ಜಡೇಕುಂಟೆ ಮಂಜುನಾಥ್

ಕನ್ನಡಪ್ರಭ ವಾರ್ತೆ ಚಳ್ಳಕೆರೆಚಿತ್ರದುರ್ಗ ಜಿಲ್ಲೆಯ ಇಬ್ಬರು ವಾಲ್ಮೀಕಿ ಸಮುದಾಯದ ಶಾಸಕರ ನಡುವೆ ಮಂತ್ರಿಗಿರಿಗೆ ಪೈಪೋಟಿ ಆರಂಭವಾಗಿದ್ದು, ಇಬ್ಬರೂ ಕೂಡ ಅವರವರ ಲೆಕ್ಕಾಚಾರದಲ್ಲಿ ತಲ್ಲೀನರಾಗಿದ್ದಾರೆ. ಹೈಕಮಾಂಡ್ ತಮಗೆ ಮಣೆ ಹಾಕಬಹುದೆಂಬ ವಿಶ್ವಾಸ ಇಬ್ಬರದ್ದಾಗಿದೆ.

ಒಬ್ಬರು ಸತತ ಮೂರು ಬಾರಿ ಹ್ಯಾಟ್ರಿಕ್ ಗೆಲುವು ಸಾಧಿಸಿರುವುದರಿಂದ ಇಡೀ ಜಿಲ್ಲೆಯಲ್ಲಿ ತಾನು ಪ್ರತಿನಿಧಿಸುವ ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸಿದ ಮತ್ತು 2018ರಲ್ಲಿ ಇಡೀ ಜಿಲ್ಲೆಯಲ್ಲಿ ಕಾಂಗ್ರೆಸ್ ಎಲ್ಲಾ ಕ್ಷೇತ್ರಗಳಲ್ಲಿ ಸೋತರೂ ತಾನು ಮಾತ್ರ ಗೆದ್ದು ಕಾಂಗ್ರೆಸ್ ಸ್ಥಾನ ಉಳಿಸಿದ್ದೆ. ಪಕ್ಷಕ್ಕೆ ನಿಷ್ಟನಾಗಿ ಯಾವುದೇ ಆಮಿಷಗಳಿಗೆ ಬಲಿಯಾಗದೇ ಪಕ್ಷದ ಸಿದ್ಧಾಂತದ ವಿರುದ್ಧ ಎಂದಿಗೂ ಹೋದವನಲ್ಲ ಎಂಬ ದೃಷ್ಟಿಕೋನದಲ್ಲಿ ಸಚಿವಗಿರಿಗೆ ಮನವಿ ಮಾಡಿದರೆ, ಇನ್ನೊಬ್ಬರು ಹಿರಿತನದ ಆಧಾರದಲ್ಲಿ ಏಳು ಬಾರಿ ಶಾಸಕರಾಗಿ ಹತ್ತು ಹಲವು ಕಾರ್ಯಗಳನ್ನ ಮಾಡಿದ್ದೇನೆ. ಒಮ್ಮೆ ಪಕ್ಷಾಂತರ ಮಾಡಿದ್ದು ಬಿಟ್ಟರೆ ನನಗೆ ಎಲ್ಲದರಲ್ಲೂ ಹಿರಿತನವಿದೆ. ವರಿಷ್ಟರು ಮಂತ್ರಿ ಮಾಡುವ ವಿಶ್ವಾಸ ಇದೆ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ.

ಈ ಬೆಳವಣಿಗೆಗಳನ್ನು ನೋಡಿದರೆ ಇಬ್ಬರೂ ಶಾಸಕರು ತೆರೆಮರೆಯಲ್ಲಿ ಸಚಿವಗಿರಿಗೆ ಭರ್ಜರಿ ವರ್ಕೌಟ್ ಮಾಡ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಕೋಟೆನಾಡಿನ ಮಂತ್ರಿಗಿರಿ ಸೆಕೆಂಡ್ ಬಾಂಬೆ ಎನಿಸಿಕೊಂಡಿರುವ ಚಳ್ಳಕೆರೆಗೋ? ಅಥವಾ ರೇಷ್ಮೆ ಸೀರೆ ಮಾರಾಟಕ್ಕೆ ಹೆಸರಾಗಿರುವ ಮೊಳಕಾಲ್ಮೂರಿಗೋ? ಎಂಬ ಕುತೂಹಲ ಜಿಲ್ಲೆಯ ಜನರಿಗಿದೆ.

