ಚುನಾವಣೆಯಲ್ಲಿ ಗೆಲ್ಲಿಸಿ, ನಿಮ್ಮ ಧ್ವನಿಯಾಗಿ ಕೆಲಸ ಮಾಡುವೆ: ನಾರಾ ಪ್ರತಾಪರೆಡ್ಡಿ

| Published : Mar 08 2024, 01:46 AM IST

ಚುನಾವಣೆಯಲ್ಲಿ ಗೆಲ್ಲಿಸಿ, ನಿಮ್ಮ ಧ್ವನಿಯಾಗಿ ಕೆಲಸ ಮಾಡುವೆ: ನಾರಾ ಪ್ರತಾಪರೆಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ವಿಧಾನ ಪರಿಷತ್‌ನಲ್ಲಿ ಈಶಾನ್ಯ ಪದವೀಧರ ಕ್ಷೇತ್ರದ ಮತದಾರರ ಸಮಸ್ಯೆಗೆ ಯಾರೊಬ್ಬರೂ ಸ್ಪಂದಿಸಿಲ್ಲ.

ಕೊಪ್ಪಳ: ಪದವೀಧರ ಹಾಗೂ ಶಿಕ್ಷಣ ಕ್ಷೇತ್ರದ ಹಿತ ಕಾಪಾಡುವ ಉದ್ದೇಶದಿಂದ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ. ಒಮ್ಮೆ ಅವಕಾಶ ನೀಡಿದರೆ ವಿಧಾನಪರಿಷತ್‌ನಲ್ಲಿ ನಿಮ್ಮ ಧ್ವನಿಯಾಗಿ ಕೆಲಸ ಮಾಡುತ್ತೇನೆ ಎಂದು ಈಶಾನ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ನಾ.ರಾ. ಪ್ರತಾಪರೆಡ್ಡಿ ಹೇಳಿದರು.

ನಗರದಲ್ಲಿ ಪದವೀಧರರ ಸಮಸ್ಯೆ ಆಲಿಸುವ ನಿಟ್ಟಿನಲ್ಲಿ ಕರೆಯಲಾಗಿದ್ದ ಬೆಂಬಲಿಗರು ಹಾಗೂ ಹಿತೈಷಿಗಳ ಸಭೆಯಲ್ಲಿ ಅವರು ಮಾತನಾಡಿದರು.

ವಿಧಾನ ಪರಿಷತ್‌ನಲ್ಲಿ ಈಶಾನ್ಯ ಪದವೀಧರ ಕ್ಷೇತ್ರದ ಮತದಾರರ ಸಮಸ್ಯೆಗೆ ಯಾರೊಬ್ಬರೂ ಸ್ಪಂದಿಸಿಲ್ಲ. 6 ವರ್ಷಗಳ ಹಿಂದೆ ಗೆದ್ದು ಹೋದವರು ಮತ್ತೆ ಕೊಪ್ಪಳದ ಕಡೆ ಮುಖ ಮಾಡಿಲ್ಲ. ಶಾಲೆ, ಕಾಲೇಜುಗಳಲ್ಲಿ ಸರಿಯಾಗಿ ಮಹಿಳೆಯರಿಗೆ ಶೌಚಾಲಯ ನಿರ್ಮಿಸಿಲ್ಲ. ಇಂತಹ ದುಸ್ಥಿತಿಗೆ ನಾವು ತಲುಪಿದ್ದೇವೆ. ಇದಕ್ಕೆ ಜನಪ್ರತಿನಿಧಿಗಳ ಉದಾಸೀನತೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕೇವಲ 3000 ಮತಗಳ ಅಂತರದಿಂದ ಸೋಲನುಭವಿಸಿದ್ದೇನೆ. ಇದಕ್ಕೆ ಕುಲಗೆಟ್ಟ ಮತಗಳು ಸಹ ಕಾರಣ ಎಂದು ವಿಶ್ಲೇಷಿಸಲಾಗಿದೆ. ಆದರೆ, ಈ ಬಾರಿ ಪಕ್ಷೇತರನಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದೇನೆ. ನಿಮ್ಮೆಲ್ಲರ ಆಶೀರ್ವಾದ ಅಗತ್ಯ ಎಂದರು.

ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾತನಾಡಿ, ಪ್ರತಾಪರೆಡ್ಡಿ ಸರಳ, ಸಜ್ಜನ ವ್ಯಕ್ತಿ. ರಾಜಕೀಯದಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಇಂತಹ ವ್ಯಕ್ತಿಗಳು ರಾಜಕೀಯಕ್ಕೆ ಬಂದರೆ ಬಡವರು, ಯುವಕರಿಗೆ ಅನುಕೂಲವಾಗಲಿದೆ. ಪದವೀಧರ ಕ್ಷೇತ್ರದ ಜನತೆ ಪ್ರತಾಪರೆಡ್ಡಿ ಅವರನ್ನು ಬೆಂಬಲಿಸಬೇಕು ಎಂದರು.

ಈ ಸಂದರ್ಭದಲ್ಲಿ ಬಳ್ಳಾರಿ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಮರಿಸ್ವಾಮಿರೆಡ್ಡಿ, ರುದ್ರಯ್ಯ ನವಲಿ ಹಿರೇಮಠ, ಯುವ ಮುಖಂಡ ಮೌನೇಶ್ ವಡ್ಡಟ್ಟಿ ಇದ್ದರು.