ನದಿ ನೀರು ಬಳಕೆಗೆ ನಿರ್ಬಂಧ ಹಿಂಪಡೆಯಲು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಆಗ್ರಹ

| Published : Mar 08 2024, 01:46 AM IST

ನದಿ ನೀರು ಬಳಕೆಗೆ ನಿರ್ಬಂಧ ಹಿಂಪಡೆಯಲು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಕಾಫಿ ಬೆಳೆಗಾರ ಹಿತ ದೃಷ್ಟಿಯಿಂದ ಜಿಲ್ಲಾಧಿಕಾರಿ ನದಿಗಳಿಂದ ಕೃಷಿ ನೀರಾವರಿಗೆ ನೀರು ಬಳಕೆ ರದ್ದು ಆದೇಶ ಹಿಂಪಡೆಯಬೇಕೆಂದು ಒತ್ತಾಯಿಸಿ ಬಿಜೆಪಿ ಕೃಷಿ ಮೋರ್ಚಾ ಮತ್ತು ಕಾಫಿ ಬೆಳೆಗಾರರು ಗುರುವಾರ ನಾಪೋಕ್ಲು ಉಪತಹಸೀಲ್ದಾರ್ ಸುನಿಲ್ ಕುಮಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ನದಿ ಮತ್ತು ನದಿ ಮೂಲಗಳಿಂದ ಪಂಪ್ ಸೆಟ್ ಬಳಸಿ ನೀರು ತೆಗೆಯುವುದನ್ನು ಕೊಡಗು ಜಿಲ್ಲಾಡಳಿತ ನಿಷೇಧಿಸಿದ್ದು ಕಾಫಿ ಬೆಳೆಗಾರ ಹಿತ ದೃಷ್ಟಿಯಿಂದ ಜಿಲ್ಲಾಧಿಕಾರಿ ತಮ್ಮ ಆದೇಶ ಹಿಂಪಡೆಯಬೇಕೆಂದು ಒತ್ತಾಯಿಸಿ

ಬಿಜೆಪಿ ಕೃಷಿ ಮೋರ್ಚಾ ಮತ್ತು ಕಾಫಿ ಬೆಳೆಗಾರರು ಗುರುವಾರ ನಾಪೋಕ್ಲು ಉಪತಹಸೀಲ್ದಾರ್ ಸುನಿಲ್ ಕುಮಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಕೃಷಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವಚಾಳಿಯಂಡ ಜಗದೀಶ್ ಮಾತನಾಡಿ, ಕೊಡಗಿನಲ್ಲಿ ಕಾಫಿ ಬೆಳೆಯನ್ನು ನಂಬಿಕೊಂಡು ಹೆಚ್ಚಿನ ಸಂಖ್ಯೆಯ ಬೆಳೆಗಾರರು ಹಾಗೂ ಕಾರ್ಮಿಕರು ಜೀವನ ಸಾಗಿಸುತ್ತಿದ್ದಾರೆ. ವರ್ಷಕ್ಕೆ ಒಂದು ಬಾರಿ ಕಾಫಿ ತೋಟಕ್ಕೆ ನೀರು ಹಾಯಿಸುವ ಸಮಯ ಇದಾಗಿದೆ. ಆದರೆ ಇದೀಗ ಜಿಲ್ಲಾಡಳಿತ ದಿಢೀರ್ ಆಗಿ ನದಿ ಮೂಲಗಳಿಂದ ನೀರು ತೆಗೆಯದಂತೆ ಆದೇಶ ಹೊರಡಿಸಿದ್ದು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ ಎಂದರು.

ಕಾಫಿ ಬೆಳೆಗಾರರ ಒಕ್ಕೂಟದ ಹೋಬಳಿ ಅಧ್ಯಕ್ಷ ಕುಡ್ಯೋಳಂಡ ರಮೇಶ್ ಮುದ್ದಯ್ಯ ಮಾತನಾಡಿ, ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶದಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಕಾಫಿ ಗಿಡಗಳಿಗೆ ನೀರು ಹಾಯಿಸದಿದ್ದರೆ ಮುಂದಿನ ವರ್ಷ ಫಸಲು ಸಂಪೂರ್ಣವಾಗಿ ಕುಸಿಯುವ ಸಾಧ್ಯತೆ ಇದೆ. ಅತಿ ಹೆಚ್ಚು ತೆರಿಗೆ ತಂದು ಕೊಡುವ ವಾಣಿಜ್ಯ ಬೆಳೆ ಕಾಫಿ. ಇದರಿಂದ ಆಗುವ ನಷ್ಟ ದೇಶದ ಆರ್ಥಿಕ ಕ್ಷೇತ್ರದ ಮೇಲೂ ಪರಿಣಾಮ ಬೀರುತ್ತದೆ. ಕಾರ್ಮಿಕರು ಕೆಲಸ ಕಳೆದುಕೊಳ್ಳಬಹುದು. ಆದ್ದರಿಂದ ಜಿಲ್ಲಾಡಳಿತ ಆದೇಶ ಹಿಂಪಡೆಯಬೇಕೆಂದು ಒತ್ತಾಯಿಸಿದರು.