ಸತತ ಮೂರು ಬಾರಿ ಗೆದ್ದಿರುವ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಸಚಿವಾಕಾಂಕ್ಷಿಯಾಗಿದ್ದು, ಸಿಎಂ ಡಿಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿ ಮಂತ್ರಿಗಿರಿಗೆ ಮನವಿ ಮಾಡಿದ್ದಾರೆ. ಕಳೆದ ನಾಲ್ಕು ದಿನಗಳ ಹಿಂದೆ ಅಭಿಮಾನಿಗಳು ಚಳ್ಳಕೆರೆ ಮತ್ತು ಚಿತ್ರದುರ್ಗ ದಲ್ಲಿ ಭರ್ಜರಿ ಹುಟ್ಟು ಹಬ್ಬ ಆಚರಣೆ ಮಾಡಿದ್ದಾರೆ. ಸಹಜವಾಗಿಯೇ ರಘುಮೂರ್ತಿ ಅವರ ಹ್ಯಾಟ್ರಿಕ್ ಗೆಲುವು ಸೇರಿದಂತೆ ಪಕ್ಷನಿಷ್ಟೆ, ಅಭಿವೃದ್ದಿ ಕಾರ್ಯಗಳಿಂದ ಮಂತ್ರಿ ಆಗುತ್ತಾರೆ ಎಂದು ಸ್ವಯಂ ಪ್ರೇರಿತವಾಗಿ ಕಾರ್ಯಕರ್ತರು ಅಭಿಮಾನಿಗಳು ಹುಟ್ಟುಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ.


ಎರಡು ದಿನಗಳ ಹಿಂದೆಯಷ್ಟೇ ಮೊಳಕಾಲ್ಮೂರು ಶಾಸಕ ಎನ್.ವೈ ಗೋಪಾಲಕೃಷ್ಣ ಕೂಡಾ ತಮ್ಮ ಬೆಂಬಲಿಗರ ಸಭೆ ನಡೆಸಿದ್ದಾರೆ. ಒಂದು ಸಾವಿರಕ್ಕೂ ಹೆಚ್ಚು ಮಂದಿ ಕ್ಷೇತ್ರದ ಮುಖಂಡರ ಸಭೆ ನಡೆಸಿರುವ ಎನ್.ವೈ.ಜಿ ಮಂತ್ರಿಗಿರಿಗೆ ಒತ್ತಡ ಹೇರಲು ಮುಂದಾಗಿದ್ದಾರೆ. ಏಳು ಬಾರಿ ಶಾಸಕರಾಗಿರುವ ಎನ್.ವೈ. ಗೋಪಾಲಕೃಷ್ಣ ರಾಜ್ಯದ 5 ಹಿರಿಯ ಶಾಸಕರಲ್ಲಿ ಒಬ್ಬರಾಗಿದ್ದಾರೆ.

ನಾನು ಯಾರಿಗೂ ಕಾಲಿಗೆ ಬಿದ್ದು ಮಂತ್ರಿಗಿರಿ ಕೇಳಲ್ಲ. ಆದರೆ, ನಾನು ಸನ್ಯಾಸಿಯಲ್ಲ. ನನಗೂ ಆಸೆ ಆಕಾಂಕ್ಷೆಗಳಿವೆ ಎನ್ನುವ ಮೂಲಕ ಬಹಿರಂಗವಾಗಿ ಮಂತ್ರಿಗಿರಿಗೆ ಆಸೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮಂತ್ರಿ ಸ್ಥಾನ ಸಿಗದೇ ಹೋದರೆ ಮುಂದಿನ ನಡೆಯ ಕುರಿತು ಬೆಂಬಲಿಗರ ಜೊತೆ ಮತ್ತೆ ಸಭೆ ನಡೆಸಿ ತೀರ್ಮಾನ ಮಾಡುವ ಎಚ್ಚರಿಕೆ ನೀಡಿದ್ದಾರೆ.ಯಾರು ಅಯೋಗ್ಯರು?

