ಸಾರಾಂಶ
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದಿಂದ ಹಂಪಿ ಅಭಿವೃದ್ಧಿಗೆ ಅನುಕೂಲವಾಗುತ್ತಿದೆ.
ಹೊಸಪೇಟೆ: ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಮಂತ್ರಾಲಯದ ಸಹಯೋಗದಲ್ಲಿ ಕೇಂದ್ರ ಪುರಸ್ಕೃತ ಸ್ವದೇಶ ದರ್ಶನ್ 2.0 ಯೋಜನೆಯಡಿ ಹಂಪಿಯ ವಿವಿಧ ಪರಿಸರದಲ್ಲಿ ಡೆವಲಪಮೆಂಟ್ ಆಫ್ ಟ್ರಾವೆಲರ್ ನೂಕ್ಸ್ ಹಂಪಿ ಯೋಜನೆಯ ಶಂಕುಸ್ಥಾಪನೆಯ ಪ್ರಧಾನಿ ನರೇಂದ್ರ ಮೋದಿ ಅವರಿಂದ ವರ್ಚುವಲ್ ಲಾಂಚ್ ನೇರ ಪ್ರಸಾರ ಕಾರ್ಯಕ್ರಮವು ಗುರುವಾರ ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದ ಎದುರುಗಡೆ ನಡೆಯಿತು.
ಬಳ್ಳಾರಿಯ ಸಂಸದ ವೈ. ದೇವೇಂದ್ರಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಂಪಿಗೆ ಮೂಲ ಸೌಕರ್ಯಗಳನ್ನು ಒದಗಿಸುವುದು ನಮ್ಮೆಲರ ಆದ್ಯ ಕರ್ತವ್ಯವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದಿಂದ ಹಂಪಿ ಅಭಿವೃದ್ಧಿಗೆ ಅನುಕೂಲವಾಗುತ್ತಿದೆ. ಈಗಾಗಲೇ ಹಂಪಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಜತೆಗೆ ಮೂಲಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ. ಬೀದಿಬದಿ ವ್ಯಾಪಾರಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಜಿಲ್ಲೆಗೆ ನಿಷ್ಠಾವಂತ ಅಧಿಕಾರಿಗಳು ಬಂದಿರುವುದರಿಂದ ಎಲ್ಲ ಕಾರ್ಯಗಳು ಸುಗಮವಾಗಿ ನಡೆಯುತ್ತಿವೆ ಎಂದರು.ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಮಾತನಾಡಿ, ಪುರಾತತ್ವ ಇಲಾಖೆಯ ಒಪ್ಪಿಗೆಯ ಮೇರೆಗೆ ಬೇರೆ ಯಾವುದೇ ಇಲಾಖೆಗೆ ತೊಂದರೆಯಾಗದಂತೆ ಮೂರು ವಿಧದ 20 ಟ್ರಾವೆಲರ್ ನೂಕ್ಸ್‌ಗಳಿಗೆ ಅನುಮೋದನೆ ನೀಡಲಾಗಿದೆ. ದೇವಸ್ಥಾನದಿಂದ ಆನೆಗುಂದಿಯವರೆಗೆ ಟ್ರಾವೆಲರ್ ನೂಕ್ಸ್‌ಗಳನ್ನು ಮಾಡಲು ತೀರ್ಮಾನಿಸಲಾಗಿದೆ. ದೇವಸ್ಥಾನ ಮತ್ತು ಪ್ರವಾಸಿ ತಾಣಗಳಲ್ಲಿ, ಭಕ್ತಾದಿಗಳು, ಪ್ರವಾಸಿಗರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಎಲ್ಲರಿಗೂ ಮೂಲ ಸೌಕರ್ಯ ಒದಗಿಸುವುದು ನಮ್ಮ ಆದ್ಯ ಕರ್ತವ್ಯ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್., ಸಹಾಯಕ ಆಯುಕ್ತ ಮೊಹಮ್ಮದ್ ಅಲಿ ಅಕ್ರಂ ಷಾ, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಪ್ರಭುಲಿಂಗ ಎಸ್. ತಾಳಕೇರಿ, ತಹಸೀಲ್ದಾರ್ ಶೃತಿ ಎಂ. ಎಂ., ಹಂಪಿ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ರಜನಿ ಷಣ್ಮುಖ ಗೌಡ, ಉಪಾಧ್ಯಕ್ಷ ಹನುಮಂತಪ್ಪ, ಸದಸ್ಯರು, ಪ್ರವಾಸಿ ಮಾರ್ಗದರ್ಶಕರು ಇದ್ದರು.