ಬಾಗಲಕೋಟೆಯಿಂದ ವೀಣಾ ಕಾಶಪ್ಪನವರ್‌ ಬಂಡಾಯ ಸ್ಪರ್ಧೆ?

| Published : Mar 23 2024, 01:02 AM IST / Updated: Mar 23 2024, 12:46 PM IST

Veena Kashappanavar
ಬಾಗಲಕೋಟೆಯಿಂದ ವೀಣಾ ಕಾಶಪ್ಪನವರ್‌ ಬಂಡಾಯ ಸ್ಪರ್ಧೆ?
Share this Article
  • FB
  • TW
  • Linkdin
  • Email

ಸಾರಾಂಶ

ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಕೈತಪ್ಪಿದ ಹಿನ್ನೆಲೆಯಲ್ಲಿ ಶುಕ್ರವಾರ ವೀಣಾ ಕಾಶಪ್ಪನವರ್‌ ಅವರ ಬೆಂಬಲಿಗರು ಮತ್ತು ಹಿತೈಷಿಗಳು ಸಭೆ ನಡೆಸಿದ್ದು, ಮುಂದಿನ ರಾಜಕೀಯ ನಡೆ ಕುರಿತು ಚರ್ಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಕೈತಪ್ಪಿದ ಹಿನ್ನೆಲೆಯಲ್ಲಿ ಶುಕ್ರವಾರ ವೀಣಾ ಕಾಶಪ್ಪನವರ್‌ ಅವರ ಬೆಂಬಲಿಗರು ಮತ್ತು ಹಿತೈಷಿಗಳು ಸಭೆ ನಡೆಸಿದ್ದು, ಮುಂದಿನ ರಾಜಕೀಯ ನಡೆ ಕುರಿತು ಚರ್ಚಿಸಿದ್ದಾರೆ. 

ಈ ವೇಳೆ ಎರಡು ದಿನ ಕಾದು ನೋಡಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ವೀಣಾ ಪರ ಅವರ ಪತಿ ವಿಜಯಾನಂದ ಕಾಶಪ್ಪನವರ್‌ ತಿಳಿಸಿದ್ದಾರೆ. ಈ ಮೂಲಕ ಬಂಡಾಯ ಸ್ಪರ್ಧೆಯ ಸುಳಿವು ನೀಡಿದ್ದಾರೆ.

ಬಾಗಲಕೋಟೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬದಲಿಸಬೇಕು, ಇಲ್ಲಾ ಬಂಡಾಯ ಸ್ಪರ್ಧೆ ನಡೆಯಬೇಕು ಎಂದು ಅಭಿಮಾನಿಗಳು ಸಭೆಯಲ್ಲಿ ಒತ್ತಾಯಿಸಿದ್ದು, ಒಂದು ವೇಳೆ ಅಭ್ಯರ್ಥಿ ಬದಲಾಗದಿದ್ದರೆ ಬೆಂಬಲಿಗರ ನಿರ್ಧಾರದಂತೆ ಮುಂದಿನ ನಡೆ ಅನುಸರಿಸುತ್ತೇವೆ ಎಂದು ವೀಣಾ ಹೇಳಿದ್ದಾರೆ.

ಕಣ್ಣೀರು ಹಾಕಿದ ವೀಣಾ: ನಿಮ್ಮ ಮಗಳಾಗಿ ಜಿಲ್ಲೆಯ ಜನರ ಧ್ವನಿಯಾಗಬೇಕು ಎಂಬ ಆಸೆ ನನ್ನದು. ಆದರೆ ದುಡಿದವರನ್ನು ಬಿಟ್ಟು, ಹೊರಗಿನವರಿಗೆ ಪಕ್ಷ ಮಣೆ ಹಾಕಿದೆ. ಇದು ಎಷ್ಟು ಸರಿ ಎಂದು ಕಾಂಗ್ರೆಸ್ ಟಿಕೆಟ್ ವಂಚಿತೆ ವೀಣಾ ಸಭೆಯಲ್ಲೇ ಕಣ್ಣೀರು ಹಾಕಿದರು.

ಜಿಪಂ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಪಕ್ಷ ಸೂಚಿಸಿ, 2019ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಆದೇಶ ಮಾಡಿತ್ತು. ಅವರ ಮಾತಿನಂತೆ ಅಂದು ನಡೆದುಕೊಂಡಿದ್ದೆ. 

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಏಕೈಕ ಮಹಿಳಾ ಅಭ್ಯರ್ಥಿ ನಾನಾಗಿದ್ದೆ. ಅಂದಿನಿಂದ ಇಲ್ಲಿಯವರೆಗೆ ಬಂದ ಎಲ್ಲ ಅವಕಾಶಗಳನ್ನು ಜಿಲ್ಲೆಯ ಜನರಿಗಾಗಿ ಬಿಟ್ಟು, ಲೋಕಸಭೆಯಲ್ಲಿ ಸ್ಪರ್ಧೆಗೆ ತಯಾರು ಮಾಡಿದೆ.

ಆದರೆ, ಈಗ ಪಕ್ಷ ಬೇರೆ ಜಿಲ್ಲೆಯವರಿಗೆ ಟಿಕೆಟ್ ನೀಡಿದೆ. ಏಕೆ ಜಿಲ್ಲೆಯಲ್ಲಿ ಚುನಾವಣೆ ಎದುರಿಸುವ ಸಮರ್ಥ ನಾಯಕರು ರಾಜ್ಯ ನಾಯಕರಿಗೆ ಕಾಣಲಿಲ್ಲವೇ ಎಂದು ಅವರು ಪ್ರಶ್ನಿಸಿದರು.

2 ದಿನಗಳಲ್ಲಿ ನಡೆ ತಿಳಿಸ್ತೇವೆ: ಶಾಸಕ ವಿಜಯಾನಂದ ಕಾಶಪ್ಪನವರ್‌ ಮಾತನಾಡಿ, ನಾವು ಹುಟ್ಟಿದ್ದು, ಬೆಳೆದಿದ್ದು ಕಾಂಗ್ರೆಸ್‌ನಲ್ಲಿ. ಕೊನೆಗೊಂದು ದಿನ ಸಾಯುವುದು ಇಲ್ಲೇ. 

50 ವರ್ಷಗಳಿಂದ ಪಕ್ಷ ಸಂಘಟನೆ ಮಾಡಿದ ಕುಟುಂಬದ ಸೊಸೆ ವೀಣಾ ಕಾಶಪ್ಪನವರ್‌ ಅವರಿಗೆ ಬಿಟ್ಟು, ಬೇರೆಯವರಿಗೆ ಟಿಕೆಟ್ ನೀಡಿರುವುದು ನಮಗೆ ನೋವು ತಂದಿದೆ. ಹೀಗಾಗಿ ಎರಡು ದಿನಗಳಲ್ಲಿ ನಮ್ಮ ನಡೆ ತಿಳಿಸುತ್ತೇವೆ ಎಂದರು.