ಸಾರಾಂಶ
ಸಂಸದನ ಅವಧಿ ಪೂರ್ಣವಾಗುತ್ತಿದ್ದು, ಇದೀಗ ಪತ್ನಿ ಗಾಯತ್ರಿ ಸಿದ್ದೇಶ್ವರ ಬಿಜೆಪಿ ಅಭ್ಯರ್ಥಿಯಾಗಿ ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆ ಸ್ಪರ್ಧಿಸುತ್ತಿದ್ದು, ಮತದಾರರು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಇದು ಬಿಜೆಪಿಯ ಭದ್ರಕೋಟೆ ಎಂಬುದನ್ನು ತೋರಿಸಬೇಕು
ದಾವಣಗೆರೆ: ಸಂಸದನ ಅವಧಿ ಪೂರ್ಣವಾಗುತ್ತಿದ್ದು, ಇದೀಗ ಪತ್ನಿ ಗಾಯತ್ರಿ ಸಿದ್ದೇಶ್ವರ ಬಿಜೆಪಿ ಅಭ್ಯರ್ಥಿಯಾಗಿ ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆ ಸ್ಪರ್ಧಿಸುತ್ತಿದ್ದು, ಮತದಾರರು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಇದು ಬಿಜೆಪಿಯ ಭದ್ರಕೋಟೆ ಎಂಬುದನ್ನು ತೋರಿಸಬೇಕು ಎಂದು ಸಂಸದ, ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ ಕ್ಷೇತ್ರದ ಮತದಾರರಿಗೆ ಮನವಿ ಮಾಡಿದರು.
ಇಲ್ಲಿನ ದಾವಣಗೆರೆ-ಹರಿಹರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಸಮುದಾಯ ಭವನದಲ್ಲಿ ಬಿಜೆಪಿ ದಕ್ಷಿಣ ಮಂಡಲ ಹಮ್ಮಿಕೊಂಡಿದ್ದ ಪಕ್ಷದ ಸಂಸ್ಥಾಪನಾ ದಿನಾಚರಣೆ ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.ಒಂದೇ ಮನೆಯಲ್ಲಿ ಇಬ್ಬರು ಅಧಿಕಾರದಲ್ಲಿದ್ದು, ಇದೀಗ ಅದೇ ಮನೆಯಿಂದ ಮತ್ತೊಂದು ಅಧಿಕಾರಕ್ಕಾಗಿ ಕಾಂಗ್ರೆಸ್ಸಿನವರು ಚುನಾವಣೆಗೆ ಇಳಿದಿದೆ. ಇಂತಹ ಕುಟುಂಬ ರಾಜಕಾರಣವನ್ನು ಜನರೂ ಒಪ್ಪುವುದಿಲ್ಲ. ಗ್ಯಾರಂಟಿ ಯೋಜನೆಗೆ ಎಲ್ಲಾ ಹಣ ಖರ್ಚು ಮಾಡುತ್ತಿದ್ದಾರೆ. ಪರಿಶಿಷ್ಟರಿಗೆ ಮೀಸಲಿಟ್ಟಿದ್ದ 11,400 ಕೋಟಿ ರು.ಗೂ ಅಧಿಕ ಹಣವನ್ನು ಗ್ಯಾರಂಟಿಗೆ ಬಳಸುವ ಮೂಲಕ ದಲಿತರಿಗೆ, ಶೋಷಿತರಿಗೆ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡಿದೆ ದೂರಿದರು.ಇಡೀ ರಾಜ್ಯದಲ್ಲಿ ಕುಡಿಯುವ ನೀರಿನ ತೀವ್ರ ಹಾಹಾಕಾರ ಏರ್ಪಟ್ಟಿದೆ. ಜನ, ಜಾನುವಾರು ನೀರಿಲ್ಲದೇ ಸಾಯುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ನೀರಿಗಾಗಿ ಕೊಳವೆ ಬಾವಿ ಕೊರೆಸುವುದಕ್ಕೂ ರಾಜ್ಯ ಸರ್ಕಾರದ ಬಳಿ ಹಣ ಇಲ್ಲದಂತಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ ಮಾತನಾಡಿ, ಬಿಜೆಪಿ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಪಕ್ಷವನ್ನು ಸಶಕ್ತಗೊಳಿಸಬೇಕು. ದಾವಣಗೆರೆ ದಕ್ಷಿಣ ಕ್ಷೇತ್ರದ 211 ಬೂತ್‌ಗಳಲ್ಲಿ ಕಾಂಗ್ರೆಸ್ ಮುಂಚೂಣಿಯಲ್ಲಿರುವ ಬೂತ್‌ಗಳಲ್ಲಿ ಹೆಚ್ಚು ಶ್ರಮಹಾಕಬೇಕು. ದಕ್ಷಿಣ ಕ್ಷೇತ್ರದಿಂದ ಈ ಸಲ ಕನಿಷ್ಟ 25-30 ಸಾವಿರ ಮತಗಳ ಲೀಡ್‌ನ್ನು ಬಿಜೆಪಿ ಕೊಡಿಸುವ ಸಂಕಲ್ಪ ನಿಮ್ಮದಾಗಬೇಕು ಎಂದರು.ಶಾಸಕ ಬಿ.ಪಿ.ಹರೀಶ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಜೆಡಿಎಸ್ ಪಕ್ಷದ ಬೆಂಬಲದೊಂದಿಗೆ 1 ಲಕ್ಷ ಮತಗಳಿಗೂ ಅಧಿಕ ಅಂತರದಿಂದ ಗೆಲ್ಲುವುದು ನಿಶ್ಚಿತ. ದೇಶದ ಅಭಿವೃದ್ಧಿ, ಸುರಕ್ಷತೆಗೆ ಮತ್ತೆ ನರೇಂದ್ರ ಮೋದಿ ಪ್ರಧಾನಿಯಾಗಬೇಕು ಎಂದರು.
ಹಳ್ಳಿ ಶಿವಕುಮಾರ, ದೇವರಮನಿ ಶಿವಕುಮಾರ, ನಿಕಟ ಪೂರ್ವ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ ಹನಗವಾಡಿ, ವೈ.ಮಲ್ಲೇಶ, ಮಾಜಿ ಮೇಯರ್ ಎಸ್.ಟಿ.ವೀರೇಶ, ಬಿ.ಜಿ.ಅಜಯಕುಮಾರ, ರಮೇಶ ನಾಯ್ಕ, ಆರ್.ಎಲ್.ಶಿವಪ್ರಕಾಶ, ಎಚ್.ಸಿ.ಜಯಮ್ಮ, ಅನಿಲಕುಮಾರ ನಾಯ್ಕ, ಡಾ.ನಸೀರ್ ಅಹಮ್ಮದ್, ಸೋಗಿ ಶಾಂತಕುಮಾರ, ಜಿ.ಎಂ.ರುದ್ರೇಶ, ಮುರುಗೇಶ ಆರಾಧ್ಯ, ಬಿ.ಎಂ.ಸತೀಶ ಕೊಳೇನಹಳ್ಳಿ, ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ, ಜೆ.ಅಮಾನುಲ್ಲಾಖಾನ್, ಗಾಯತ್ರಿ ಹಾಲೇಶ, ಶಂಕರ ಇತರರು ಇದ್ದರು.