ಪಂಚಮಸಾಲಿ ಸಮಾಜವನ್ನು 2ಎ ವರ್ಗಕ್ಕೆ ಸೇರಿಸಲು ಶ್ರಮಿಸುವೆ: ಸಂಸದ ಈ.ತುಕಾರಾಂ

| Published : Nov 25 2025, 02:15 AM IST

ಪಂಚಮಸಾಲಿ ಸಮಾಜವನ್ನು 2ಎ ವರ್ಗಕ್ಕೆ ಸೇರಿಸಲು ಶ್ರಮಿಸುವೆ: ಸಂಸದ ಈ.ತುಕಾರಾಂ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಮೀಸಲಾತಿ ಪ್ರಮಾಣವನ್ನು ಶೇ.75ಕ್ಕೆ ಹೆಚ್ಚಿಸುವ ಕುರಿತಂತೆ ಚಿಂತನೆ ನಡೆದಿದೆ.

ಸಂಡೂರು: ರಾಜ್ಯದಲ್ಲಿ ಮೀಸಲಾತಿ ಪ್ರಮಾಣವನ್ನು ಶೇ.75ಕ್ಕೆ ಹೆಚ್ಚಿಸುವ ಕುರಿತಂತೆ ಚಿಂತನೆ ನಡೆದಿದೆ. ಪಂಚಮಸಾಲಿ ಸಮಾಜವನ್ನು 2 ಎ ವರ್ಗಕ್ಕೆ ಸೇರಿಸಲು ಪ್ರಮಾಣಿಕವಾಗಿ ಪ್ರಯಶ್ನಿಸುವುದಾಗಿ ಸಂಸದ ಈ. ತುಕಾರಾಂ ಅವರು ಭರವಸೆ ನೀಡಿದರು.

ಪಟ್ಟಣದ ಆದರ್ಶ ಕಲ್ಯಾಣ ಮಂಟಪದಲ್ಲಿ ಸೋಮವಾರ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚೆನ್ನಮ್ಮಾಜಿಯ 201ನೇ ವಿಜಯೋತ್ಸವ ಹಾಗೂ 247ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ, ಪಂಚಮಸಾಲಿ ಸಮಾಜವನ್ನು 2ಎ ವರ್ಗಕ್ಕೆ ಸೇರಿಸಬೇಕು ಎಂಬ ಪಂಚಮಸಾಲಿ ಸಮಾಜದ ಮುಖಂಡರ ಬೇಡಿಕೆಗೆ ಪ್ರತಿಕ್ರಿಯಿಸಿ ಅವರು ಮಾತನಾಡಿದರು.

ಕಿತ್ತೂರು ರಾಣಿ ಚೆನ್ನಮ್ಮನವರ ಧೈರ್ಯ, ಸಾಹಸ ಹಾಗೂ ದೇಶಭಕ್ತಿ ಎಲ್ಲರಿಗೂ ಆದರ್ಶವಾಗಿದೆ. ದೇಶ ಬ್ರಿಟೀಷರ ಆಳ್ವಿಕೆಯಲ್ಲಿ ನಲುಗಿತ್ತು. ಅಂತಹ ಸಂದರ್ಭದಲ್ಲಿ ಸ್ವಾತಂತ್ರ್ಯದ ಕಳಹೆಯನ್ನು ಮೊಳಗಿಸಿ, ಬ್ರಿಟಿಷರ ದತ್ತುಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯ ವಿರುದ್ಧ ಹೋರಾಡಿ, ವಿಜಯ ಸಾಧಿಸಿದರು. ಪಾಲಕರು ತಮ್ಮ ಮಕ್ಕಳಿಗೆ ಗುಣಾತ್ಮಕ ಹಾಗೂ ಮೌಲ್ಯಯುತವಾದ ಶಿಕ್ಷಣವನ್ನು ನೀಡಿ, ಅವರನ್ನು ದೇಶದ ಸತ್ಪçಜೆಗಳನ್ನಾಗಿಸಬೇಕಿದೆ. ಎಲ್ಲರೂ ಒಟ್ಟಾಗಿ ಉತ್ತಮ ಸಮಾಜ ನಿರ್ಮಿಸೋಣ ಹಾಗೂ ನಾಡನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿಸೋಣ ಎಂದರು.

