ಸಾರಾಂಶ
ಕನ್ನಡಪ್ರಭ ವಾರ್ತೆ, ಭದ್ರಾವತಿ
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮಂಗಳವಾರ ನಗರದ ಮಿಲ್ಟ್ರಿ ಕ್ಯಾಂಪ್ ನೀರಾವರಿ ಇಲಾಖೆಯ ಬಿ.ಆರ್.ಎಲ್.ಬಿ.ಸಿ 4ರ ಸಹಾಯಕ ಕಾರ್ಯ ಪಾಲಕ ಅಭಿಯಂತರರ ಕಚೇರಿ ಮುಂಭಾಗ ಗೊಂದಿ ನಾಲಾ ಅಚ್ಚುಕಟ್ಟುದಾರರ ರೈತರನ್ನು ಉಳಿಸಿ ಚಳವಳಿ ನಡೆಸಲಾಯಿತು.ಭದ್ರಾ ಜಲಾಶಯದಿಂದ ಗೊಂದಿ ಬಲದಂಡೆ ನಾಲೆಯ (74.23 ಕಿಲೋ ಮೀಟರ್) 4.253 ಹೆಕ್ಟೇರ್ ಪ್ರದೇಶಕ್ಕೆ 145 ಕ್ಯುಸೆಕ್ಸ್ ಪ್ರತಿದಿನ 0.0125 ಟಿ.ಎಂ.ಸಿ. ನೀರನ್ನು ಹರಿಸುತ್ತಾರೆ. ಇದೇ ರೀತಿ ಎಡದಂತೆ ಗೊಂದಿ ನಾಲೆಯಲ್ಲಿ (14.73 ಕಿಲೋಮೀಟರ್) 20 ಕ್ಯುಸೆಕ್ಸ್ ಅಂದರೆ 0.0017 ಟಿ.ಎಂ.ಸಿ ನೀರನ್ನು ಪ್ರತಿದಿನ ಭದ್ರಾ ಜಲಾಶಯದಿಂದ ಹರಿಸುತ್ತಾರೆ. ಆದರೆ, ಈಗ ಬಲದಂಡೆ ನಾಲೆಯ ಕೊನೆಯ ಭಾಗದ ರೈತರ ಅಚ್ಚುಕಟ್ಟು ಪ್ರದೇಶಗಳಿಗೆ ನೀರಿನ ಸಮರ್ಪಕ ಲಭ್ಯತೆ ಕೊರತೆ ಉಂಟಾಗಿದೆ ಎಂದು ರೈತರು ಅಳಲು ವ್ಯಕ್ತಪಡಿಸಿದರು.
ಈ ಹಿಂದೆ ನೀರಿನ ಕೊರತೆಯನ್ನು ನೀಗಿಸಲು ಸುಮಾರು ₹900 ಕೋಟಿಗೂ ಹೆಚ್ಚಿನ ವೆಚ್ಚದ ಯೋಜನೆ ರೂಪಿಸಿ ಗೊಂದಿ ನಾಲೆಯನ್ನು ಆಧುನೀಕರಣಗೊಳಿಸಲಾಗಿದೆ. ಆದರೆ, ಅಚ್ಚುಕಟ್ಟುದಾರರಿಗೆ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ನೀರಿನ ಲಭ್ಯತೆ ಸಮಸ್ಯೆ ಹೆಚ್ಚಾಗಿದೆಯೇ ಹೊರತು, ಈ ಯೋಜನೆಯಿಂದ ನೀರು ಸರಿಯಾದ ರೀತಿಯಲ್ಲಿ ಅಚ್ಚುಕಟ್ಟುದಾರರಿಗೆ ಸಿಗುತ್ತಿಲ್ಲ. ಇದಕ್ಕೆ ನೀರಾವರಿ ಇಲಾಖೆ ಅಧಿಕಾರಿ ವರ್ಗದ ಕಾರ್ಯವೈಫಲ್ಯ ಎದ್ದು ಕಾಣುತ್ತಿದೆ. ನಾಲೆಗಳ ದುರಸ್ತಿ ಕಾರ್ಯ ಸಮರ್ಪಕವಾಗಿ ನಿರ್ವಹಿಸದಿರುವುದು ಈ ಕೊರತೆಗೆ ಕಾರಣ. ಇದರಿಂದ ಕೊನೆ ಭಾಗದ ರೈತರು ನೀರಿನ ಲಭ್ಯತೆಯಿಂದ ವಂಚಿತರಾಗಿದ್ದಾರೆ ಎಂದು ಆರೋಪಿಸಿದರು.ಹಲವಾರು ವರ್ಷಗಳಿಂದ ಈ ವಿಚಾರವನ್ನು ಸಂಬಂಧಪಟ್ಟ ಇಲಾಖೆ ಮತ್ತು ಅಧಿಕಾರಿಗಳಿಗೆ ತಿಳಿಸಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಈ ಬಾರಿ ಬರಗಾಲದಿಂದಾಗಿ ನೀರಿನ ಲಭ್ಯತೆಯ ಕೊರತೆ ತುಂಬಾ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ತಕ್ಷಣ ರೈತರ ಸಮಸ್ಯೆ ಬಗೆಹರಿಸಲು ಮುಂದಾಗಬೇಕೆಂದು ಆಗ್ರಹಿಸಿದರು.
ಅಹೋರಾತ್ರಿ ಚಳವಳಿ:ರೈತರ ಚಳವಳಿಗೆ ನೀರಾವರಿ ಇಲಾಖೆ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸದ ಕಾರಣ ಚಳವಳಿ ಅಹೋ ರಾತ್ರಿ ನಡೆಸಲು ರೈತರು ತೀರ್ಮಾನಿಸಿದ್ದಾರೆ. ಕೃಷ್ಣಮೂರ್ತಿ ಅಗಸನಹಳ್ಳಿ ಚಳವಳಿ ನೇತೃತ್ವ ವಹಿಸಿದ್ದರು. ಸಂಘದ ಅಧ್ಯಕ್ಷ ಹಿರಣ್ಣಯ್ಯ, ಖಜಾಂಚಿ ಡಿ. ಯಲ್ಲಪ್ಪ, ಡಿ.ವಿ. ವಿರೇಶ್, ರಾಮಚಂದ್ರ ರಾವ್ ಘೋರ್ಪಡೆ, ಬಸವರಾಜು ಯು., ಡಿ.ಆರ್. ರತ್ನಪ್ಪ, ರಾಮಕೃಷ್ಣ ಮೇಸ್ತಾ ಇನ್ನಿತರ ರೈತರು ಪಾಲ್ಗೊಂಡಿದ್ದರು.
- - - -ಡಿ5-ಬಿಡಿವಿಟಿ ಮತ್ತು (ಎ):ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮಂಗಳವಾರ ಭದ್ರಾವತಿ ನಗರದ ಮಿಲ್ಟ್ರಿ ಕ್ಯಾಂಪ್ ನೀರಾವರಿ ಇಲಾಖೆಯ ಬಿ.ಆರ್.ಎಲ್.ಬಿ.ಸಿ 4ರ ಸಹಾಯಕ ಕಾರ್ಯ ಪಾಲಕ ಅಭಿಯಂತರರ ಕಚೇರಿ ಮುಂಭಾಗ ಗೊಂದಿ ನಾಲಾ ಅಚ್ಚುಕಟ್ಟುದಾರರ ರೈತರನ್ನು ಉಳಿಸಿ ಚಳುವಳಿ ನಡೆಸಲಾಯಿತು.