ಚಿತ್ರದುರ್ಗದ ಚಿತ್ರದುರ್ಗದ ಎಸ್‌ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಏರ್ಪಡಿಸಿದ್ದ ಸಾಧಕರೊಂದಿಗೆ ಸಂವಾದ ಕಾರ‍್ಯಕ್ರಮವನ್ನು ಸಚಿವ ಟಿ.ರ ಘುಮೂರ್ತಿ ಉದ್ಘಾಟಿಸಿದರು. ಬಿ.ಎ.ಲಿಂಗಾರೆಡ್ಡಿ ಇದ್ದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ವಿದ್ಯಾರ್ಥಿ ಜೀವನ ಸಾಧನೆಗೆ ಇಚ್ಛಾಶಕ್ತಿಯೇ ಅಡಿಪಾಯವಾಗಬೇಕು. ಆಗ ಮಾತ್ರ ಪೋಷಕರ ಕನಸುಗಳು ಸಾಕಾರಗೊಳ್ಳಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ಹೇಳಿದರು.ನಗರದ ಎಸ್‌ಆರ್‌ಎಸ್ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಏರ್ಪಡಿಸಿದ್ದ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸುಮ್ಮನೆ ಯಾವುದೂ ಘಟಿಸುವುದಿಲ್ಲ. ಕಠಿಣ ಪರಿಶ್ರಮ ಇದ್ದರೆ ಮಾತ್ರ ಸಾಧನೆ ಲೋಕ ತೆರೆದುಕೊಳ್ಳುತ್ತದೆ. ಭಯಮುಕ್ತ ವಾತಾವರಣವ ವಿದ್ಯಾರ್ಥಿಗಳೇ ಸೃಷ್ಟಿಸಿಕೊಂಡು ಸಾಧನೆಯ ಮೆಟ್ಟಿಲುಗಳ ಏರುತ್ತಾ ಹೋಗಬೇಕೆಂದರು.
ತಮ್ಮ ರಾಜಕೀಯ ಪ್ರವೇಶದ ಹಾದಿ ಹಾಗೂ ನಂತರದ ಅಭಿವೃದ್ಧಿ ಹಾದಿ ಸುಲಭವಾಗಿರಲಿಲ್ಲ. ಸರ್ಕಾರಿ ಉದ್ಯೋಗಕ್ಕೆ ರಾಜಿನಾಮೆ ಕೊಟ್ಟು ಜನರ ಸಂಕಷ್ಟಗಳಿಗೆ ಸ್ಪಂದಿಸುವ ಉದ್ದೇಶದಿಂದ ಶಾಸಕನಾದೆ. ನನ್ನೊಳಗಿನ ಇಚ್ಚಾಶಕ್ತಿ ಪ್ರತಿ ಹಂತದಲ್ಲಿಯೂ ಜಾಗೃತ ಸ್ಥಿತಿಯಲ್ಲಿತ್ತು. ಹಾಗಾಗಿಯೇ ಅಭಿವೃದ್ಧಿ ಪಥ ತೆರೆದುಕೊಂಡಿತು. ನಂತರ ಸಚಿವನಾಗಲು ಸಾಧ್ಯವಾಯಿತೆಂದು ರಘುಮೂರ್ತಿ ಹೇಳಿದರು.ಎಸ್‌ಆರ್‌ಎಸ್ ವಿದ್ಯಾಸಂಸ್ಥೆ ಗುಣಮಟ್ಟದ ಶಿಕ್ಷಣ ಹಾಗೂ ಫಲಿತಾಂಶದಿಂದ ರಾಜ್ಯದಲ್ಲಿಯೇ ಹೆಸರು ಮಾಡಿದೆ. ಇಲ್ಲಿ ಓದಿದ ಸಾವಿರಾರು ವಿದ್ಯಾರ್ಥಿಗಳು ಮೆಡಿಕಲ್ ಹಾಗೂ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಹೆಗ್ಗುರುತುಗಳ ಮೂಡಿಸುತ್ತಿದ್ದಾರೆ. ಹಿಂದೆ ಗುರು-ಮುಂದೆ ಗುರಿ ಇರಬೇಕು ಎಂಬ ಮಾರ್ಗದರ್ಶನವ ಎಸ್‌ಆರ್‌ಎಸ್ ಮನದಟ್ಟು ಮಾಡಿದೆ. ಓದಲು ಬಂದಿರುವ ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಬಿಟ್ಟರೆ ಬೇರೆ ಕಡೆ ಗಮನ ಹರಿಸಬಾರದು ಎಂದು ರಘುಮೂರ್ತಿ ಮನವಿ ಮಾಡಿದರು.
