ಮತದಾರರು ಅವಕಾಶ ಕಲ್ಪಿಸಿದರೆ ಹಾವೇರಿ ಕ್ಷೇತ್ರದ ವಿಕಾಸಕ್ಕೆ ಶ್ರಮಿಸುವೆ-ಆನಂದಸ್ವಾಮಿ

| Published : Apr 02 2024, 01:01 AM IST

ಸಾರಾಂಶ

ಕ್ಷೇತ್ರದ ಕಾಂಗ್ರೆಸ್ ಶಾಸಕರು, ಮುಖಂಡರು, ಕಾರ್ಯಕರ್ತರ ಒಮ್ಮತದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆ, ಸವಾಲುಗಳನ್ನು ಅರಿತಿದ್ದೇನೆ. ಅವಕಾಶ ನೀಡಿದರೆ ಖಂಡಿತವಾಗಿಯೂ ಕ್ಷೇತ್ರದ ವಿಕಾಸಕ್ಕೆ ಶ್ರಮಿಸುವೆ ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಆನಂದಸ್ವಾಮಿ ಗಡ್ಡೇದೇವರಮಠ ಹೇಳಿದರು.

ಹಾನಗಲ್ಲ: ಕ್ಷೇತ್ರದ ಕಾಂಗ್ರೆಸ್ ಶಾಸಕರು, ಮುಖಂಡರು, ಕಾರ್ಯಕರ್ತರ ಒಮ್ಮತದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆ, ಸವಾಲುಗಳನ್ನು ಅರಿತಿದ್ದೇನೆ. ಅವಕಾಶ ನೀಡಿದರೆ ಖಂಡಿತವಾಗಿಯೂ ಕ್ಷೇತ್ರದ ವಿಕಾಸಕ್ಕೆ ಶ್ರಮಿಸುವೆ ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಹೇಳಿದರು.

ತಾಲೂಕಿನ ಸಾವಿಕೇರಿ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದ ಲೋಕಸಭಾ ಚುನಾವಣೆ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಔದ್ಯೋಗಿಕ, ಶೈಕ್ಷಣಿಕವಾಗಿ ನಾನಾ ಕಾರ್ಯಕ್ರಮ ರೂಪಿಸುವ ಉದ್ದೇಶ ಹೊಂದಿದ್ದೇನೆ. ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.

ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ಕಾರ್ಯಕ್ರಮ, ಯೋಜನೆ, ಕೆಲಸದ ಆಧಾರದ ಬದಲಿಗೆ ಭಾವನಾತ್ಮಕ ವಿಷಯ ತೇಲಿ ಬಿಟ್ಟು, ಜನರನ್ನು ಒಡೆದು ಆಳುವ ಮೂಲಕ ಮತ ಕೇಳುವ ಪದ್ಧತಿ ಆರಂಭವಾಗಿರುವುದು ಆಘಾತಕಾರಿ ಸಂಗತಿಯಾಗಿದ್ದು, ಯೋಚಿಸಿ, ಚರ್ಚಿಸಿ ಸಂವಿಧಾನದ ಮೌಲ್ಯ ಹೆಚ್ಚಿಸಿ, ಎಲ್ಲರನ್ನೂ ಸಮಾನವಾಗಿ ಕಾಣುವ ಕಾಂಗ್ರೆಸ್ ಬೆಂಬಲಿಸುವಂತೆ ಮನವಿ ಮಾಡಿದರು. ಶರಣರು, ಸಂತರು, ಸೂಫಿಗಳು ನಮಗೆಲ್ಲರಿಗೂ ಒಂದಾಗಿ ಬಾಳುವ ಸಂದೇಶ ನೀಡಿದ್ದಾರೆ. ವಿಶ್ವಗುರು ಬಸವಣ್ಣನ ಪರಿಕಲ್ಪನೆಯಂತೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನವೂ ಸಮ ಸಮಾಜ ನಿರ್ಮಾಣದ ಉದ್ದೇಶ ಹೊಂದಿದೆ. ಆದರೆ ಇಂಥ ಪರಿಕಲ್ಪನೆಗೆ ತದ್ವಿರುದ್ಧವಾಗಿ ನಡೆದುಕೊಂಡು ಸಂವಿಧಾನದ ಆಶಯಗಳಿಗೆ ಧಕ್ಕೆ ಉಂಟು ಮಾಡುತ್ತಿರುವವರ ಬಗೆಗೆ ಎಚ್ಚರಿಕೆ ಬೇಕಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತ ಸಮೂಹದ ಸಾಲದ ಹೊರೆ ಇಳಿಸಿ ಋಣಮುಕ್ತರನ್ನಾಗಿಸಲಿದೆ. ಉದ್ಯಮಿಗಳು, ಶ್ರೀಮಂತರ ಸಾಲಮನ್ನಾ ಮಾಡುವ ವಿಷಯದಲ್ಲಿ ಉತ್ಸುಕತೆ ತೋರಿದ ಕೇಂದ್ರದ ಬಿಜೆಪಿ ಸರ್ಕಾರ ದೇಶದ ರೈತರ ಸಾಲಮನ್ನಾ ವಿಚಾರದಲ್ಲಿ ಒಮ್ಮೆಯೂ ಸಹ ಉತ್ಸುಕತೆ ತೋರಲಿಲ್ಲ. ರಾಜ್ಯದ ಬರ ಪರಿಹಾರಕ್ಕೆ ನಯಾಪೈಸೆ ನೀಡಲಿಲ್ಲ. ಇಂಥ ಸರ್ಕಾರ ಕಿತ್ತೆಸೆಯುವುದೇ ಎಲ್ಲ ಸಮಸ್ಯೆಗಳಿಗೂ ಪರಿಹಾರವಾಗಿದೆ ಎಂದರು.ಇದೇ ಸಂದರ್ಭದಲ್ಲಿ ಸಮ್ಮಸಗಿ ಗ್ರಾಮದ ವಿಎಸ್‌ಎಸ್ ಬ್ಯಾಂಕಿನ ಅಧ್ಯಕ್ಷ ನಾಗಪ್ಪ ಪೂಜಾರ, ಮುಖಂಡ ಮಾರುತಿ ಗೊಲ್ಲರ ಸೇರಿದಂತೆ ಹಲವರು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್‌ಗೆ ಸೇರ್ಪಡೆಯಾದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ, ಕೆಪಿಸಿಸಿ ಸದಸ್ಯರಾದ ಟಾಕನಗೌಡ ಪಾಟೀಲ, ಖ್ವಾಜಾಮೊಹಿದ್ದೀನ್ ಜಮಾದಾರ, ಮುಖಂಡರಾದ ಫಕ್ಕೀರಪ್ಪ ಹರಿಜನ, ಯಲ್ಲಪ್ಪ ಜಿಗಳಿಕೊಪ್ಪ, ಪರಶುರಾಮ್ ತಳವಾರ, ಭಾಷಾಸಾಬ ಹೊಂಡದ, ಮಾಲತೇಶ ಈಳಿಗೇರ, ಹೇಮಣ್ಣ ದೊಡ್ಡಮನಿ, ವಿನಾಯಕ ಕಮಾಟಿ, ಪರಶುರಾಮ ಈಳಿಗೇರ, ಮಹೇಂದ್ರ ಹೊಟ್ಟಣ್ಣನವರ, ಕುಬೇರ ಗಾಡಿಹುಚ್ಚನವರ, ರಾಘವೇಂದ್ರ ಹಾನಗಲ್, ಮಂಜುನಾಥ ಶೃಂಗೇರಿ, ಶೇಕಪ್ಪ ಕಲಮಿಟ್ಲ, ಶಿವಕುಮಾರ ಅಂಗಡಿ ಈ ಸಂದರ್ಭದಲ್ಲಿದ್ದರು.

ಕಾಂಗ್ರೆಸ್‌ ಸೇರ್ಪಡೆ: ಸಾವಿಕೇರಿಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಹಾಗೂ ಶಾಸಕ ಶ್ರೀನಿವಾಸ ಮಾನೆ ಸಮ್ಮುಖದಲ್ಲಿ ಹಲವರು ಕಾಂಗ್ರೆಸ್‌ಗೆ ಸೇರ್ಪಡೆಯಾದರು.