ಸಾರಾಂಶ
ರಾಜ್ಯಾಧ್ಯಕ್ಷರ ತಂಡದ ಗೆಲುವು ಖಚಿತ: ಡಾ.ರೇಣುಕಾದೇವಿ ವಿಶ್ವಾಸ । 27ರಂದು ಸಂಘದ ಚುನಾವಣೆ
ಕನ್ನಡಪ್ರಭ ವಾರ್ತೆ ಚಾಮರಾಜನಗರರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕಕ್ಕೆ ಡಿ.೨೭ ರಂದು ಚುನಾವಣೆ ನಡೆಯಲಿದ್ದು, ಮತ್ತೊಂದು ಅವಧಿಗೆ ರಾಜ್ಯಾಧ್ಯಕ್ಷರನ್ನಾಗಿ ತಾವೆಲ್ಲರೂ ಆಯ್ಕೆ ಮಾಡುವ ಮೂಲಕ ಸರ್ಕಾರಿ ನೌಕರರ ಹಿತ ರಕ್ಷಣೆಗೆ ದುಡಿಯಲು ಅನುಕೂಲ ಮಾಡಿಕೊಡಬೇಕು ಎಂದು ರಾಜ್ಯ ಸಂಘದ ಹಾಲಿ ಅಧ್ಯಕ್ಷ ಷಡಕ್ಷರಿ ಮನವಿ ಮಾಡಿದರು.
ನಗರದ ಮಾಯಾ ಗಾರ್ಡನ್‌ನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕದಿಂದ ರಾಜ್ಯಾಧ್ಯಕ್ಷ ಹಾಗೂ ರಾಜ್ಯ ಖಜಾಂಜಿ ಚುನಾವಣೆ ಪ್ರಚಾರಕ್ಕೆ ಆಗಮಿಸುತ್ತಿರುವ ಸಿ.ಎಸ್.ಷಡಕ್ಷರಿ ಮತ್ತು ಅವರ ತಂಡ, ಜಿಲ್ಲಾ ಹಾಗೂ ತಾಲೂಕು ಸಂಘಗಳ ಪದಾಧಿಕಾರಿಗಳನ್ನು ಭೇಟಿ ಮಾಡಿ ಸನ್ಮಾನಿಸಿ ಮತಯಾಚನೆ ಮಾಡಿ ಮಾತನಾಡಿದರು.ಕಳೆದ ಅವಧಿಯ ಐದು ವರ್ಷಗಳು ರಾಜ್ಯಾಧ್ಯಕ್ಷನಾಗಿ ಉತ್ತಮ ಕೆಲಸ ಮಾಡಿರುವ ತೃಪ್ತಿ ಇದೆ. ಇನ್ನು ಹೆಚ್ಚಿನ ಸರ್ಕಾರಿ ನೌಕರರ ಕುಂದುಕೊರತೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ನಮ್ಮ ತಂಡ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದೆ. ಕಳೆದ ಐದು ವರ್ಷಗಳ ನಮ್ಮ ಆಡಳಿತವನ್ನು ತಾವೆಲ್ಲರೂ ಗಮನಿಸಿದ್ದೀರಿ. ಬಹಳಷ್ಟು ಹೋರಾಟ ಮಾಡುವ ಜೊತೆಗೆ ನೌಕರರ ಹಿತರಕ್ಷಣೆಗೆ ಬದ್ಧರಾಗಿ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ್ದೇವೆ. ಹೀಗಾಗಿ ಮತ್ತೊಮ್ಮೆ ನಮಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಸಂಘದ ಅಸ್ಮಿತೆ, ಪ್ರಾದೇಶಿಕ ಸ್ಥಾನಮಾನ, ಸಾಮಾಜಿಕ ನ್ಯಾಯ, ಸಂಘದಲ್ಲಿ ಆರ್ಥಿಕ ಶಿಸ್ತು, ಪಾರದರ್ಶಕ ಆಡಳಿತ, ಮೂಲಭೂತ ಸೌಕರ್ಯಗಳ ವ್ಯವಸ್ಥೆ ಕಲ್ಪಿಸುವುದು, ೫ ವರ್ಷಗಳ ಸಂಘಟನೆಯ ಹೋರಾಟ, ಸಂಘದ ಸಾಮಾಜಿಕ ಕಾರ್ಯಕ್ರಮಗಳು, ಬೆಂಗಳೂರಿನಲ್ಲಿ ನೌಕರರ ಭವನ, ಸುಸಜ್ಜಿತ ವಸತಿ ವ್ಯವಸ್ಥೆ, ತಾಲೂಕು- ಜಿಲ್ಲಾ ಸಂಘದ ಕಟ್ಟಡ ನಿರ್ಮಾಣಕ್ಕೆ ಅನುದಾನ, ಭೌತಿಕ ಸೌಲಭ್ಯಗಳನ್ನು ನಿರ್ಮಿಸುವುದು, ನೌಕರರ ಪರವಾಗಿ ೨೫ಕ್ಕೂ ಹೆಚ್ಚು ಸರ್ಕಾರಿ ಆದೇಶಗಳು, ಸರ್ಕಾರಿ ನೌಕರರಿಗೆ ಶೇ.೧೭ ಮಧ್ಯಂತರ ಪರಿಹಾರ, ೭ನೇ ವೇತನ ಆಯೋಗದ ಜಾರಿಗೆ ಶ್ರಮಿಸುತ್ತೇವೆ ಎಂದರು.೨೦೨೬ಕ್ಕೆ ಕೇಂದ್ರ ಮಾದರಿ ವೇತನ ಜಾರಿ, ನಗದು ರಹಿತ ಆರೋಗ್ಯ ಚಿಕಿತ್ಸೆ ಯೋಜನೆ ಜಾರಿ ಸೇರಿದಂತೆ ನೌಕರರ ಸಮಸ್ಯೆಗಳು ಅವುಗಳ ನಿವಾರಣೆಗೆ ಕ್ರಮಗಳು ಜಾರಿ ಸೇರಿದಂತೆ ಶಿಕ್ಷಕರು ಹಾಗೂ ವಿವಿಧ ಇಲಾಖೆಗಳ ನೌಕರರ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಬಗೆಹರಿಸುವ ಶಕ್ತಿ ಮತ್ತು ಸಾಮರ್ಥ್ಯ ನಮ್ಮದಾಗಿದೆ ಎಂದರು.
ಸಂಘದ ಜಿಲ್ಲಾಧ್ಯಕ್ಷೆ ಡಾ.ರೇಣುಕಾದೇವಿ ಮಾತನಾಡಿ, ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ರಾಜ್ಯಾಧ್ಯಕ್ಷರಾಗಿ ಉತ್ತಮ ಸೇವೆ ಸಲ್ಲಿಸಿ, ಚಾಮರಾಜನಗರ ಜಿಲ್ಲೆಯ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿರುವ ಷಡಕ್ಷರಿ ಅವರಿಗೆ ನಮ್ಮ ಜಿಲ್ಲೆಯ ಸರ್ಕಾರಿ ನೌಕರರ ಸಂಘ ಸಂಪೂರ್ಣವಾಗಿ ಬೆಂಬಲಿಸಲಿದೆ. ಈಗಾಗಲೇ ನಮ್ಮ ಪದಾಧಿಕಾರಿಗಳು ಅವರಿಗೆ ಮತ ನೀಡಲು ನಿರ್ಧಾರ ಕೈಗೊಂಡಿದ್ದಾರೆ ಎಂದರು.