ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ನಾಥ ಪಂಥದ ಯೋಗಿ ಗೋರಕ್ಷನಾಥರಿಂದ ನಿರ್ಮಿತ, ಹಿಂದಿನ ಕಾಲದಲ್ಲಿ ಸ್ಥಳೀಯ ಪ್ರದೇಶಕ್ಕೆ ಜಲಮೂಲವಾಗಿದ್ದ ಗುಜ್ಜರಕೆರೆಯ ನೀರು ಪ್ರಸ್ತುತ ಕುಡಿಯಲು ಬಿಡಿ, ಮುಟ್ಟಲೂ ಯೋಗ್ಯವಾಗಿಲ್ಲ. ಒಂದು ಕಾಲದಲ್ಲಿ ಪಾವಿತ್ರ್ಯತೆ ಪಡೆದಿದ್ದ ಗುಜ್ಜರಕೆರೆಗೆ ಕೆಲ ವರ್ಷಗಳಿಂದ ಡ್ರೈನೇಜ್ ನೀರು ಹರಿದು ವಿಷಕಾರಿಯಾಗಿದೆ. ಮತ್ತೆ ಗುಜ್ಜರಕೆರೆ ಶುದ್ಧಗೊಂಡು ಅದರ ಗತ ವೈಭವ ಮರಳಿಸುವ ಕಾರ್ಯ ಆಗಬೇಕು ಎಂಬ ಬೇಡಿಕೆ ಮಾತ್ರ ಅರಣ್ಯ ರೋದನವಾಗಿದೆ.ಸ್ಮಾರ್ಟ್ ಸಿಟಿ ವತಿಯಿಂದ ಕೋಟಿಗಟ್ಟಲೆ ರು. ವ್ಯಯಿಸಿ ಕೆರೆಯ ಅಭಿವೃದ್ಧಿ ಮಾಡಿದರೂ ಹೊರಗೆ ಮಾತ್ರ ಅಲಂಕಾರ, ಒಳಗೆ ಅದೇ ಗಲೀಜು ನೀರು. ಪರಿಸರದ ಒಳಚರಂಡಿ ಅವ್ಯವಸ್ಥೆಯ ಬಗ್ಗೆ ಕ್ರಮ ಕೈಗೊಳ್ಳದೆ ಇರುವುದೇ ಈ ಸ್ಥಿತಿಗೆ ಪ್ರಮುಖ ಕಾರಣ.
ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆ ವತಿಯಿಂದ ಹಲವಾರು ಬಾರಿ ಕೆರೆಯ ನೀರನ್ನು ವೈಜ್ಞಾನಿಕವಾಗಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಕೆರೆಯ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂಬ ವರದಿಯೇ ಬರುತ್ತಿದೆ.ಕೆರೆಯು ಮೇಲ್ನೋಟಕ್ಕೆ ನಯನ ಮನೋಹರವಾಗಿ ಕಂಡರೂ ಕೆರೆಯ ನೀರಿನ ಸಂರಕ್ಷಣೆ, ಕೆರೆಯ ಐತಿಹಾಸಿಕ, ಧಾರ್ಮಿಕ ಮಹತ್ವದ ಸಂರಕ್ಷಣೆಗೆ ಆದ್ಯತೆ ನೀಡಿಲ್ಲ. ಶತ ಶತಮಾನಗಳ ಐತಿಹ್ಯವುಳ್ಳ ಬೋಳಾರ ಹಳೆಕೋಟೆ ಶ್ರೀ ಮಾರಿಯಮ್ಮ ದೇವಾಲಯದ ತೀರ್ಥ ಕೆರೆಯೂ ಇದಾಗಿದ್ದು, ಕೆರೆಯ ಮಧ್ಯ ಭಾಗದಲ್ಲಿ ತೀರ್ಥ ಕೆರೆಯ ನಿರ್ಮಾಣ ಮತ್ತು ಕೆರೆಯ ಪರಿಸರದ ಮಹತ್ವಕ್ಕೆ ಅನುಗುಣವಾಗಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಆದ್ಯತೆ ನೀಡಿಲ್ಲ ಎಂಬ ಆರೋಪ ಸ್ಥಳೀಯರದ್ದು.
ಇಚ್ಛಾಶಕ್ತಿ ಕೊರತೆ:ದಶಕಗಳ ಹಿಂದೆ ವೇದಿಕೆ ವತಿಯಿಂದ ಪ್ರಶ್ನಾ ಚಿಂತನೆ ನಡೆಸಲಾಗಿದ್ದು, ಅದರಲ್ಲಿ ಗೋಚರಿಸಿದ ವಿಚಾರಗಳಿಗೆ ಪೂರಕವಾಗಿ ಅಭಿವೃದ್ಧಿ ನಡೆಸಿ ಕೆರೆಯ ಧಾರ್ಮಿಕ ಮಹತ್ವದ ಗತ ವೈಭವ ಪುನರ್ ರೂಪಿಸಲು ಹೆಜ್ಜೆ ಇಡದೆ ಕೇವಲ ಕಾಂಕ್ರಿಟೀಕೃತ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಇದೆಲ್ಲವೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಂದ ಖಂಡಿತಾ ಸಾಧ್ಯವಿದೆ. ಆದರೆ ಇಚ್ಛಾಶಕ್ತಿ ಬೇಕಿದೆ ಎಂದು ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ನೇಮು ಕೊಟ್ಟಾರಿ ಹೇಳಿದ್ದಾರೆ.
