ಅಭಿವೃದ್ಧಿಗೆ ಬಿಜೆಪಿ ಗೆಲ್ಲಿಸಿ: ರೂಪಾಲಿ ಎಸ್. ನಾಯ್ಕ

| Published : Apr 25 2024, 01:14 AM IST / Updated: Apr 25 2024, 11:04 AM IST

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ.

ಕಾರವಾರ: ದೇಶದ ಪ್ರಗತಿಗೆ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸೋಣ. ಕ್ಷೇತ್ರದ ಅಭಿವೃದ್ಧಿಗೆ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಗೆಲ್ಲಿಸೋಣ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್. ನಾಯ್ಕ ವಿನಂತಿಸಿದರು.

ಬುಧವಾರ ತಾಲೂಕಿನ ವಿವಿಧ ಬೂತ್ ಮಟ್ಟದಲ್ಲಿ ಪಕ್ಷದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರವಾಗಿ ಬಿರುಸಿನ ಪ್ರಚಾರ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ವಿಶ್ವದಲ್ಲಿ ನಮ್ಮ ದೇಶದ ಶಕ್ತಿಯನ್ನು ತೋರಿಸಿದ್ದಾರೆ. ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸೋಣ. ವಿಶ್ವದ ಅತಿ ಬಲಿಷ್ಠ ಶಕ್ತಿಯಾಗಿ ಭಾರತ ಹೊರಹೊಮ್ಮುವಂತೆ ಮಾಡುತ್ತಿರುವ ನರೇಂದ್ರ ಮೋದಿ ಅವರ ಅವಿರತ ಶ್ರಮಕ್ಕೆ ಕ್ಷೇತ್ರದಲ್ಲಿ ಕಾಗೇರಿ ಅವರನ್ನು ಗೆಲ್ಲಿಸುವ ಮೂಲಕ ನಮ್ಮ ಕೊಡುಗೆ ನೀಡೋಣ ಎಂದರು.

ಚಿತ್ತಾಕುಲ ಮಹಾಶಕ್ತಿ ಕೇಂದ್ರದ ಚಿತ್ತಾಕುಲ ಗ್ರಾಮ ಪಂಚಾಯಿತಿಯ ತಾರಿವಾಡ, ಕೊಂಕಣವಾಡ, ಮಡಿವಾಳ ಶಿಟ್ಟಾ, ದೇವಳವಾಡ, ನಾಕುದಾಮ ಶಿಟ್ಟಾ, ಸದಾ ಶಿವಗಡ ಕಿಲ್ಲಾ, ದೇವಬಾಗ, ಚಿಂಚೇವಾಡ, ಮಾಲದಾರವಾಡ, ಬೇತುನಾಯ್ಕವಾಡ, ನರಸಿಂಹಶಿಟ್ಟಾ, ಸೀಬರ್ಡಕಾಲನಿ, ಅರ್ಜುನ ಕೋಟ, ಕಣಸಗಿರಿಯಲ್ಲಿ ಪ್ರಚಾರ ನಡೆಸಿದರು.

ನಂತರ ಮಲ್ಲಾಪುರ ಮಹಾಶಕ್ತಿ ಕೇಂದ್ರದ ಘಾಡಸಾಯಿ ಗ್ರಾಮ ಪಂಚಾಯಿತಿಯ ಹಳಗಾ ಡೋಲನಲ್ಲಿ ಪ್ರಚಾರ ನಡೆಸಿದರು.

ಬುಧವಾರ ಸಂಜೆ ಚೆಂಡಿಯಾ ಮಹಾಶಕ್ತಿ ಕೇಂದ್ರದ ಶಿರವಾಡ ಗ್ರಾಮ ಪಂಚಾಯತಿಯ ಗಾಂವಕರವಾಡ, ದೇವತಿವಾಡ, ಶೇಜವಾಡ, ಮಖೇರಿಯಲ್ಲಿ ಪ್ರಚಾರ ನಡೆಸಿದರು.

ಈ ಸಂದರ್ಭದಲ್ಲಿ ಗ್ರಾಮೀಣ ಮಂಡಲದ ಅಧ್ಯಕ್ಷ ಸುಭಾಷ್ ಗುನಗಿ, ಗ್ರಾಮೀಣ ಕಾರ್ಯದರ್ಶಿ ಸೂರಜ ದೇಸಾಯಿ, ವಿವಿಧ ಬೂತ್ ಗಳ ಅಧ್ಯಕ್ಷರು, ಬೂತ್ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಬಿರುಸಿನ ಪ್ರಚಾರ...

ಉತ್ತರ ಕನ್ನಡದ ಕ್ಷೇತ್ರದ ಉದ್ದಗಲಕ್ಕೂ ಪಕ್ಷದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೊಂದಿಗೆ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ರೂಪಾಲಿ ಎಸ್. ನಾಯ್ಕ, ಈಗ ಬೂತ್ ಮಟ್ಟದಲ್ಲೂ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಕಾರ್ಯಕರ್ತರು, ಪದಾಧಿಕಾರಿಗಳ ಭಾರಿ ಶಕ್ತಿ ಪಕ್ಷಕ್ಕೆ ಇದೆ. ಪ್ರಚಾರಕ್ಕೆ ಹೋದಲ್ಲೆಲ್ಲ ಜನರ ಬೆಂಬಲ ವ್ಯಕ್ತವಾಗುತ್ತಿದೆ.