ಸಾರಾಂಶ
ರಾಜ್ಯ ಬಜೆಟ್ ಪುಸ್ತಕದಲ್ಲಿ ದಾಖಲಾಗಿರುವಂತೆ ಮೈಷುಗರ್ ಆಸ್ತಿಯನ್ನು ಅಡಮಾನವಿಟ್ಟು ಹೊಸ ಕಾರ್ಖಾನೆ ನಿರ್ಮಿಸುವುದಾಗಿ ಹೇಳಿದೆ. ಇದರ ಅವಶ್ಯಕತೆ ಇದೆಯೇ. ಹೊಸ ಕಾರ್ಖಾನೆ ಮಾಡುವ ಬದಲು ಅದೇ ಹಣದಲ್ಲಿ ಕಾರ್ಖಾನೆ ಅಭಿವೃದ್ಧಿ ಪಡಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿಗೆ ಸಂಸದೆ ಸುಮಲತಾ ಮನವಿ.
ಕನ್ನಡಪ್ರಭ ವಾರ್ತೆ ಮಂಡ್ಯ
ರಾಜ್ಯ ಸರ್ಕಾರ ಹೊಸ ಕಾರ್ಖಾನೆ ಮಾಡುವುದರ ಅರ್ಥ ಏನು ಎಂಬುದನ್ನು ಸರಿಯಾಗಿ ತಿಳಿಸಬೇಕು. ಮೈಷುಗರ್ ಆಸ್ತಿ ಒತ್ತೆ ಇಟ್ಟು ಹೊಸ ಕಾರ್ಖಾನೆ ನಿರ್ಮಿಸಲು ಮುಂದಾಗಿದೆಯೇ ಎಂದು ಸಂಸದೆ ಸುಮಲತಾ ಪ್ರಶ್ನಿಸಿದರು.ಜಿಲ್ಲಾ ಪಂಚಾಯ್ತಿ ಕಾವೇರಿ ಸಭಾಂಗಣದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಜೆಟ್ ಪುಸ್ತಕದಲ್ಲಿ ದಾಖಲಾಗಿರುವಂತೆ ಮೈಷುಗರ್ ಆಸ್ತಿಯನ್ನು ಅಡಮಾನವಿಟ್ಟು ಹೊಸ ಕಾರ್ಖಾನೆ ನಿರ್ಮಿಸುವುದಾಗಿ ಹೇಳಿದೆ. ಇದರ ಅವಶ್ಯಕತೆ ಇದೆಯೇ. ಹೊಸ ಕಾರ್ಖಾನೆ ಮಾಡುವ ಬದಲು ಅದೇ ಹಣದಲ್ಲಿ ಕಾರ್ಖಾನೆ ಅಭಿವೃದ್ಧಿಪಡಿಸುವಂತೆ ಸಚಿವರಿಗೆ ಮನವಿ ಮಾಡಿದರು.
ಮಂಡ್ಯ ಎಂದರೆ ಮೈಷುಗರ್ ಕಾರ್ಖಾನೆ. ಹಾಗಾಗಿ ಸರ್ಕಾರ ರೈತರ ಪರವಾಗಿ ನಡೆದುಕೊಳ್ಳಬೇಕು. ಪಾರಂಪರಿಕ ಕಟ್ಟಡಕ್ಕೆ ಧಕ್ಕೆಯಾಗದಂತೆ ಎಚ್ಚರ ವಹಿಸಬೇಕು. ಕಾರ್ಖಾನೆ ಜಾಗದಲ್ಲಿ ಐಟಿ ಪಾರ್ಕ್ ಮಾಡುವುದನ್ನು ನಾವೂ ವಿರೋಧಿಸುತ್ತೇವೆ. ಐಟಿ ಪಾರ್ಕ್ ನಿರ್ಮಾಣದಿಂದ ಮಂಡ್ಯದ ಎಷ್ಟು ಜನರಿಗೆ ಉದ್ಯೋಗ ಸಿಗಲಿದೆ. ಮಂಡ್ಯದ ಯುವಕರಿಗೆ ಎಷ್ಟು ಲಾಭವಾಗಲಿದೆ ಎನ್ನುವುದನ್ನು ಹೇಳಬೇಕು. ಬೇರೆ ಜಾಗದಲ್ಲಿ ಸಾಫ್ಟ್‌ವೇರ್ ಪಾರ್ಕ್ ಮಾಡುವುದಾದರೆ ನನ್ನ ಅಭ್ಯಂತರವೇನಿಲ್ಲ ಎಂದು ನುಡಿದರು.ಸಭೆಯಲ್ಲಿ ಸಂಸದೆ ಸುಮಲತಾ ಅಂಬರೀಷ್, ಶಾಸಕ ದರ್ಶನ್ ಪುಣ್ಣಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಕಾವೇರಿ ನೀರಾವರಿ ನಿಗಮದ ಅಧಿಕ್ಷಕ ಎಂಜಿನಿಯರ್ ರಘುರಾಮ್ ಭಾಗವಹಿಸಿದ್ದರು.ಕೆಆರ್‌ಎಸ್ ಉಳಿಸುವ ದೃಷ್ಟಿಯಿಂದ ಟ್ರಯಲ್ ಬ್ಲಾಸ್ಟ್ ಮಾಡಬಾರದು. ೨೦ ಕಿ.ಮೀ. ವ್ಯಾಪ್ತಿಯನ್ನು ನಿಷೇಧಿತ ಪ್ರದೇಶವೆಂದು ಘೋಷಿಸಬೇಕು. ಮೈಷುಗರ್ ಕಾರ್ಖಾನೆಗೆ ಆಧುನಿಕ ಸ್ಪರ್ಶ ಕೊಡಿ. ಇತಿಹಾಸವನ್ನು ತೆಗೆದು ತಿರುಚುವ ಕೆಲಸ ಮಾಡಬೇಡಿ.
- ಸುನಂದಾ ಜಯರಾಂ, ರೈತ ಮುಖಂಡರುನೀವು ಏನಾದರೂ ತೀರ್ಮಾನ ಮಾಡಿ. ಟ್ರಯಲ್ ಬ್ಲಾಸ್ಟ್ ಮಾಡುವ ನಿರ್ಧಾರ ಮಾಡಿದರೆ ನಾವು ಗೋ-ಬ್ಯಾಕ್ ಚಳವಳಿ ನಡೆಸುವುದಂತೂ ಖಚಿತ. ನಮಗೆ ಅಣೆಕಟ್ಟು ಉಳಿವು ಮುಖ್ಯ. ಯಾವ ಕಾರಣಕ್ಕೂ ಟ್ರಯಲ್ ಬ್ಲಾಸ್ಟ್‌ಗೆ ಅವಕಾಶ ಕೊಡೊಲ್ಲ.- ಎ.ಎಲ್.ಕೆಂಪೂಗೌಡ, ಜಿಲ್ಲಾಧ್ಯಕ್ಷರು, ರೈತಸಂಘ