ಸ್ವಾಭಿಮಾನದ ಪ್ರತೀಕ:

ಶಾಸಕಿ ಅನ್ನಪೂರ್ಣ ಈ.ತುಕಾರಾಂ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮ ಸ್ವಾಭಿಮಾನದ ಪ್ರತೀಕ. ಸ್ವಾತಂತ್ರ್ಯದ ಕನಸು ಕಂಡವರು. ಅವರ ಸ್ವಾತಂತ್ರ್ಯ ಹೋರಾಟದ ಕಿಚ್ಚು ಇಂದಿಗೂ ಎಲ್ಲರಿಗೂ ಪ್ರೇರಣೆಯಾಗಿದೆ. ಅವರ ನಡೆ, ನುಡಿ ನಮಗೆಲ್ಲ ಆದರ್ಶವಾಗಿವೆ. ಇಂತಹ ಮಹನೀಯರನ್ನು ಒಂದು ಜಾತಿಗೆ ಸೀಮಿತಗೊಳಿಸದೆ, ಎಲ್ಲರೂ ಒಟ್ಟಾಗಿ ಆಚರಿಸಬೇಕಿದೆ. ಅವರ ದೇಶಪ್ರೇಮ, ಸ್ವಾತಂತ್ರ್ಯ ಹೋರಾಟದ ಕಥೆಯನ್ನು ಮಕ್ಕಳಿಗೆ ಹೇಳಬೇಕಿದೆ ಎಂದರು.

ಕ್ಷೇತ್ರದಲ್ಲಿಯೂ ಮಹಿಳೆಯರ ಸಬಲೀಕರಣಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಬಿಎಸ್ಸಿ ನರ್ಸಿಂಗ್ ಕಾಲೇಜು ಕ್ಷೇತ್ರದಲ್ಲಿ ಆರಂಭವಾಗಲಿದೆ. ಮಹಿಳೆಯರು ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಮಾದರಿ ಮಹಿಳೆಯರಾಗಲು ಸಂಕಲ್ಪ ಮಾಡಬೇಕು ಎಂದರು.

ಕಿತ್ತೂರು ಚೆನ್ನಮ್ಮನವರ ಭಾವಚಿತ್ರದ ಮೇಲೆ ಸಂಶೋಧಕರು ಬೆಳಕು ಚೆಲ್ಲಬೇಕಿದೆ: ಸಾನ್ನಿಧ್ಯವಹಿಸಿದ್ದ ಪಟ್ಟಣದ ಶ್ರೀಪ್ರಭುದೇವರ ಸಂಸ್ಥಾನ ವಿರಕ್ತಮಠದ ಪ್ರಭುಸ್ವಾಮೀಜಿ ಮಾತನಾಡಿ, ಬ್ರಿಟಿಷರ ವಿರುದ್ಧ ಹೋರಾಡಿ, ವಿಜಯ ಸಾಧಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮನವರ ಭಾವಚಿತ್ರ ಎಂದರೆ ಚಲನ ಚಿತ್ರದ ಫೋಟೊವನ್ನು ಹಾಕುತ್ತಿದ್ದಾರೆ. ಅವರ ನಿಜವಾದ ಭಾವಚಿತ್ರದ ಮೇಲೆ ಸಂಶೋಧಕರು ಬೆಳಕು ಚೆಲ್ಲಿ, ಬೆಳಕಿಗೆ ತರುವ ಅಗತ್ಯವಿದೆ. ರಾಜ್ಯದಲ್ಲಿ ಮಹಿಳೆಯರ ರಕ್ಷಣೆ ಹಾಗೂ ಅವರ ಸಮಸ್ಯೆಗಳಿಗೆ ಸ್ಪಂದಿಸಲು ಅಕ್ಕ ತಂಡವನ್ನು ರಚಿಸಲಾಗುತ್ತಿದೆ. ರಾಜ್ಯದಲ್ಲಿ ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಸ್ವಾತಂತ್ರ್ಯ ಹೋರಾಟಕ್ಕೆ ಪಂಚಮಸಾಲಿ ಸಮಾಜದ ಕೊಡುಗೆ ಅಪಾರವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ನಿಕಟಪೂರ್ವ ರಾಜ್ಯಾಧ್ಯಕ್ಷ ಡಾ.ಬಿ. ನಾಗನಗೌಡ ಅವರಿಗೆ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ನೀಡಿರುವ ಹಿನ್ನೆಲೆಯಲ್ಲಿ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ತಾಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ಪಿ.ರವಿಕುಮಾರ್ ಮಾತನಾಡಿ, ತಮ್ಮ ಸಮಾಜವನ್ನು 2ಎ ವರ್ಗಕ್ಕೆ ಸೇರಿಸುವ ಮೂಲಕ ಸಮಾಜಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಸಂಸದರು ಹಾಗೂ ಶಾಸಕರಿಗೆ ಮನವಿ ಮಾಡಿದರು.