ಮೋಜು ಮಸ್ತಿಯ ತಾಣ:ಐತಿಹಾಸಿಕ, ಧಾರ್ಮಿಕ ಮಹತ್ವದ ಜತೆಗೆ ಅಂತರ್ಜಲ ಸಂರಕ್ಷಣೆಗೆ ಮಹತ್ವದ ಕೊಡುಗೆ ನೀಡುವ ಈ ತೀರ್ಥ ಕೆರೆಯು ಪ್ರಸ್ತುತ ಹರೆಯದ ಯುವಕ ಯುವತಿಯರ ಮೋಜು- ಮಸ್ತಿ ತಾಣವಾಗಿ ಪರಿವರ್ತಿತವಾಗಿದೆ. ಕೆರೆಯ ಪರಿಸರಕ್ಕೆ ರಾತ್ರಿ ವೇಳೆ ಯುವಕ ಯುವತಿಯರು ಆಗಮಿಸಿ ಅನೈತಿಕವಾಗಿ ವರ್ತಿಸುವುದು ಸಾಮಾನ್ಯವಾಗಿದೆ. ಕೆರೆ ನೀರಿಗೆ ಪ್ಲಾಸ್ಟಿಕ್ ವಸ್ತು, ಕಸ ಎಸೆಯುವುದು ಕಂಡುಬರುತ್ತಿದೆ. ಇದರ ವಿರುದ್ಧ ಕ್ರಮ ಕೈಗೊಂಡು ಕೆರೆಯ ಒಳ ಪರಿಸರಕ್ಕೆ ಸಮಯದ ಮಿತಿ, ಪ್ರವೇಶ ನಿಬಂಧನೆಗಳನ್ನು ಅಗತ್ಯವಾಗಿ ರೂಪಿಸಬೇಕು ಎಂಬ ಒತ್ತಾಯವಿದೆ.
ಕೆರೆಯ ಸುತ್ತ ಬಫರ್ ಝೋನ್ ಅಳವಡಿಕೆ, ಒತ್ತುವರಿ ತೆರವು ಇನ್ನಿತರ ರೀತಿಯಲ್ಲಿ ಕೆರೆ ಪರಿಸರದ ಸಂರಕ್ಷಣೆ ಮಾಡಲು ಸಾಮರ್ಥ್ಯವಿರದ ಸಂಬಂಧಿತ ಇಲಾಖೆಗಳು ಸಣ್ಣ ಪುಟ್ಟ ರೀತಿಯಲ್ಲಿಯೂ ಕೆರೆಯ ಪರಿಸರದ ಸಂರಕ್ಷಣೆಗೆ ಯಾವುದೇ ರೀತಿ ಒತ್ತು ನೀಡಿಲ್ಲ.ಈ ಎಲ್ಲ ಸಮಸ್ಯೆಗಳ ನಡುವೆ ಈ ಪವಿತ್ರ ತೀರ್ಥಕೆರೆಯ ಗತ ವೈಭವವನ್ನು ಮರುಕಳಿಸಲು ಮತ್ತು ಕೆರೆಯ ತೀರ್ಥದ ಪಾವಿತ್ರ್ಯತೆ ಕಾಪಾಡಲು ಆದಷ್ಟು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ನೇಮು ಕೊಟ್ಟಾರಿ ಒತ್ತಾಯಿಸಿದ್ದಾರೆ.
---------ಗುಜ್ಜರಕೆರೆ ಸುತ್ತಮುತ್ತಲಿನ ಒಳಚರಂಡಿ ಜಾಲವನ್ನು ಸಂಪೂರ್ಣವಾಗಿ ಬದಲಿಸಿದ್ದೇವೆ. ಮ್ಯಾನ್‌ಹೋಲ್‌ಗಳನ್ನು ಹೊಸದಾಗಿ ನಿರ್ಮಿಸಲಾಗಿದೆ. ಪರಿಸರದ ಎಲ್ಲ ಮನೆಗಳ ತ್ಯಾಜ್ಯ ಸಂಪರ್ಕವನ್ನು ಒಳಚರಂಡಿ ಜಾಲಕ್ಕೆ ಸಂಪರ್ಕಿಸಲಾಗಿದೆ. ನಮ್ಮ ಕಡೆಯಿಂದ ಸಾಧ್ಯವಾದ ಎಲ್ಲ ಪ್ರಯತ್ನಗಳನ್ನು ಮಾಡಿದ್ದೇವೆ. ಕೆರೆಯ ಒಸರಿನ ವೇಗ ಹೆಚ್ಚಿದ್ದು ಬೇರೆ ಎಲ್ಲಿಂದಾದರೂ ಕಲುಷಿತ ನೀರು ಬರುತ್ತಿದೆಯೇ ಎಂಬುದನ್ನು ತಜ್ಞರ ಮೂಲಕ ಪತ್ತೆಹಚ್ಚುವ ಕಾರ್ಯ ಮಾಡಿದರೆ ಸಮಸ್ಯೆಗೆ ಪರಿಹಾರ ಕಂಡುಹಿಡಿಯಬಹುದು.- ಪ್ರೇಮಾನಂದ ಶೆಟ್ಟಿ, ಮಾಜಿ ಮೇಯರ್.