ಸಾರಾಂಶ
ರಮೇಶ್ ಬಿದರಕೆರೆ
ಕನ್ನಡಪ್ರಭ ವಾರ್ತೆ ಹಿರಿಯೂರುಸುಮಾರು 30 ವರ್ಷಕ್ಕೂ ಹೆಚ್ಚಿನ ಅವಧಿಯಿಂದ ರಸ್ತೆ, ನೀರು, ಚರಂಡಿ, ಆಸ್ಪತ್ರೆಯಿಲ್ಲದೇ ಅರಣ್ಯದ ಮದ್ಯೆ ಬದುಕಿದ ತಾಲೂಕಿನ ನಜೀರ್ ಕಾಲೋನಿಯ 30ಕ್ಕೂ ಹೆಚ್ಚು ಕುಟುಂಬಗಳು ಇದೀಗ ಸರ್ಕಾರಿ ನಿಯಮಗಳಂತೆಯೇ ಕಾಲೋನಿಯನ್ನು ಬೇರೆ ಪಂಚಾಯಿತಿಗೆ ಸ್ಥಳಾಂತರ ಮಾಡಿ ಕೊಡಿ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ತಾಲೂಕಿನ ಗೌಡನಹಳ್ಳಿ ಗ್ರಾಪಂ ವ್ಯಾಪ್ತಿಯ ನಜೀರ್ ಕಾಲೋನಿಯ ಸುಮಾರು 30ಕ್ಕೂ ಹೆಚ್ಚು ಕುಟುಂಬಗಳು ಅರಣ್ಯ ಭೂಮಿಯಲ್ಲಿ ಬಗರ್ ಹುಕುಂ ಸಾಗುವಳಿ ಮಾಡಿಕೊಂಡು ವಾಸವಾಗಿದ್ದಾರೆ. ಈ ಕಾಲೋನಿಯ ಜನರು ಅರಣ್ಯ ಪ್ರದೇಶದಲ್ಲಿ 3 ದಶಕಕ್ಕೂ ಹೆಚ್ಚು ಕಾಲದಿಂದ ಇದ್ದು ಸದರಿ ಪ್ರದೇಶವು 2001ಕ್ಕಿಂತ ಮುಂಚೆ ಹುಲ್ಲುಬನ್ನಿ ಖರಾಬಿನ ಭೂಮಿ ಆಗಿತ್ತು. 1995ರಲ್ಲಿ 52 ಜನ ಬಗರ್ ಹುಕುಂ ಸಾಗುವಳಿದಾರರಿಗೆ 4 ಎಕರೆಯಂತೆ ಜಮೀನು ಮಂಜೂರು ಆಗಿದ್ದು ಇದುವರೆಗೂ ಅವರಿಗೆ ಸಾಗುವಳಿ ಚೀಟಿ, ಹಕ್ಕುಪತ್ರ ನೀಡಿಲ್ಲ. 2001ರಲ್ಲಿ ಸದರಿ ಭೂಮಿಯು ಅರಣ್ಯ ಇಲಾಖೆಗೆ ಹಸ್ತಾಂತರವಾಗಿದೆ. ಈ ಗ್ರಾಮಕ್ಕೆ ಇದುವರೆಗೂ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ಚರಂಡಿ, ಶಾಲೆ ಬಸ್ ವ್ಯವಸ್ಥೆ, ಆಸ್ಪತ್ರೆಯಂತಹ ಯಾವುದೇ ರೀತಿಯ ಸೌಲಭ್ಯಗಳು ದೊರಕಿಲ್ಲ. ಸದರಿ ಭೂಮಿಗೆ ಟಿಟಿಯನ್ನು ಸಹ ಕಟ್ಟಲಾಗಿದ್ದು ಅಲ್ಲಿನ ಜನರೇ ತಮ್ಮ ಸ್ವಂತ ಖರ್ಚಿನಲ್ಲಿ ಮಸೀದಿ ನಿರ್ಮಿಸಿ ಕೊಂಡಿದ್ದಾರೆ. ಸರ್ಕಾರದಿಂದ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಿಕೊಡಿ ಎಂದು ಇದುವರೆಗೂ ನೂರಾರು ಅರ್ಜಿಗಳನ್ನು ನೀಡಲಾಗಿದ್ದು ಯಾವುದೇ ಪ್ರಯೋಜನವಾಗಿಲ್ಲ. ಕಾಲೋನಿಯ ಜಾಗ ಅರಣ್ಯ ವ್ಯಾಪ್ತಿಗೆ ಬರುವುದರಿಂದ ಅಲ್ಲಿ ವಾಸಿಸುವ ಮನೆಗಳನ್ನಾಗಲಿ, ಜಮೀನುಗಳನ್ನಾಗಲಿ ಹೆಸರಿಗೆ ಮಾಡಲು ಬರುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ನಜೀರ್ ಕಾಲೋನಿ ನಿವಾಸಿಗಳು ತಮ್ಮ ಅಳಲು ತೋಡಿಕೊಳ್ಳುತ್ತಾರೆ. ಈಗಾಗಲೇ ಕೋರ್ಟ್ ಆದೇಶದಂತೆ ನಜೀರ್ ಕಾಲೋನಿಯನ್ನು ಕೂಡಲೇ ಸ್ಥಳಾoತರ ಮಾಡಿಕೊಳ್ಳಿ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಅಧಿಕಾರಿಗಳ ಮಾತಿನಂತೆ ನಜೀರ್ ಕಾಲೋನಿಯ ನಿವಾಸಿಗಳು ಕಸಬಾ ಹೋಬಳಿಗೆ ಒಳಪಡುವ ಕಾತ್ರಿಕೇನಹಳ್ಳಿಯ ಸರ್ವೇ.ನo.53 ರಲ್ಲಿನ 107 ಎಕರೆ ಹಾಗೂ ಸರ್ವೇ.ನo.54ರಲ್ಲಿನ 87 ಎಕರೆ ಸರ್ಕಾರಿ ಜಮೀನಿನಲ್ಲಿ ಕಾಲೋನಿ ನಿರ್ಮಿಸಿಕೊಳ್ಳಲು ಅನುವು ಮಾಡಿಕೊಟ್ಟರೆ ಮಾತ್ರ ಇಡೀ ಕಾಲೋನಿಯನ್ನು ಸಂಪೂರ್ಣ ಸ್ಥಳಾಂತರ ಮಾಡಿಕೊಳ್ಳುತ್ತೇವೆ ಎಂದು ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಮನವರಿಕೆ ಮಾಡುತ್ತಿದ್ದಾರೆ. ಅಧಿಕಾರಿಗಳ ಮತ್ತು ಸರ್ಕಾರದ ಮುಂದಿನ ನಿರ್ಧಾರಗಳ ಮೇಲೆ ನಜೀರ್ ಕಾಲೋನಿ ಜನರ ಬದುಕು ಭವಿಷ್ಯ ನಿಂತಿದೆ.
---ಬಾಕ್ಸ್:
ನಜೀರ್ ಕಾಲೋನಿ ಜನರಿಗೆ ಮೂಲ ಸೌಕರ್ಯ ಕಲ್ಪಿಸಿ:ರಾಜ್ಯ ರೈತ ಸಂಘದ ರಾಜ್ಯ ವಿಭಾಗೀಯ ಉಪಾಧ್ಯಕ್ಷ ಕೆ.ಸಿ.ಹೊರಕೇರಪ್ಪ ಮಾತನಾಡಿ, ತಾಲೂಕಿನ ಗೌಡನಹಳ್ಳಿ ಗ್ರಾಪಂ ವ್ಯಾಪ್ತಿಯ ನಜೀರ್ ಕಾಲೋನಿ ಗ್ರಾಮದ ಜನತೆ ಹುಲ್ಲು ಬನ್ನಿ ಕರಾಬು ಜಮೀನಿನಲ್ಲಿ ಸುಮಾರು 40 ವರ್ಷಗಳಿಂದ 3-4 ಎಕರೆ ಭೂಮಿ ಸಾಗುವಳಿ ಮಾಡಿಕೊಂಡು ಸುಮಾರು 30 ರಿಂದ 35 ವಾಸದ ಮನೆಗಳನ್ನು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅನೇಕ ರೈತರಿಗೆ ಸುಮಾರು 3-4 ಎಕರೆ ಜಮೀನು ಮುಂಜೂರು ಮಾಡಿದ್ದು 2001 ರಿಂದ ಸದರಿ ಭೂಮಿಯನ್ನು ಸರ್ಕಾರ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ. ನಜೀರ್ ಕಾಲೋನಿಯು ಕುಡಿಯುವ ನೀರು, ರಸ್ತೆ, ಚರಂಡಿ,ವಿದ್ಯುತ್ ನಂತಹ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಈ ಕಾಲೋನಿಗೆ ಮೂಲಭೂತ ಸೌಕರ್ಯ ಕಲ್ಪಿಸಿ ಅಭಿವೃದ್ಧಿ ಪಡಿಸಲು ಕ್ಷೇತ್ರದ ಶಾಸಕರು ಮುಂದಾದರು ಸಹ ಅರಣ್ಯ ಇಲಾಖೆಯ ಕಾನೂನುಗಳಿಂದ ಅಡ್ಡಿ ಉಂಟಾಗುತ್ತಿದ್ದು ಸರ್ಕಾರ ಮತ್ತು ಜಿಲ್ಲಾಡಾಳಿತ ಕೂಡಲೇ ನಜೀರ್ ಕಾಲೋನಿ ಗ್ರಾಮಸ್ಥರಿಗೆ ಪರ್ಯಾಯ ಭೂಮಿ, ವಸತಿ ಸೌಕರ್ಯ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
(ಪೋಟೋ ಬಳಸಿ)ಆಸ್ಪತ್ರೆಗೆ ತೆರಳಲು ಸಾರಿಗೆ ಸೌಲಭ್ಯದ ಕೊರತೆ:
ನಜೀರ್ ಕಾಲೋನಿಯ ಜನರು ಮೂರ್ನಾಲ್ಕು ದಶಕಗಳಿಂದ ಅನುಭವಿಸಿರುವ ಯಾತನೆಗಳು ಒಂದೆರಡಲ್ಲ. ಸಂಜೆ 6 ಗಂಟೆಯ ನಂತರ ಅದೇ ಬೇರೆ ಪ್ರಪಂಚ. ಕಾಡಿನ ಮದ್ಯೆ ಕತ್ತಲಲ್ಲಿ ಕಾಡುಪ್ರಾಣಿಗಳ ಹಾವಳಿ ನಡುವೆ ಹತ್ತಾರು ವರ್ಷಗಳ ಕಾಲ ಬದುಕಿದ್ದಾರೆ. ಸಂಜೆ 6ಕ್ಕೆ ಅವರ ದಿನ ಮುಗಿಯುತ್ತದೆ. ಬಸ್, ಶಾಲೆಗಳಿಲ್ಲದೆ ಅವರ ಮಕ್ಕಳು ಸಹ ಅನಕ್ಷರಸ್ಥರಾಗುವಂತಹ ಪರಿಸ್ಥಿತಿ ಇದೆ. ಪಕ್ಕದ ಊರುಗಳಿಗೆ ಶಾಲೆಗೆ ಕಳಿಸಲು ರಸ್ತೆ ಇಲ್ಲ, ಇರುವ ರಸ್ತೆಯಲ್ಲಿಯೇ ಕಳಿಸಲು ಪ್ರಾಣಿಗಳ ಹಾವಳಿ. ಮತದಾನಕ್ಕೆ ಒಂದು ಹಳ್ಳಿ, ರೇಷನ್ ಪಡೆಯಲು ಒಂದು ಹಳ್ಳಿಗೆ ಹೋಗಬೇಕಾಗಿದೆ. ಹಸುಗೂಸುಗಳು, ವೃದ್ಧರನ್ನು ಕಟ್ಟಿಕೊಂಡು ಅವರು ಇಲ್ಲಿಯವರೆಗೆ ಅಲ್ಲಿ ಜೀವನ ಮಾಡಿದ್ದೇ ಸಾಧನೆ ಎಂಬಂತಾಗಿದೆ. ಕತ್ತಲಾದ ಮೇಲೆ ಆರೋಗ್ಯ ಕೆಡಬಾರದು ಎಂದು ಅವರು ದಿನವೂ ಬೇಡುವ ಪರಿಸ್ಥಿತಿ. ಏಕೆಂದರೆ ಅಲ್ಲಿಂದ ಆಸ್ಪತ್ರೆ ತಲುಪಲು ಆಟೋ, ಬಸ್ ಯಾವ ಸೌಲಭ್ಯವೂ ತಕ್ಷಣಕ್ಕೆ ಸಿಗುವುದಿಲ್ಲ. ಇನ್ನಾದರೂ ಅವರಿಗೆ ಕಾನೂನು ಪ್ರಕಾರವಾಗಿ ಶಾಶ್ವತ ವಸತಿ ಮತ್ತು ಮೂಲಭೂತ ಸೌಕರ್ಯ ಗಳು ಸಿಗುವಂತಾಗಲಿ ಎಂದು ರೈತ ಮುಖಂಡರು ಮನವಿ ಮಾಡಿದ್ದಾರೆ.