ಲಿಂಗಾರೆಡ್ಡಿಯವರು ಈ ಸಂಸ್ಥೆ ಕಟ್ಟುವಲ್ಲಿ ಹಗಲಿರುಳು ಶ್ರಮಿಸಿ ಯಶ ಕಂಡಿದ್ದಾರೆ. ಆದರೆ ಸಾಧನೆ ಎಂಬುದು ನಿಂತ ನೀರಾಗುವುದಿಲ್ಲ. ಅದು ಸದಾ ಹರಿಯುವ ಗುಣ ಹೊಂದಿರುತ್ತದೆ. ಸಂಸ್ಥೆಯನ್ನು ಮತ್ತಷ್ಟು ಕಟ್ಟಬೇಕು. ಶೈಕ್ಷಣಿಕ ವಲಯದಲ್ಲಿ ತನ್ನದೇ ಆದ ಛಾಪು ಮೂಡಿಸಬೇಕೆಂಬ ಛಲ ಒಡಮೂಡುತ್ತದೆ. ವಿದ್ಯಾರ್ಥಿಗಳಿಗೆ ಲಿಂಗಾರೆಡ್ಡಿ ಅವರ ಛಲ ಮಾರ್ಗದರ್ಶಿಯಾಗಬೇಕು. ಪಾಲಕರ ಕನಸು ನನಸು ಮಾಡುವ ಹೊಣೆಗಾರಿಕೆ ಯ ವಿದ್ಯಾರ್ಥಿಗಳು ಹೊರಬೇಕು ಎಂದರು.ಲಿಂಗಾರೆಡ್ಡಿ ಸೇರಿದಂತೆ ಹಲವರ ಹೋರಾಟದ ಫಲವಾಗಿ ಭದ್ರಾ ಮೇಲ್ದಂಡೆ ಯೋಜನೆ ಚಿತ್ರದುರ್ಗ ಜಿಲ್ಲೆಯಲ್ಲಿ ಜಾರಿಯಾಗಿದ್ದು ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಭದ್ರಾ ಮೇಲ್ದಂಡೆ ಯೋಜನೆಯಡಿ ಸೆಪ್ಟೆಂಬರ್ ಮೊದಲ ವಾರದಲ್ಲಿ ಗೊನೂರು ಕೆರೆಗೆ ನೀರು ಹರಿಯಲಿದೆ ಎಂದರು.
ಬೆಳಗಾವಿ ರಾಣಿ ಚೆನ್ನಮ್ಮ ವಿವಿ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ್ ಮಾತನಾಡಿ, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತಿನಲ್ಲಿ ಲಭ್ಯವಾಗುವ ಅವಕಾಶಗಳ ಸಮರ್ಥವಾಗಿ ಬಳಕೆ ಮಾಡಿಕೊಂಡು ಶೈಕ್ಷಣಿಕ ಉನ್ನತಿ ಸಾಧಿಸಬೇಕೆಂದರು.ಕೃತಕ ಬುದ್ದಿ ಮತ್ತೆ ಎಲ್ಲ ಕಡೆ ವ್ಯಾಪಿಸುತ್ತಿದೆ. ಎಸ್ ಆರ್ ಎಸ್ ಸಂಸ್ಥೆಯಲ್ಲಿ ಈ ಶಿಕ್ಷಣ ಬೋಧನೆಗೆ ಸಜ್ಜಾಗುವ ಇಂಗಿತ ವ್ಯಕ್ತವಾಗಿವೆ. ವಿದ್ಯಾರ್ಥಿಗಳು ಕಾಲ ಹರಣ ಮಾಡದೆ ಗ್ರಂಥಾಲಯಕ್ಕೆ ತೆರಳಿ ಮೂಲ ಪುಸ್ತಕಗಳ ಅಧ್ಯಯನ ಅಭ್ಯಾಸ ಬೆಳೆಸಿಕೊಳ್ಳಬೇಕು. ಮೊಬೈಲ್ ಗಳಿಂದ ದೂರವಿದ್ದು ಅಭ್ಯಾಸದ ಕಡೆ ಗಮನ ಹರಿಸಬೇಕೆಂದು ಸಲಹೆ ಮಾಡಿದರು.
ನೀಟ್,ಜೆಇಇ ಮತ್ತಿತರ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕೆ.ಎಂ.ಸುದರ್ಶನ್, ಡಿ.ಮಿಥುನ್,ಬಿ.ಸುಮಂತ್,ಎಸ್.ಜಿ.ಮಿಥುನ್, ತ್ಯಾಗರಾಜ್ ಹಾಗೂ ಸಚಿವ ಟಿ.ರಘುಮೂರ್ತಿ ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಎಸ್‌ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಚಿತ್ರದುರ್ಗ ಸರ್ಕಾರಿ ವಿಜ್ಞಾನ ಕಾಲೇಜು ನಿವೃತ್ತ ಪ್ರಾಚಾರ್ಯ ಪ್ರೊ.ಹೊನ್ನಾರೆಡ್ಡಿ,ಸಂಸ್ಥೆ ಉಪಾಧ್ಯಕ್ಷ ಬಿ.ಎಲ್ ಅಮೋಘ್, ಪ್ರಾಚಾರ‍್ಯ ಪ್ರೊ.ಸತ್ಯನಾರಾಯಣ, ಪ್ರೊ.ಶೇಖರ್‌ರೆಡ್ಡಿ ಇದ್ದರು.