ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಟ್ರಾಮಾ ಕೇರ್ ಸೆಂಟರ್ ನಿರ್ಮಾಣಕ್ಕೆ ವಿಶಾಲವಾದ ಜಮೀನಿನ ಅಗತ್ಯವಿದೆ. ಇದರಲ್ಲಿ ರಾಜಕೀಯ ಮಾಡದೆ ಮೆಡಿಕಲ್ ಕಾಲೇಜಿಗೆ ಸೇರಿದ ೨೦ ಎಕರೆ ಒತ್ತುವರಿ ತೆರವುಗೊಳಿಸಲು ಎರಡೂ ಸರ್ಕಾರಗಳು ಇಚ್ಚಾಶಕ್ತಿ ಪ್ರದರ್ಶಿಸಬೇಕು.
ಕನ್ನಡಪ್ರಭ ವಾರ್ತೆ ಮಂಡ್ಯ
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಟ್ರಾಮಾ ಕೇರ್ ಸೆಂಟರ್ ನಿರ್ಮಾಣಕ್ಕೆ ವಿಶಾಲವಾದ ಜಮೀನಿನ ಅಗತ್ಯವಿದೆ. ಇದರಲ್ಲಿ ರಾಜಕೀಯ ಮಾಡದೆ ಮೆಡಿಕಲ್ ಕಾಲೇಜಿಗೆ ಸೇರಿದ ೨೦ ಎಕರೆ ಒತ್ತುವರಿ ತೆರವುಗೊಳಿಸಲು ಎರಡೂ ಸರ್ಕಾರಗಳು ಇಚ್ಚಾಶಕ್ತಿ ಪ್ರದರ್ಶಿಸಬೇಕು ಎಂದು ಕನ್ನಡ ಸಂಘಟನೆಗಳ ಒಕ್ಕೂಟದ ಎಂ.ಬಿ.ನಾಗಣ್ಣಗೌಡ ಹಾಗೂ ಎಚ್.ಡಿ.ಜಯರಾಂ ಅವರು ಆಗ್ರಹಿಸಿದರು.ನಗರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಶಾಸಕ ರವಿಕುಮಾರ್ ಅವರು ಸಕಾರಾತ್ಮಕವಾಗಿ ಮುಂದಾಗಿರುವುದನ್ನು ಸ್ವಾಗತಿಸಿದ ಅವರು, ಈ ಬಗ್ಗೆ ಎರಡೂ ಸರ್ಕಾರಗಳೂ ರಾಜಕೀಯ ಇಚ್ಚಾಶಕ್ತಿ ವಹಿಸಿ ಕಾರ್ಯರೂಪಕ್ಕೆ ತರಬೇಕು ಎಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು. ಅಗತ್ಯ ನ್ಯಾಯಾಂಗ ಪ್ರಕ್ರಿಯೆ ನಡೆಸಿ ಒತ್ತುವರಿ ತೆರವುಗೊಳಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಇದರಿಂದ ಒಂದು ಮೆಡಿಕಲ್ ಕಾಲೇಜಿಗೆ ಇರಬೇಕಾದ ಶೈಕ್ಷಣಿಕ ವಾತಾವರಣ ಇಲ್ಲವಾಗಿದೆ. ವಿದ್ಯಾರ್ಥಿಗಳು ಕಾಲೇಜು ಬಿಟ್ಟರೆ ಕೊಠಡಿ ಸೇರುವಂತಹ, ಸಾರ್ವಜನಿಕರು, ಸಹಾಯಕರು ನಿಲ್ಲಲು ಸಾಧ್ಯವಾಗದಂತಹ ಇಕ್ಕಟ್ಟಾದ ವಾತಾವರಣದಲ್ಲಿ ಮೆಡಿಕಲ್ ಕಾಲೇಜನ್ನು ನಿರ್ವಹಿಸಲಾಗುತ್ತಿದೆ. ಇದೇ ಕಾರಣಕ್ಕೆ ಮಂಡ್ಯ ಮೆಡಿಕಲ್ ಕಾಲೇಜಿಗೆ ಹೆಚ್ಚುವರಿಯಾಗಿ ಲಭ್ಯವಾಗಬೇಕಿದ್ದ ೫೦ ವೈದ್ಯಕೀಯ ಸೀಟುಗಳು ಮಿಮ್ಸ್‌ನಿಂದ ಕೈತಪ್ಪಿ ಹೋಗಿವೆ. ಇದಕ್ಕೆ ಯಾರನ್ನು ಹೊಣೆಗಾರರನ್ನಾಗಿ ಮಾಡಬೇಕು?. ಜಿಲ್ಲಾಡಳಿತವನ್ನೇ ಇಲ್ಲವೇ ನಮ್ಮ ಜನಪ್ರತಿನಿಧಿಗಳನ್ನೇ ಎಂಬುದು ಯಕ್ಷಪ್ರಶ್ನೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ತಮಿಳು ಕಾಲೋಜನಿ ನಿವಾಸಿಗಳಿಗಾಗಿ ೩೬ ಕೋಟಿ ರು. ವೆಚ್ಚದಲ್ಲಿ ೫೭೬ ಮನಗೆಳನ್ನು ನಗರ ವ್ಯಾಪ್ತಿಯೊಳಗೆ ನಿರ್ಮಿಸಿದೆ. ಇದನ್ನು ಹಂಚಿಕೆ ಮಾಡುವ ಬದಲು ತನ್ನ ಅಸಹಾಯಕತೆ ಪ್ರದರ್ಶಿಸುತ್ತಿದೆ ಎಂದು ಆರೋಪಿಸಿದರು.ರಾಜ್ಯ ಹೈಕೋರ್ಟ್‌ನ ದ್ವಿಸದಸ್ಯ ಪೀಠ ಒತ್ತುವರಿ ತೆರವಿಗೆ ಸ್ಪಷ್ಟ ಆದೇಶ ನೀಡಿದೆ. ಇದನ್ನು ಮನದಟ್ಟು ಮಾಡಲು ಅಡ್ವೋಕೇಟ್ ಜನರಲ್‌ರನ್ನು ಈ ಪ್ರಕರಣದಲ್ಲಿ ಹಾಜರುಪಡಿಸಿ ಒತ್ತುವರಿ ತೆರವಿನ ಕುರಿತು ರಾಜ್ಯ ಸರ್ಕಾರ ತನ್ನ ಬದ್ಧತೆಯನ್ನು ತೋರಬೇಕಿದೆ ಎಂದು ಒತ್ತಾಯಿಸಿದರು.
ಇದು ಜಿಲ್ಲೆಯ ೨೦ ಲಕ್ಷಕ್ಕೂ ಹೆಚ್ಚಿನ ಜನರ ಆರೋಗ್ಯದ ಪ್ರಶ್ನೆಯಾಗಿದ್ದು, ಇದರಲ್ಲಿ ಯಾವುದೇ ಪಕ್ಷಗಳು ತಮ್ಮ ರಾಜಕೀಯವನ್ನು ಬದಿಗಿರಿಸಿ ಜಿಲ್ಲೆಯ ಪರವಾಗಿನ ರಾಜಕೀಯ ಇಚ್ಚಾಶಕ್ತಿಯನ್ನು ತೋರಬೇಕು. ಇಲ್ಲದಿದ್ದಲ್ಲಿ ಜನವರಿಯಿಂದ ಒತ್ತುವರಿ ತೆರವಿಗೆ ಆಗ್ರಹಿಸಿ ಅನಿರ್ದಿಷ್ಟ ಧರಣಿ ಆರಂಭಿಸಲಾಗುವುದು. ಈಗಾಗಲೇ ಈ ಹೋರಾಟಕ್ಕೆ ಜಿಲ್ಲೆಯ ೪೦ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ತೋರಿದ್ದು, ಮೆಡಿಕಲ್ ಕಾಲೇಜು ಜಮೀನು ಒತ್ತುವರಿ ಮಾಡಿಕೊಂಡಿರುವ ತಮಿಳು ಕಾಲೋನಿ ಸೇರಿದಂತೆ ಎಲ್ಲರೂ ಜಿಲ್ಲೆಯ ಹಿತದೃಷ್ಟಿಯಿಂದ ಸ್ವಯಂಪ್ರೇರಿತವಾಗಿ ಒತ್ತುವರಿ ತೆರವುಗೊಳಿಸುವಂತೆ ಆಗ್ರಹಿಸಿದರು.ಸಾಹಿತಿ ಪ್ರೊ.ಜಿ.ಟಿ.ವೀರಪ್ಪ, ಆಟೋ ಚಾಲಕರ ಸಂಘದ ಅಧ್ಯಕ್ಷ ವೆಂಕಟೇಶ್, ರೈತ ಸಂಘದ ತಾ.ಅಧ್ಯಕ್ಷ ಮಲ್ಲೀಗೆರೆ ಅಣ್ಣಯ್ಯ, ಕೆ.ಆರ್.ಎಸ್. ಪಕ್ಷದ ರಾಜ್ಯ ಸಂಘಟನ ಕಾರ್ಯದರ್ಶಿ ರಮೇಶ್‌ಗೌಡ, ಶಿವರಾಮ್ ಗೋಷ್ಠಿಯಲ್ಲಿದ್ದರು.