ಕಾಫಿ ತೋಟಗಳು ಜಿಲ್ಲೆಯ ಆರ್ಥಿಕತೆಗೆ ತಮ್ಮದೇ ಆದ ಕೊಡುಗೆ ನೀಡುತ್ತಿವೆ. ಅಂತರ್ಜಲ ಕಾಪಾಡಲು ಬತ್ತದ ಗದ್ದೆಗಳನ್ನು ಉಳಿಸಿಕೊಳ್ಳಬೇಕಾಗಿದೆ. ಭತ್ತ ಬೆಳೆಯುವ ರೈತರಿಗೆ ಸಹಾಯಧನ ನೀಡಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಮಡಿಕೇರಿ ಕೃಷಿ ಮೋರ್ಚಾದ ಉಪಾಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ ಮಾತನಾಡಿ, ಈ ಆದೇಶದಿಂದ ಕಾಫಿ ಹಾಗೂ ಇತರ ಪರ್ಯಾಯ ಬೆಳೆಗಳನ್ನು ಬೆಳೆಸಿ ಜೀವನ ನಡೆಸುತ್ತಿರುವ ಕೃಷಿಕರಿಗೆ ತೊಂದರೆಯಾಗಿದೆ. ಬೆಳೆಗಾರರು ವರ್ಷಕ್ಕೊಮ್ಮೆ ಸಕಾಲಕ್ಕೆ ಮಳೆ ಬಾರದಿರುವ ಸಂದರ್ಭದಲ್ಲಿ ನದಿ ಹಾಗೂ ನದಿ ಮೂಲಗಳಿಂದ ನೀರು ಹಾಯಿಸಿಕೊಂಡು ಫಸಲು ತೆಗೆದು ಜೀವನ ಸಾಗಿಸುತ್ತಿದ್ದಾರೆ. ಆದ್ದರಿಂದ ಜಿಲ್ಲಾಧಿಕಾರಿ ನೀಡಿರುವ ಈ ಆದೇಶ ಹಿಂಪಡೆದು ಬೆಳೆಗಾರರ ರಕ್ಷಣೆಗೆ ಮುಂದಾಗಬೇಕು ಎಂದರು.ಆದೇಶ ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಬೆಳೆಗಾರರು ಎಚ್ಚರಿಕೆ ನೀಡಿದ್ದಾರೆ. ತಾಲೂಕು ಕಾರ್ಯದರ್ಶಿ ನೂರಂಬಾಡ ಉದಯ ಶಂಕರ್, ಹಿಂದುಳಿದ

ವರ್ಗದ ತಾಲೂಕು ಅಧ್ಯಕ್ಷ ಪ್ರತೀಪ ಬಿ.ಎಂ., ಕಾಫಿ ಬೆಳೆಗಾರರಾದ ಕೆಳೇಟಿರ ಸಾಬು ನಾಣಯ್ಯ, ಅಪ್ಪಚ್ಚಿರ ರೆಮ್ಮಿ ನಾಣಯ್ಯ, ಪಾಡಿಯಮ್ಮಂಡ ಮಹೇಶ್, ಜೆಪ್ರಿ ಬೆಳ್ಯಪ್ಪ, ಬಾಳೆಯಡ ಮೇದಪ್ಪ, ಅರಯಡ ರತ್ನ ಪೆಮ್ಮಯ್ಯ, ಚೇಕ್ ಪೂವಂಡ ಅಪ್ಪುಚ್ಚು, ಸದಾ, ಕಂಗಂಡ ಜಾಲಿ ಪೂವಪ್ಪ, ಕೇಳೇಟಿರ ಬಸಪ್ಪ, ದೊರೆ, ಸೇರಿದಂತೆ ಇನ್ನಿತರ ಬೆಳೆಗಾರರು ಹಾಜರಿದ್ದರು.