ಸಂಘದ ನಿಕಟಪೂರ್ವ ರಾಜ್ಯಾಧ್ಯಕ್ಷ ಬಿ. ನಾಗನಗೌಡ, ಜಿಲ್ಲಾಧ್ಯಕ್ಷ ಬಪ್ಪಕಾನ್ ಕುಮಾರಸ್ವಾಮಿ ಮಾತನಾಡಿದರು. ಸಂಘದ ತಾಲೂಕು ಘಟಕದ ಅಧ್ಯಕ್ಷ ರಮೇಶ್ ಗಡಾದ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅತಿಥಿಗಳು, ಸಮಾಜದ ಮುಖಂಡರು ಹಾಗೂ ಕಿತ್ತೂರು ರಾಣಿ ಚೆನ್ನಮ್ಮನ ವೇಶಭೂಷಣ ಧರಿಸಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಮಕ್ಕಳನ್ನು ಸನ್ಮಾನಿಸಲಾಯಿತು. ಶೆಟ್ರು ನಾಗರಾಜ ಸ್ವಾಗತಿಸಿದರು. ಬಸವರಾಜ ಬಣಕಾರ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮಕ್ಕೂ ಪೂರ್ವದಲ್ಲಿ 501 ಕುಂಭ, ಕೋಲಾಟ, ನಂದಿಕೋಲು, ಡೊಳ್ಳು ಮುಂತಾದ ವಾದ್ಯವೃಂದದೊಂದಿಗೆ ಕಿತ್ತೂರು ರಾಣಿ ಚೆನ್ನಮ್ಮನವರ ಭಾವಚಿತ್ರವನ್ನು ಭವ್ಯವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ವಿಜಯಕುಮಾರ್‌ಗೌಡ, ಪಂಚಮಸಾಲಿ ಸಂಘದ ಗೌರವ ಅಧ್ಯಕ್ಷ ಮೇಲುಸೀಮೆ ಶಂಕ್ರಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಅರುಂಧತಿ ಕೆಜಿ, ಮುಖಂಡರಾದ ಗಡಂಬ್ಲಿ ಚೆನ್ನಪ್ಪ, ರಾಜಶೇಖರ ಬೆಲ್ಲದ್, ಕುಮಾರಸ್ವಾಮಿ, ಮೇಘನಾಥ್, ಹುಳ್ಳಿ ಸುಬ್ಬಣ್ಣ ಸೇರಿದಂತೆ ಪಟ್ಟಣ ಹಾಗೂ ತಾಲ್ಲೂಕಿನ ವಿವಿಧ ಗ್ರಾಮಗಳ ನೂರಾರು ಪಂಚಮಸಾಲಿ ಸಮಾಜದ ಸದಸ್ಯರು ಭಾಗವಹಿಸಿದ್ದರು.