ದ.ಕ.ದಲ್ಲಿ ಮರಳಿ ಕಾಂಗ್ರೆಸ್‌ ಗೆಲ್ಲಿಸಿ: ಕಾರ್ಯಕರ್ತರಿಗೆ ಸಚಿವ ಜಾರ್ಜ್‌ ಕರೆ

| Published : Feb 05 2024, 01:48 AM IST

ದ.ಕ.ದಲ್ಲಿ ಮರಳಿ ಕಾಂಗ್ರೆಸ್‌ ಗೆಲ್ಲಿಸಿ: ಕಾರ್ಯಕರ್ತರಿಗೆ ಸಚಿವ ಜಾರ್ಜ್‌ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ದ.ಕ. ಜಿಲ್ಲೆಯಲ್ಲಿ ದಿ. ಆಸ್ಕರ್‌ ಫರ್ನಾಂಡಿಸ್‌ ಅವರಂಥ ಧೀಮಂತ ನಾಯಕರೆದುರು ಸಂಸದ ನಳಿನ್‌ ಕುಮಾರ್‌ ಕಟೀಲ್‌ ದೊಡ್ಡ ನಾಯಕರಾ ಎಂದು ಸಚಿವ ಜಾರ್ಜ್‌ ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರುದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಮನಸ್ಸು ಮಾಡಿದರೆ ಇಲ್ಲಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಕಷ್ಟವಲ್ಲ. ಈ ಬಾರಿ ಇದನ್ನು ಸವಾಲಾಗಿ ಸ್ವೀಕರಿಸಿ ಪಕ್ಷವನ್ನು ಗೆಲ್ಲಿಸಿ. ದ.ಕ.ವನ್ನು ಮರಳಿ ಕಾಂಗ್ರೆಸ್‌ನ ಭದ್ರ ಕೋಟೆಯನ್ನಾಗಿ ಪರಿವರ್ತಿಸಿ ಎಂದು ರಾಜ್ಯ ಇಂಧನ ಸಚಿವ ಕೆ.ಜೆ. ಜಾರ್ಜ್‌ ಕರೆ ನೀಡಿದ್ದಾರೆ.ಸುರತ್ಕಲ್‌ನಲ್ಲಿ ಭಾನುವಾರ ಸಂಜೆ ಬ್ಲಾಕ್‌ ಕಾಂಗ್ರೆಸ್‌ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ ಬಳಿಕ ರಾಜ್ಯದ ಜನತೆ ಪಕ್ಷವನ್ನು ಮೆಚ್ಚಿಕೊಂಡಿದ್ದಾರೆ, ಕರಾವಳಿಯಲ್ಲೂ ಜನರು ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ. ದ.ಕ. ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಕಾಂಗ್ರೆಸ್‌ ನಾಯಕರೇ ಹೆಚ್ಚಿದ್ದಾರೆ. ಎಲ್ಲರೂ ಮನಸ್ಸು ಮಾಡಿದರೆ ಪಕ್ಷದ ಗೆಲುವು ಶತಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರು.ದ.ಕ. ಜಿಲ್ಲೆಯಲ್ಲಿ ದಿ. ಆಸ್ಕರ್‌ ಫರ್ನಾಂಡಿಸ್‌ ಅವರಂಥ ಧೀಮಂತ ನಾಯಕರೆದುರು ಸಂಸದ ನಳಿನ್‌ ಕುಮಾರ್‌ ಕಟೀಲ್‌ ದೊಡ್ಡ ನಾಯಕರಾ ಎಂದು ಪ್ರಶ್ನಿಸಿದರು.ಗಾಂಧೀಜಿ ಕಂಡ ರಾಮರಾಜ್ಯವನ್ನು ಬಿಜೆಪಿ ಕಾಣಲು ಸಾಧ್ಯವಿಲ್ಲ ಎಂದ ಕೆ.ಜೆ. ಜಾರ್ಜ್‌, ನಾವು ರಾಮ, ಅಲ್ಲಾ, ಜೀಸಸ್‌ಗೆ ಯಾರಿಗೂ ವಿರೋಧವಿಲ್ಲ. ಗೌರವ ನೀಡಿ ಗೌರವ ಪಡೆದುಕೊಳ್ಳುವುದು ಪಕ್ಷದ ಸಿದ್ಧಾಂತ. ಕಳೆದ ವಿಧಾನಸಭೆ ಚುನಾವಣೆ ಸಂದರ್ಭ ರಾಜ್ಯದಲ್ಲಿ ಕಾಂಗ್ರೆಸ್‌ ಭರ್ಜರಿ ಬಹುಮತ ಪಡೆಯುತ್ತದೆ ಎಂದು ಯಾವುದೇ ಸಮೀಕ್ಷೆ ಹೇಳಿರಲಿಲ್ಲ. ಆದರೆ ಜನ ಅಧಿಕಾರ ಕೊಟ್ಟರು. ನಾವು ಜನಪರ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.ಕಳೆದ ಚುನಾವಣೆಯಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಇನಾಯತ್‌ ಅಲಿ ಅವರಿಗೆ ಕೊನೇ ಕ್ಷಣ ಟಿಕೆಟ್‌ ದೊರಕಿತ್ತು. ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಕಾರ್ಯಕರ್ತರಿಗೆ ಗೌರವ ನೀಡಿ, ಜನರ ಜತೆ ಬೆರೆತು ಕೆಲಸ ಮಾಡಿ, ಜಯ ಒಲಿಯಲಿದೆ ಎಂದು ಕಿವಿಮಾತು ಹೇಳಿದರು.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್‌ ಅಲಿ ಮಾತನಾಡಿ, ಕಾಂಗ್ರೆಸ್‌ ಪಕ್ಷವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಪಕ್ಷದ ಕಚೇರಿ ಉದ್ಘಾಟಿಸಲಾಗಿದೆ. ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಲಿದ್ದೇವೆ ಎಂದು ಹೇಳಿದರು.ಮಾಜಿ ಸಚಿವರಾದ ಬಿ.ರಮಾನಾಥ ರೈ, ವಿನಯ್‌ ಕುಮಾರ್‌ ಸೊರಕೆ ಮಾತನಾಡಿದರು. ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌, ಮಾಜಿ ಶಾಸಕರಾದ ಐವನ್‌ ಡಿಸೋಜ, ಜೆ.ಆರ್‌ ಲೋಬೊ, ಮನಪಾ ಸದಸ್ಯರು, ಬ್ಲಾಕ್‌ ಕಾಂಗ್ರೆಸ್‌ ಪದಾಧಿಕಾರಿಗಳು, ಯುವ ಕಾಂಗ್ರೆಸ್‌ ಪದಾಧಿಕಾರಿಗಳು ಮತ್ತಿತರರಿದ್ದರು. ಬ್ಲಾಕ್‌ ಅಧ್ಯಕ್ಷ ಪುರುಷೋತ್ತಮ್‌ ಚಿತ್ರಾಪುರ ಪ್ರಾಸ್ತಾವಿಕ ಮಾತುಗಳನ್ನಾಡಿದರು.