂತ್ರಿ ಸ್ಥಾನ ಒಲಿದಿಲ್ಲವೆಂಬುದು ಗಮನಾರ್ಹ.