ನಾನು ನೂರಾರು ಕೋಟಿಗಳ ಆಸ್ತಿ ಒಡೆಯ ನಮ್ಮಣ್ಣಂದಿರು ಸಾಯೋವರೆಗೂ ಕುಂತು ತಿನ್ನೋವಷ್ಟು ಆಸ್ತಿ ಮಾಡಿಟ್ಟಿದ್ದಾರೆ. ಹತ್ತಿಪ್ಪತ್ತು ಜನ ಸ್ವಾಮೀಜೀಗಳನ್ನು ಕರೆಸಿ ಕಾಲಿಗೆ ಬಿದ್ದು, ಅದೇನೋ ವಾಸ್ ಕೋಟ್ ಹಾಕಿಕೊಂಡು ಅಲ್ಲಾಡಿಸಿಕೊಂಡು ಓಡಾಡೋನಲ್ಲ. ನನಗೇನಿದ್ದರೂ ತಂದೆ ತಾಯಿ ಆರ್ಶೀವಾದ. ಕ್ಷೇತ್ರದ ಜನರ ಆರ್ಶೀವಾದ ಇದ್ದರೆ ಸಾಕು ಎಂಬಂತೆ ಮಾತನಾಡಿರುವ ಮೊಳಕಾಲ್ಮೂರು ಕ್ಷೇತ್ರದ ಶಾಸಕರು ಯಾರನ್ನು ಉದ್ದೇಶಿಸಿ ಹೇಳಿದ್ದಾರೆ ಎಂಬುದು ಇದೀಗ ಜಿಲ್ಲೆಯಲ್ಲಿ ವ್ಯಾಪಕ ಚರ್ಚೆ ಹುಟ್ಟು ಹಾಕಿದೆ. ಇವರ ಹೇಳಿಕೆಗೂ ಮುನ್ನ ಚಳ್ಳಕೆರೆ ಶಾಸಕ ರಘುಮೂರ್ತಿಯವರು ತಮ್ಮ 64ನೇ ಹುಟ್ಟು ಹಬ್ಬಕ್ಕೆ ಸ್ವಾಮೀಜಿಗಳನ್ನು ಕರೆಸಿ ಕಾಲಿಗೆ ಮುಗಿದಿದ್ದಾರೆ. ವಾಸ್ ಕೋಟ್ ಹಾಕುವವರೂ, ಕೊರಳಿಗೆ ಟವಲ್ ಹಾಕುವವರೂ ರಘುಮೂರ್ತಿ ಅವರೇ. ಅಯೋಗ್ಯರ ಕಾಲಿಗೆ ಮುಗಿಯುವುದಿಲ್ಲ ಎಂದಿರುವುದು ಸಾರ್ವಜನಿಕ ವಲಯದಲ್ಲಿ ದೊಡ್ಡ ಚರ್ಚೆಗೆ ಪುಷ್ಟಿ ನೀಡಿದೆ. ಆದರೆ, ಶಾಸಕ ರಘುಮೂರ್ತಿಯವರು ಮಾತ್ರ ಮೌನಕ್ಕೆ ಶರಣಾಗಿದ್ದಾರೆ. ಈ ಕುರಿತು ಪ್ರತಿಕ್ರಿಯೆಗೆ ಮಾತನಾಡಿಸಿದಾಗ ನನ್ನದೇನಿದ್ದರೂ ಅಭಿವೃದ್ಧಿ ಕುರಿತ ಚಿಂತನೆ. ನಾನು ಮಾಡಿದ ಕೆಲಸಗಳೇ ನನಗೆ ಶ್ರೀರಕ್ಷೆ ಎನ್ನುತ್ತಾರೆ.