ಜಿಲ್ಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಸಂಕಲ್ಪ: ಸಾಗರ ಖಂಡ್ರೆ

| Published : Mar 26 2024, 01:07 AM IST

ಜಿಲ್ಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಸಂಕಲ್ಪ: ಸಾಗರ ಖಂಡ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಬೀದರ್‌ ಅಭಿವೃದ್ಧಿಗೆ ನನ್ನದೇ ಆದ ಗುರಿಯಿದೆ. ಭಾಲ್ಕಿ ಶ್ರೀಗಳ ಆಶೀರ್ವಾದ ಪಡೆದ ಕಾಂಗ್ರೆಸ್‌ನ ಅಭ್ಯರ್ಥಿ. ಕಾಂಗ್ರೆಸ್‌ ಲೋಕಸಭಾ ಚುನಾವಣೆಯಲ್ಲಿ ಯುವಕರಿಗೆ ಪ್ರೋತ್ಸಾಹಿಸುವ ಹಿನ್ನೆಲೆ ನನ್ನ ಪುತ್ರ ಸಾಗರ ಖಂಡ್ರೆ ಅವರನ್ನು ಕಣಕ್ಕಿಳಿಸಲಾಗಿದೆ ಎಂದು ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ಕನ್ನಡಪ್ರಭ ವಾರ್ತೆ ಭಾಲ್ಕಿ

ಜಿಲ್ಲೆಯ ಮತದಾರರ ಆಶೀರ್ವಾದ, ವಿಶ್ವಾಸದೊಂದಿಗೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣದಲ್ಲಿ ಇಳಿಯಲಿದ್ದೇನೆ. ಜಿಲ್ಲೆಯ ಅಭಿವೃದ್ಧಿಗೆ ನನ್ನದೇ ಆದ ಗುರಿಯಿದೆ. ನಮ್ಮ ತಂದೆ ಈಶ್ವರ ಖಂಡ್ರೆಯವರ ಮಾದರಿಯಲ್ಲಿ ಜಿಲ್ಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಸಂಕಲ್ಪ ಇಟ್ಟುಕೊಂಡಿದ್ದೇನೆ ಎಂದು ಬೀದರ್‌ ಲೋಕಸಭಾ ಕ್ಷೇತ್ರದ ಘೋಷಿತ ಕಾಂಗ್ರೆಸ್ ಅಭ್ಯರ್ಥಿ ಸಾಗರ ಖಂಡ್ರೆ ತಿಳಿಸಿದರು.

ಪಟ್ಟಣದಲ್ಲಿ ಉಭಯ ಶ್ರೀಗಳನ್ನು ಸನ್ಮಾನಿಸಿ, ಆಶೀರ್ವಾದ ಪಡೆದುಕೊಂಡು ಮಾತನಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಕಾಂಗ್ರೆಸ್‌ ಲೋಕಸಭಾ ಚುನಾವಣೆಯಲ್ಲಿ ಯುವಕರಿಗೆ ಪ್ರೋತ್ಸಾಹಿಸುವ ಹಿನ್ನೆಲೆ ನನ್ನ ಪುತ್ರ ಸಾಗರ ಖಂಡ್ರೆ ಅವರನ್ನು ಕಣಕ್ಕಿಳಿಸಲಾಗಿದೆ. ಶಾಸಕ, ಸಚಿವನಾಗಿ ತಾಲೂಕು, ಜಿಲ್ಲೆಯ ಪ್ರಗತಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಜಿಲ್ಲೆಯನ್ನು ಶೈಕ್ಷಣಿಕ, ನೀರಾವರಿ, ಆರೋಗ್ಯ ಕ್ಷೇತ್ರದ ಜೊತೆಗೆ ಆರ್ಥಿಕ ಪ್ರಗತಿಗೆ ನನಗೆ ಇನ್ನಷ್ಟು ಶಕ್ತಿ ತುಂಬ ಬೇಕಾದರೆ ಸಾಗರ ಖಂಡ್ರೆಗೆ ಗೆಲ್ಲಿಸಿ ಲೋಕಸಭೆಗೆ ಕಳಿಸುವುದು ಅತ್ಯಂತ ಅವಶ್ಯಕತೆ ಇದೆ ಎಂದು ತಿಳಿಸಿದರು.

ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ಜಿಲ್ಲೆಯು ಸೇರಿ ಕಲ್ಯಾಣ ಕರ್ನಾಟಕದ ಪ್ರಗತಿಯಲ್ಲಿ ಖಂಡ್ರೆ ಮನೆತನದ ಕೊಡುಗೆ ದೊಡ್ಡದಿದೆ. ಇದೀಗ ಅದೇ ಮನತೆನದ ಮೂರನೇ ತಲೆಮಾರಿನ ಸಾಗರ ಖಂಡ್ರೆಯವರು ಸಮಾಜ ಸೇವೆಗೆ ಮುಂದಾಗಿರುವುದು ಸಂತಸ ತರಿಸಿದೆ. ಸಾಗರ ಅವರು ಕ್ರಿಯಾಶೀಲ, ಉತ್ಸಾಹಿ ಯುವಕರಾಗಿದ್ದಾರೆ. ರಾಜ್ಯದಲ್ಲೇ ಅತ್ಯಂತ ಕಿರಿಯ ವಯಸ್ಸಿನ ಯುವಕರಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಅವರು ರಾಜಕೀಯ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲಿ ಎಂದು ಹಾರೈಸಿದರು.

ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್‌ ಅಧ್ಯಕ್ಷ ನಾಡೋಜ ಬಸವಲಿಂಗ ಪಟ್ಟದ್ದೇವರು ಮಾತನಾಡಿ, ರಾಜ್ಯದಲ್ಲಿಯೇ ಖಂಡ್ರೆ ಮನೆತನ ಮಾದರಿಯಾಗಿ ಗುರುತಿಸಿಕೊಂಡಿದೆ. ಡಾ.ಭೀಮಣ್ಣ ಖಂಡ್ರೆ, ಈಶ್ವರ ಖಂಡ್ರೆ ಅವರು ತಾಲೂಕು ಸೇರಿ ಜಿಲ್ಲೆಗೆ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಇದೀಗ ಅವರ ಪುತ್ರ ಸಾಗರ ಖಂಡ್ರೆ ಅವರು ಲೋಕಸಭಾ ಚುನಾವಣೆ ಮೂಲಕ ರಾಜಕೀಯ ರಂಗ ಪ್ರವೇಶ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಅವರಿಗೆ ಶುಭವಾಗಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಶಾಂತಿವರ್ಧಕ ಶಿಕ್ಷಣ ಸಂಸ್ಥೆ ನಿರ್ದೇಶಕಿ ಡಾ. ಗೀತಾ ಈಶ್ವರ ಖಂಡ್ರೆ, ತಾಲೂಕು ಕಾಂಗ್ರೆಸ್‌ ಅಧ್ಯಕ್ಷ ಹಣಮಂತರಾವ್‌ ಚವ್ಹಾಣ್‌, ಬಸವೇಶ್ವರ ಬ್ಯಾಂಕ್‌ ಅಧ್ಯಕ್ಷ ಶಶಿಧರ ಕೋಸಂಬೆ, ರವಿ ಬೋರ್‌ವೆಲ್ಸ್‌ ಮಾಲೀಕ ರವೀಂದ್ರ ಚಿಡಗುಪ್ಪೆ, ಗುತ್ತಿಗೆದಾರ ರಾಜಕುಮಾರ ಬಿರಾದಾರ ಸೇರಿದಂತೆ ಹಲವರು ಇದ್ದರು. ಸವಿತಾ ಭೂರೆ ಪ್ರಾರ್ಥನೆ ಗೀತೆ ಹಾಡಿದರು. ಬಾಬು ಬೆಲ್ದಾಳೆ ನಿರೂಪಿಸಿದರು.

ಭಾಲ್ಕಿ ಕ್ಷೇತ್ರ ಸೇರಿ ಬೀದರ್‌ ಜಿಲ್ಲೆಯನ್ನು ರಾಜ್ಯದಲ್ಲಿಯೇ ಮಾದರಿ ಜಿಲ್ಲೆಯನ್ನಾಗಿಸಲು ಜಿಲ್ಲೆಯ ಜನತೆ ನನಗೆ ಇನ್ನಷ್ಟು ಶಕ್ತಿ ತುಂಬಬೇಕು. ಆ ಕೆಲಸ ಆಗಬೇಕಾದರೆ ಲೋಕಸಭಾ ಕ್ಷೇತ್ರದ ಚುನಾವಣೆ ಕಣದಲ್ಲಿರುವ ಸಾಗರ ಖಂಡ್ರೆ ಅವರನ್ನು ಜಿಲ್ಲೆಯ ಮಠಾಧೀಶರು, ಮತದಾರರು ಆಶೀರ್ವದಿಸಬೇಕು.

ಈಶ್ವರ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವರು, ಬೀದರ್‌